ಬಾಗಲಕೋಟೆ ಜಿಲ್ಲೆ| ರಬಕವಿ-ಬನಹಟ್ಟಿ: ಪೊಲೀಸ್ ಠಾಣೆಗೆ ದೂರು ನೀಡಿದ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಪೂರ್ವಯೋಜಿತವಾಗಿ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಸಿರಾಜ್ ತಂದೆ ಜಮಾಲ್ಸಾಬ್ ಹೊರಟ್ಟಿ ಆರೋಪಿಸಿದ್ದಾರೆ.
ದೂರುದಾರ ಸಿರಾಜ್ ಹೊರಟ್ಟಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಕಳೆದ 14-15 ವರ್ಷಗಳಿಂದ ವಕ್ಫ್/ಕಮಿಟಿ ಬೋರ್ಡ್‌ನಲ್ಲಿ ಭಂಗಿ ಸಾಹೇಬ್ ಅವರ ಸರ್ಕಾರಿ ವೇತನಕ್ಕೆ ಸಂಬಂಧಿಸಿದಂತೆ ನಡೆದಿರುವುದಾಗಿ ಆರೋಪಿಸಲಾದ ಅವ್ಯವಹಾರ ಹಾಗೂ ವಂಚನೆ ಕುರಿತು ಮತ್ತು ದಿನಾಂಕ 25/11/2026ರಂದು ಹೊಸೂರು ದರ್ಗಾ ಎದುರು ನಡೆದ ಹಜರತ್ ಟಿಪ್ಪು ಸುಲ್ತಾನ್ ಕಾರ್ಯಕ್ರಮದಲ್ಲಿ ನಡೆದ ಪ್ರಚೋದನಕಾರಿ ಭಾಷಣದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಮೇಲೆ ದ್ವೇಷ ಸಾಧಿಸಿ ಹಲ್ಲೆ ನಡೆಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 26/11/2026ರಂದು ರಾತ್ರಿ ಸುಮಾರು 10:20 ಗಂಟೆಗೆ ಎಸ್‌ಬಿಐ ಬ್ಯಾಂಕ್ ಎದುರಿನಲ್ಲಿರುವ ತಮ್ಮ ಫಾಸ್ಟ್ ಫುಡ್ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಎರಡು ಬೈಕ್‌ಗಳಲ್ಲಿ ಬಂದ ಸುಮಾರು ಆರು ಮಂದಿ ರಾಮಪುರ ಕ್ರಾಸಿಂಗ್ ಬಳಿ ತಮ್ಮನ್ನು ಹಿಂಬಾಲಿಸಿದ್ದಾರೆ. ಬಳಿಕ ಅಕ್ಷಯ ಮೆಡಿಕಲ್ ಎದುರು ಸುತ್ತುವರಿದು ಕಲ್ಲು ಹಾಗೂ ಬಡಿಗೆಗಳಿಂದ ಬೆನ್ನಿಗೆ ಮತ್ತು ತಲೆಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಎಡಗಣ್ಣಿನ ಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾರೆ ಎಂದು ಸಿರಾಜ್ ಆರೋಪಿಸಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಸಿರಾಜ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಗೋಕಾಕದ ಮೊಹಸಿನ್ ಸೇರಿದಂತೆ ಇತರ ಕೆಲವರು ಅಲ್ಲಿಗೂ ಬಂದು ತಮ್ಮನ್ನು ಹಿಂಬಾಲಿಸಿ ಬೆದರಿಕೆ ಹಾಕುವ ಉದ್ದೇಶ ಹೊಂದಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಅಸ್ಲಂ ಹಫೀಜ್ ಜಮಖಂಡಿ, ಸಾಹಿಬ್ ಹಫೀಜ್ ಜಮಖಂಡಿ, ಆಸಿಫ್ ಪಟ್ಟೆ, ಅರ್ಮಾನ್ ಧಾರವಾಡ, ಸಾಜಿದ್ ಹೊರಟ್ಟಿ, ಸಿರಾಜ್ ನಬಿಸಾಬ್ ಮುಧೋಳ, ಅಮನ್ ಗೊಡೂಸಾಬ್ ಕರಲಟ್ಟಿ, ಸಾಹಿಲ್ ನಾಗಠಾಣ, ತೌಫಿಕ್ ಜಮಾಲ್ಸಾ ಹೊರಟ್ಟಿ, ರಂಜಾನ್ ಚಾಂದಸಾಬ್ ಹೊರಟ್ಟಿ, ರಂಜಾನ್ ಗಡೆಕರ್, ಮೊಹಸಿನ್ ಗೋಕಾಕ ಸೇರಿದಂತೆ ಇತರರ ವಿರುದ್ಧ ದೂರುದಾರರು ಆರೋಪ ಮಾಡಿದ್ದಾರೆ.
ತಕ್ಷಣ ಕ್ರಮಕ್ಕೆ ಆಗ್ರಹ
ತಮ್ಮ ಎಡಗಣ್ಣು, ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಜೀವಕ್ಕೆ ಅಪಾಯವಿದೆ ಎಂದು ತಿಳಿಸಿರುವ ಸಿರಾಜ್, ಆಸ್ಪತ್ರೆಗೆ ಆಗಮಿಸಿ ತಮ್ಮ ಹೇಳಿಕೆ ದಾಖಲಿಸಿಕೊಳ್ಳಬೇಕು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಘಟನೆಯ ಕುರಿತು ಪೊಲೀಸರ ಅಧಿಕೃತ ಪ್ರತಿಕ್ರಿಯೆ ಹಾಗೂ ತನಿಖೆಯ ವಿವರಗಳು ಲಭ್ಯವಾದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತಿಳಿದುಬರಬೇಕಿದೆ.





