ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗೃಹಪ್ರವೇಶದ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗವಹಿಸಿದ್ದ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಶಾಸಕರ ಭಾಗವಹಿಸುವಿಕೆಗೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತಿರುಗೇಟು ನೀಡಿದ್ದಾರೆ.
“ಬಿಜೆಪಿ ಶಾಸಕರು ಔತಣಕೂಟಕ್ಕೆ ಹೋಗಬಾರದು ಎಂದು ಪಕ್ಷ ನಿರ್ಧರಿಸಿದ್ದರೆ ಮೊದಲೇ ತಿಳಿಸಬೇಕಿತ್ತು. ಒಂದು ದಿನ ಮುಂಚಿತವಾಗಿ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸಂದೇಶ ಹಾಕಿದ್ದರೆ ಯಾರೂ ಹೋಗುತ್ತಿರಲಿಲ್ಲ” ಎಂದು ರೆಡ್ಡಿ ಹೇಳಿದ್ದಾರೆ.
“ನಾನು ಶಾಸಕನಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಗೃಹಪ್ರವೇಶಕ್ಕೆ ಹೋಗಿದ್ದೇನೆ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೋಗಿಲ್ಲ. ಆಹ್ವಾನಿಸಿದ ಹಿನ್ನೆಲೆಯಲ್ಲಿ ಶುಭಾಶಯ ತಿಳಿಸಲು ಹೋಗಿದ್ದೇನೆ” ಎಂದು ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
“ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿಯಲ್ಲ ನಾನು. ನೇರವಾಗಿ ರಾಜಕಾರಣ ಮಾಡುವವನು” ಎಂದು ಹೇಳುವ ಮೂಲಕ ವಿಜಯೇಂದ್ರ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಔತಣಕೂಟದ ಖರ್ಚು ವೆಚ್ಚಗಳ ಬಗ್ಗೆ ಪ್ರಶ್ನೆಗಳಿದ್ದರೆ ಸದನದಲ್ಲಿ ಪ್ರಶ್ನಿಸಬಹುದು ಎಂದಿರುವ ರೆಡ್ಡಿ, ಈ ವಿಚಾರದಲ್ಲಿ ಬಿಜೆಪಿ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಮುನ್ನೆಲೆಗೆ ತಂದಿದ್ದಾರೆ.





