ಅಂಜಗಡ,ಉ-ಪ್ರ:ಮದುವೆಯಾಗದೆ ಪರದಾಡುತ್ತಿರುವ ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು, ನಕಲಿ ಮದುವೆಗಳ ಮೂಲಕ ಹಸಿಬಿಸಿ ವಂಚನೆ ಎಸಗುತ್ತಿದ್ದ ಅಂತರ-ಜಿಲ್ಲಾ ಕುಖ್ಯಾತ ದರೋಡೆಕೋರರ ಗುಂಪನ್ನು ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಬರದಾಹ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಗ್ಯಾಂಗ್‌ಗೆ ಸೇರಿದ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಂದ 19,650 ರೂಪಾಯಿ ನಗದು, ಚಿನ್ನ-ಬೆಳ್ಳಿಯ ಆಭರಣಗಳು, ಮದುವೆ ಸಾಮಗ್ರಿಗಳು ಹಾಗೂ ಎರಡು ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಪೊಲೀಸರ ಮಾಹಿತಿ ಪ್ರಕಾರ, ಮದುವೆಯಾಗದ ಯುವಕರಿಗೆ ವಾಟ್ಸಾಪ್ ಮೂಲಕ ಯುವತಿಯರ ಫೋಟೋಗಳನ್ನು ಕಳುಹಿಸಿ ಈ ಗ್ಯಾಂಗ್ ಮೊದಲಿಗೆ ತನ್ನ ಬಶೆ ಹೂಡುತ್ತದೆ. ಆ ನಂತರ ಯಾವುದಾದರೂ ದೇವಸ್ಥಾನದಲ್ಲಿ ಮದುವೆ ಮಾಡಿಸಿ, ಮದುವೆ ಮುಗಿದ ಕೂಡಲೇ ವಧು ಹಣ ಹಾಗೂ ಒಡವೆಗಳ ಸಮೇತ ತನ್ನ ನಕಲಿ ಕುಟುಂಬದವರೊಂದಿಗೆ ಪರಾರಿಯಾಗುತ್ತಾಳೆ.

​ಈ ಕಳ್ಳರ ಗ್ಯಾಂಗ್ ಅತ್ಯಂತ ಪಕ್ಕಾ ಯೋಜನೆಯೊಂದಿಗೆ ನಾಟಕವಾಡುತ್ತಿತ್ತು. ಮದುವೆ ಸಂದರ್ಭದಲ್ಲಿ ಗ್ಯಾಂಗ್‌ನ ಸದಸ್ಯರೇ ಯುವತಿಗೆ ತಂದೆ, ಅಣ್ಣ ಹಾಗೂ ಇತರೆ ಸಂಬಂಧಿಕರಂತೆ ನಟಿಸಿ ಹುಡುಗನ ಕಡೆಯವರ ನಂಬಿಕೆ ಗಳಿಸುತ್ತಿದ್ದರು. ಗ್ಯಾಂಗ್‌ನಲ್ಲಿದ್ದ ಓರ್ವ ಮಹಿಳೆ ವಧುವಾಗಿ ನಟಿಸಿದರೆ, ಮತ್ತೊಬ್ಬ ಮಹಿಳೆ ಆಕೆಯ ತಾಯಿಯಾಗಿ ಅಭಿನಯಿಸುತ್ತಿದ್ದಳು.

​ಹರ್ದೋಯ್ ಪ್ರದೇಶದ ರಾಂಬಿಲಾಷ್ ಎಂಬುವವರ ದೂರಿನ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಅವರ ಮಗ ರಾಜ್‌ಕುಮಾರ್‌ಗೆ ಮದುವೆ ಮಾಡಿಸುವುದಾಗಿ ನಂಬಿಸಿದ ಈ ಗ್ಯಾಂಗ್, ಬಂದುವಾ ಮಹಾದೇವ್ ದೇವಸ್ಥಾನದಲ್ಲಿ ವಿವಾಹ ನೆರವೇರಿಸಿತ್ತು. ಮದುವೆ ಕಾಣಿಕೆಯಾಗಿ ವಧುವಿಗೆ ಮೂಗುತಿ ಹಾಗೂ 80,000 ರೂಪಾಯಿ ನಗದು ನೀಡಲಾಗಿತ್ತು. ಆದರೆ ಮದುವೆ ಮುಗಿದ ಬಳಿಕ ರಾಜ್‌ಕುಮಾರ್ ವಧುವನ್ನು ಕರೆದುಕೊಂಡು ಮನೆಗೆ ಹೊರಟಾಗ, ದಾರಿಯಲ್ಲಿ ಬಂದುವಾ ಮೋಡ್ ಬಳಿ ವಧುವಿನ ತಂದೆ ಮತ್ತು ಸಹೋದರನಾಗಿ ನಟಿಸಿದ್ದ ವ್ಯಕ್ತಿಗಳು ರಾಜ್‌ಕುಮಾರ್‌ನನ್ನು ಬಲವಂತವಾಗಿ ವಾಹನದಿಂದ ಕೆಳಗಿಳಿಸಿದರು. ತಕ್ಷಣ ವಧು ಮತ್ತು ಆಕೆಯ ನಕಲಿ ಕುಟುಂಬದ ಸದಸ್ಯರು ನಗದು ಹಾಗೂ ಒಡವೆಗಳೊಂದಿಗೆ ಕಾರಿನಲ್ಲಿ ಪರಾರಿಯಾದರು.

​ಸಂತ್ರಸ್ಥರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಬರದಾಹ ಪೊಲೀಸರು ವಿಶೇಷ ನಿಗಾ ಇರಿಸಿ, ಸೆಪ್ಟೆಂಬರ್ 11ರಂದು ಕೋದಹ್ರಾ ಚೌರಸ್ತೆಯ ಬಳಿ ಆರೋಪಿಗಳನ್ನು ಸುತ್ತುವರೆದು ಏಳು ಜನರನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಇವರ ಮೇಲೆ ಹಳೆಯ ಅಪರಾಧ ಹಿನ್ನೆಲೆಯಿರುವುದು ಕೂಡ ತಿಳಿದುಬಂದಿದೆ. ಈ ಗ್ಯಾಂಗ್ ಇದುವರೆಗೆ ಎಷ್ಟು ಮಂದಿಗೆ ವಂಚಿಸಿದೆ ಎಂಬ ಕೋನದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಸೋಷಿಯಲ್ ಮಿಡಿಯಾ)

LEAVE A REPLY

Please enter your comment!
Please enter your name here