ಬೆಂಗಳೂರು:ರಾಜಕೀಯ ಪ್ರಭಾವ ಮತ್ತು ದೊಡ್ಡ ದೊಡ್ಡ ನಾಯಕರ ಜೊತೆಗಿನ ಒಡನಾಟದ ಮುಖವಾಡ ಧರಿಸಿ ಮಹಿಳೆಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿ, ಲೈಂಗಿಕ ಕಿರುಕುಳ ನೀಡಿದ ಭೀಕರ ವಂಚನೆ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

​ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ನಂಬಿಸಿ, ವಿಧಾನ ಪರಿಷತ್ (MLC) ಸದಸ್ಯತ್ವ ಕೊಡಿಸುವುದಾಗಿ ಮಂಗಳೂರು ಮೂಲದ ಮಹಿಳೆಗೆ ಬರೋಬ್ಬರಿ 1.50 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

​ಮೂಲಗಳ ಪ್ರಕಾರ, ಮುಖ್ಯ ಆರೋಪಿ ಯರ್ರಿಸ್ವಾಮಿ ಎಂಬಾತ ತಾನು ಪ್ರಭಾವಿ ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡಿದ್ದ. ತನ್ನ ಬಳಿ ಇರುವ ಹಿರಿಯ ರಾಜಕಾರಣಿಗಳ ಜೊತೆಗಿನ ಫೋಟೋಗಳು ಮತ್ತು ಸಂಪರ್ಕಗಳನ್ನು ತೋರಿಸಿ ಸಂತ್ರಸ್ತ ಮಹಿಳೆಯ ನಂಬಿಕೆ ಗಿಟ್ಟಿಸಿಕೊಂಡಿದ್ದ. ಬಳಿಕ MLC ಸೀಟ್ ಕೊಡಿಸಬೇಕಾದರೆ 5 ಕೋಟಿ ರೂಪಾಯಿ ನೀಡಬೇಕು ಎಂದು ಡೀಲ್ ಕುದುರಿಸಿದ್ದ.

​ಆರೋಪಿಯ ಮಾತುಗಳನ್ನು ನಿಜವೆಂದು ನಂಬಿದ ಮಹಿಳೆ, 2024ರ ಆಗಸ್ಟ್‌ನಿಂದ 2025ರ ಜನವರಿ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 1,50,00,000 (ಒಂದೂವರೆ ಕೋಟಿ) ರೂಪಾಯಿ ಹಣ ನೀಡಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಆರೋಪಿ ಯರ್ರಿಸ್ವಾಮಿಯ ಸೂಚನೆಯಂತೆ ಆತನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಎಂಬುವವರು ಈ ಹಣವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

​ದೆಹಲಿಯಲ್ಲಿ ಲೈಂಗಿಕ ಕಿರುಕುಳದ ಗಂಭೀರ ಆರೋಪ:

​ಕೇವಲ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದಷ್ಟೇ ಅಲ್ಲದೆ, AICC ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಮಹಿಳೆಯನ್ನು ನವದೆಹಲಿಗೆ ಕರೆದೊಯ್ದಿದ್ದ ಯರ್ರಿಸ್ವಾಮಿ, ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

​ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ:

​ಹಣವೂ ಕಳೆದುಕೊಂಡು, ಯಾವುದೇ ಸ್ಥಾನವೂ ಸಿಗದೇ ವಂಚನೆಗೊಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ಧೈರ್ಯಗೆಡದ ಸಂತ್ರಸ್ತ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸಂತ್ರಸ್ತೆಯ ರುಜುವಾತಿನ ಆಧಾರದ ಮೇಲೆ ಪೊಲೀಸರು ಮುಖ್ಯ ಆರೋಪಿ ಯರ್ರಿಸ್ವಾಮಿ, ಸಹಚರರಾದ ಬಸವರಾಜ್ ಹಾಗೂ ಸಿದ್ದರಾಜು ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

​ರಾಜಕೀಯ ಪ್ರಭಾವದ ಹೆಸರಿನಲ್ಲಿ ನಡೆದ ಈ ಕೋಟಿ ಕೋಟಿ ವಂಚನೆ ಜಾಲದ ಹಿಂದೆ ಇನ್ಯಾವ ಪ್ರಭಾವಿ ನಾಯಕರ ಕೈವಾಡವಿದೆ ಹಾಗೂ ಪ್ರಕರಣದಲ್ಲಿ ಇನ್ನು ಯಾರಲ್ಲ ಭಾಗಿಯಾಗಿದ್ದಾರೆ ಎಂಬ ಸತ್ಯ ಸದ್ಯದಲ್ಲೇ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

LEAVE A REPLY

Please enter your comment!
Please enter your name here