ಬೆಂಗಳೂರು:ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ ಬಿ ದಿನೇಶ್ ಅವರನ್ನು ನೋಡಲು ಹೋಗಿದ್ದೆ. ಅವರ ಟೇಬಲ್ ಮೇಲಿದ್ದ ಈ ಲಗ್ನ ಪತ್ರಿಕೆ ನನ್ನ ಕೈಗಿಟ್ಟು, “ಇದರಲ್ಲೇನೋ ವಿಶೇಷ ಇದೆ, ನೋಡಿ ಅಂದ್ರು.”
ನೋಡಿದೆ, ಕ್ಷಣ ಮಾತ್ರದಲ್ಲಿ ಆ ‘ವಿಶೇಷ’ ಗಮನಿಸಿದೆ, ಬಹಳ ಖುಷಿ ಆಯ್ತು!
ಜಯದೇವ ಆಸ್ಪತ್ರೆ ಐಸಿಯು ನರ್ಸಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಯುವತಿ, ನರ್ಸಿಂಗ್ ಪದವೀಧರೆ ಎಂ ಲಕ್ಷ್ಮೀ ಅದೇ ಜಿಲ್ಲೆ ಕೊಳ್ಳೇಗಾಲದ ರಾಜು ಕೆ ಎಂಬ ರೈತ ಯುವಕನನ್ನು ಮದುವೆ ಆಗುತ್ತಿರುವುದರ ಜತೆಗೆ ಆತನ ಡೆಸಿಗ್ನೆಷನ್ ‘ ‘ರೈತ’ ಅಂತ ಮದುವೆ ಆಮಂತ್ರಣ ಪತ್ರದಲ್ಲಿ ಹೆಸರಿನ ಮುಂದೆ ಬ್ರಾಕೆಟ್ ನಲ್ಲಿ ಹಾಕಿಸಿರೋದು ನೋಡಿ ನಿಜಕ್ಕೂ ಹೆಮ್ಮೆ ಅನ್ನಿಸಿತು.
“ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ. ಹೆಣ್ಣು ಮಕ್ಕಳು ರೈತರನ್ನು ಮದುವೆ ಆಗಲ್ಲ ಅಂತಾರೆ. ನಮ್ಮೂರಲ್ಲಿ ಕೃಷಿ ಮಾಡ್ಕೊಂಡಿರೋ ಯುವಕರು ಬ್ರಹಚಾರಿಗಳಾಗೆ ಉಳಿದವ್ರೆ, ಮದುವೆ ಆಗ್ತಿಲ್ಲ ಅಂತ ಗೊಳೋ ಅಂತ ಅಳ್ತಾವ್ರೆ” ಅನ್ನೋ ಅನೇಕರನ್ನು ನೋಡಿದ್ದೇನೆ.
ಇತ್ತೀಚಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಪಿರಿಯಾಪಟ್ಟಣದಲ್ಲಿ ಪ್ರಜಾಸೇವೆ ಕಾರ್ಯಕ್ರಮ ಮಾಡಿದಾಗ ಅಲ್ಲೊಬ್ಬ ರೈತ ಯುವಕ, “ಅಣ್ಣಾ ಹೆಂಗಾದ್ರೂ ಮಾಡಿಸಿ ನನಗೆ ಮದುವೆ ಮಾಡಿಸಿ, ನಾನು ಬೇಸಾಯ ಮಾಡಿಕೊಂಡಿದ್ದೀನಿ ಅಂತ ಯಾರೂ ಮದುವೆ ಆಯ್ತಾ ಇಲ್ಲ, ನನ್ನ ಈ ಸಮಸ್ಯೆ ಪರಿಹಾರ ಮಾಡಿ” ಅಂತ ಅರ್ಜಿ ಕೊಟ್ಟ.
“ಮಾದಪ್ಪ, ನಮಗೆ ಮದುವೆ ಮಾಡಿಸಪ್ಪ” ಅಂತ ಮಂಡ್ಯದ ಮಳವಳ್ಳಿಯ ಒಂದಷ್ಟು ರೈತ ಯುವಕರು ಮಲೆಮಹದೇಶ್ವರನಿಗೆ ಹರಕೆ ಹೊತ್ತು ಕಾಲ್ನಡಿಗೆಯಲ್ಲೇ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿದ್ದರು.
ಇವೆಲ್ಲ ಕೇಳೋಕೆ, ನೋಡೋಕೆ ತಮಾಷೆ ಅನ್ನಿಸಿದ್ರೂ ಇದೊಂದು ಸೀರಿಯಸ್ ಪ್ರಾಬ್ಲಮ್. ಒಂದು ಕಡೆ, ಹಿಂದೆ ಅಪ್ಪ-ಅಮ್ಮನ ಗಂಡು ಮಕ್ಕಳ ವ್ಯಾಮೋಹಕ್ಕೆ ಹೆಣ್ಣುಭ್ರೂಣ ಹತ್ಯೆಗಳು ವ್ಯಾಪಕವಾಗಿ ನಡೆದಿದ್ದರಿಂದ ಮುಂದೆ ಗಂಡು-ಹೆಣ್ಣು ಮಕ್ಕಳ ಅನುಪಾತ ತೀರಾ ವ್ಯತ್ಯಾಸವಾಗಿ ಗಂಡು ಮಕ್ಕಳಿಗೆ ಹೆಣ್ಣು ಸಿಗೋದೇ ಕಷ್ಟವಾಯ್ತು. ಇದರ ಜತೆಗೆ ಸಿಟಿ ವ್ಯಾಮೋಹಕ್ಕೆ ಬಿದ್ದ ಹಳ್ಳಿ ಮತ್ತು ಸಿಟಿ ಹೆಣ್ಣು ಮಕ್ಕಳು, ಅವರ ಅಪ್ಪ-ಅಮ್ಮಂದಿರು, “ಕೃಷಿ ಮಾಡೋರಿಗೆ ಅಷ್ಟಾಗಿ ಆದಾಯ ಇರಲ್ಲ, ಹಳ್ಳಿಯಲ್ಲೇ ಬದುಕು ಕಳೆಯಬೇಕಾಗುತ್ತದೆ, ಸಿಟಿ ಲೈಫ್ ಸಿಗಲ್ಲ ಅಂತ ರೈತ ಯುವಕರ ಬಗ್ಗೆ ಮೂಗು ಮುರಿದಿರೋದ್ರಿಂದ ಅವರ ಸ್ಥಿತಿ ಚಿಂತಾಕ್ರಾಂತವಾಗಿದೆ.
ಇದೇ ಸಬ್ಜೆಕ್ಟ್ ಇಟ್ಕೊಂಡು ಇತ್ತೀಚಿಗೆ ಬಂದ ‘ಪ್ರೇಮದ ಊರಲಿ’ ಸಿನೆಮಾ ಗ್ರಾಂಡ್ ಸಕ್ಸಸ್ ಕೂಡ ಆಗಿದೆ.
ಇಂತ ಹೊತ್ತಲ್ಲಿ ಜಯದೇವ ಆಸ್ಪತ್ರೆಯ ಹೆಣ್ಣುಮಗಳು ಲಕ್ಷ್ಮೀ ರೈತ ಯುವಕನನ್ನು ವರಿಸಿ ನಿಜಬದುಕಿನಲ್ಲಿ ಆದರ್ಶ ಮೆರೆದಿದ್ದಾರೆ. ಅವರ ಬದುಕು ಬಂಗಾರವಾಗಲಿ..!(ಸಂಗ್ರಹ:ತ್ಯಾಗರಾಜ್ ಪುಟ್ಟಪ್ಪ ಫೇಸ್ಬುಕ್)





