ಬಾಡಿಗೆದಾರಿಂದ ಮನೆಯ ಮಾಲೀಕ ವಕೀಲರೊಬ್ಬರನ್ನು ಗುಂಡಿಕ್ಕಿ ಬರ್ಬರ ಹತ್ಯೆ

0
46

ಬಾಡಿಗೆ ಹಣದ ವಿಚಾರವಾಗಿ ಶುರುವಾದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ. ಬಾಡಿಗೆದಾರರೇ ತಮ್ಮ ಮನೆಯ ಮಾಲೀಕರಾದ ವಕೀಲರೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದು, ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ.

​ಕೊಲೆಯಾದ ದುರ್ದೈವಿಯನ್ನು ಮಂಜುನಾಥ್ (42) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ಇವರು ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ವಾಸವಾಗಿದ್ದರು. ಇವರ ಮನೆಯಲ್ಲಿ ಬಿಹಾರ ಮೂಲದ ಇಬ್ಬರು ಯುವಕರು ಬಾಡಿಗೆಗೆ ನೆಲೆಸಿದ್ದರು. ಕಳೆದ ಕೆಲ ಸಮಯದಿಂದ ಬಾಡಿಗೆ ಹಣ ಪಾವತಿಸದ ಕಾರಣ, ಭಾನುವಾರ ರಾತ್ರಿ ಸುಮಾರು 10:30ರ ವೇಳೆಗೆ ಮಂಜುನಾಥ್ ಮತ್ತು ಬಾಡಿಗೆದಾರರ ನಡುವೆ ಈ ಸಂಬಂಧ ತೀವ್ರ ವಾಗ್ವಾದ ನಡೆದಿತ್ತು.

​ಆ ಬಳಿಕ ಜಗಳ ಶಮನಗೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ ಮಧ್ಯರಾತ್ರಿ 11:30ರ ಸುಮಾರಿಗೆ ಆರೋಪಿಗಳು ಮಂಜುನಾಥ್ ಅವರ ಮನೆಯ ಬಾಗಿಲು ತಟ್ಟಿದ್ದಾರೆ. ಮಂಜುನಾಥ್ ಬಾಗಿಲು ತೆರೆಯುತ್ತಿದ್ದಂತೆ, ಆರೋಪಿಗಳು ಏಕಾಏಕಿ ಅವರ ಹಣೆಗೆ ನಾಡಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ಆಹಾರ ವಿತರಣಾ ಬಾಯ್‌ಗಳಾಗಿದ್ದ ಆರೋಪಿಗಳು:

ಕೊಲೆ ನಡೆಸಿದ ಆರೋಪಿಗಳು ಬಿಹಾರ ಮೂಲದ ವಲಸಿಗರಾಗಿದ್ದು, ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೊದಂತಹ ಫುಡ್ ಡೆಲಿವರಿ ಸಂಸ್ಥೆಗಳಲ್ಲಿ ಹಾಗೂ ರ್ಯಾಪಿಡೋ ಬೈಕ್ ಟ್ಯಾಕ್ಸಿಗಳಲ್ಲಿ ಗಿಗ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ದೇಶೀಯ ನಿರ್ಮಿತ ಪಿಸ್ತೂಲನ್ನು (ಕಂಟ್ರಿ ಮೇಡ್ ಪಿಸ್ತೂಲ್) ಬಿಹಾರದಿಂದ ಅಕ್ರಮವಾಗಿ ಬೆಂಗಳೂರಿಗೆ ತಂದಿರಬಹುದು ಎಂದು ಶಂಕಿಸಲಾಗಿದೆ.

​ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಲಾಗಿದೆ.

​ಮೃತ ಮಂಜುನಾಥ್ ಅವರಿಗೆ ವೈಟ್‌ಫೀಲ್ಡ್ ಭಾಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಎಕರೆಗಟ್ಟಲೆ ಜಮೀನು ಹಾಗೂ ಆಸ್ತಿಗಳಿದ್ದು, ಅವುಗಳಲ್ಲಿ ಕೆಲ ಭಾಗಗಳನ್ನು ಶೆಡ್‌ಗಳ ನಿರ್ಮಾಣಕ್ಕೆ ಬಾಡಿಗೆಗೆ ನೀಡಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೇಲ್ನೋಟಕ್ಕೆ ಬಾಡಿಗೆ ಹಣದ ವಿವಾದವೇ ಹತ್ಯೆಗೆ ಕಾರಣವೆಂದು ಕಂಡುಬಂದಿದ್ದರೂ, ಘಟನೆಯ ಹಿಂದೆ ಬೇರೆ ಯಾವುದೇ ಹಿನ್ನೆಲೆ ಇದೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here