ಕೆಂಗೇರಿ : ವೈಭವದ ಐತಿಹಾಸಿಕ ಕೆಂಗೇರಿ ಯಲ್ಲಮ್ಮ ದೇವಿಯ 50ನೇ ವರ್ಷದ ಕರಗೋತ್ಸವ ಶನಿವಾರ ತಡರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಸಂಪ್ರದಾಯದಂತೆ ಮಧ್ಯರಾತ್ರಿ 1.45ಕ್ಕೆ ಕರಗವನ್ನು ಹೊತ್ತ ಕರಗಧಾರಿ ಮುನಿಆಂಜೀನಪ್ಪ ಅವರು ದೇವಿಯ ಗರ್ಭಗುಡಿಯಿಂದ ಹೊರಬಂದು ದೇವಾಲಯಕ್ಕೆ ಮೂರು ಪ್ರದಕ್ಷಿಣೆ ಸಲ್ಲಿಸಿ ನಗರ ಪ್ರದಕ್ಷಿಣೆಗೆ ಹೊರಟ ಸಂದರ್ಭದಲ್ಲಿ ಈ ಕ್ಷಣಕ್ಕಾಗಿ ಕಾಯುತ್ತಿದ್ದ ಸಹಸ್ರಾರು ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತಾ, ಕರಗಕ್ಕೆ ಮಲ್ಲಿಗೆ ಹೂವಿನ ಪುಷ್ಪಾರ್ಚನೆ ಮಾಡಿದರು.
ಕೆಂಗೇರಿಯ ರಾಜಬೀದಿಗಳಲ್ಲಿ ಸಾಗಿದ ಕರಗ ರಾಮದೇವರು, ಆಂಜನೇಯ ಸ್ವಾಮಿ, ಮುಸ್ಲಿಮರ ದರ್ಗಾ, ಮಾರಮ್ಮ, ಕೋಟೆ ಸೋಮೇಶ್ವರ, ಅಂಬಾ ಭವಾನಿ, ಕಸ್ತೂರಮ್ಮನ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಿಗೆ ತೆರಳಿ ಹಾಗೂ ದಾರಿಯುದ್ದಕ್ಕೂ ಭಕ್ತರ ಪೂಜೆ ಸ್ವೀಕರಿಸಿ ಭಾನುವಾರ ಬೆಳಿಗ್ಗೆ 11.40ರ ವೇಳೆಗೆ ದೇವಾಲಯ ಪ್ರವೇಶಿಸಿತು.
ಕರಗದ ಪ್ರಯುಕ್ತ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಯಲ್ಲಮ್ಮ ದೇವಸ್ಥಾನವನ್ನು ವಿವಿಧ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕರಗ ಸಾಗುವ ದಾರಿಯುದ್ದಕ್ಕೂ ವಿದ್ಯುತ್ ದೀಪ, ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಕರಗ ಮಹೋತ್ಸವದ ಅಂಗವಾಗಿ ಯಕ್ಷಗಾನ, ಸಾವಿರಾರು ಮಾತೆಯರಿಂದ ಲಲಿತಾ ಸಹಸ್ರನಾಮ ಪಠಣ, ಕೀಲು ಕುದುರೆ, ಪಟದ ಕುಣಿತ, ವೀರಗಾಸೆ, ಪೂಜಾ ಕುಣಿತ, ಚಂಡೆ ವಾದ್ಯ, ಡೊಳ್ಳು, ನಾದಸ್ವರ, ತಮಟೆ ವಾದ್ಯ ಕಲಾವಿದರ ಪ್ರದರ್ಶನ, ಮಂಗಳವಾದ್ಯ, ವಾದ್ಯ ಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೆಂಗೇರಿ ರಾಜಬೀದಿಯಲ್ಲಿ ಸುತ್ತಮುತ್ತಲಿನ ದೇವಾಲಯದ ಪಲ್ಲಕ್ಕಿ ಉತ್ಸವ ಸಾಗಿ ಬಂದವು.
ಗಣೇಶ ಆಟದ ಮೈದಾನದಲ್ಲಿ ಕೆಂಗೇರಿ ಯುವ ಸಮೂಹದ ವತಿಯಿಂದ ಪ್ರಪ್ರಥಮ ಬಾರಿಗೆ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಪೋಲಿಸ್, ಬೆಸ್ಕಾಂ, ಜಿಬಿಎ ಅಧಿಕಾರಿಗಳು ಸಮಗ್ರ ಕಾರ್ಯ ನಿರ್ವಹಿಸಿ ಶಾಂತಿಯುತ ವೈಭವದ ಕರಗಕ್ಕೆ ಸಾಕ್ಷಿಯಾದರು.ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಧನ್ಯತಾ ಭಾವ ಮೆರೆದರು.





