2022 ರಲ್ಲಿ ಭಾರತ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಗುಜರಾತಿನ ಕಚ್ಛ್ ಜಿಲ್ಲೆಯ ರಣ್ ಆಫ್ ಕಚ್ಛ್ ಪ್ರದೇಶದಲ್ಲಿ ಸುಮಾರು 23,000 ಹೆಕ್ಟೇರ್ ಭೂಮಿಯನ್ನು ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾ (SECI) ಎಂಬ ಸರಕಾರಿ ಸಂಸ್ಥೆಗೆ ಗುಜರಾತ್ ಸರ್ಕಾರವು ಸೌರ ವಿದ್ಯುತ್ ಯೋಜನೆಯ ಸಲುವಾಗಿ ಗುತ್ತಿಗೆ ನೀಡಿತು.

ಆ ಸಮಯದಲ್ಲಿ ದೇಶದ ಭದ್ರತೆಯ ದೃಷ್ಟಿಯಿಂದ ಗಡಿ ಪ್ರದೇಶದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ದೊಡ್ಡ ನಿರ್ಮಾಣಗಳನ್ನು ಮಾಡುವಂತಿಲ್ಲ ಎಂಬ ನಿಯಮವಿತ್ತು.ಈ ನಿಯಮ ಇಲ್ಲದಿದ್ದರೆ ಯುದ್ಧ ಟ್ಯಾಂಕರ್ ಗಳ ಚಲನೆಗೆ ಅಡ್ಡಿಯಾಗಬಹುದು, ನಿಗಾ ವ್ಯವಸ್ಥೆಗೆ (surveillance) ತೊಂದರೆಯಾಗಬಹುದು, ಮೈನಿಂಗ್ ಬಾಂಬ್ ಕಾರ್ಯಾಚರಣೆಗಳಿಗೆ ಅಡಚಣೆ ಉಂಟುಮಾಡಬಹುದು ಮತ್ತು ಶತ್ರುಗಳಿಗೆ ನಿಗಾವಹಿಸಲು ಸುಲಭವಾಗಬಹುದು ಎಂಬಿತ್ಯಾದಿ ಕಾರಣಗಳಿಂದ ಈ ನಿಯಮ ಅನಿವಾರ್ಯವಾಗಿತ್ತು.

ಗಡಿ ಭದ್ರತೆಯ ಕುರಿತಾದ ಈ ನಿಯಮಗಳನ್ನು ಪರಿಗಣಿಸಿ SECI ತಾನು ಪಡೆದ ಭೂಮಿಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ವರದಿ ನೀಡಿತು.

ಇದಾದ ನಂತರ ಏಪ್ರಿಲ್ 21, 2023 ರಂದು ದೆಹಲಿಯಲ್ಲಿ ರಕ್ಷಣಾ ಸಚಿವಾಲಯದ ಅಧಿಕಾರಿಗಳು, ಭಾರತೀಯ ಸೇನೆಯ ಅಧಿಕಾರಿಗಳು, ನವೀಕರೀಸಬಹುದಾದ ಶಕ್ತಿ ಸಚಿವಾಲಯ ( MNRE ) ಮತ್ತು ಗುಜರಾತ್ ಸರ್ಕಾರದ ಅಧಿಕಾರಿಗಳು ಸೇರಿ ಒಂದು ಗುಪ್ತ ಸಭೆ ನಡೆಸಿದರು. ಈ ಸಭೆಯಲ್ಲಿ, SECI ಯ ಸಮಸ್ಯೆಗಳನ್ನು ಪರಿಹರಿಸಲು ನಿಯಮಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಯಿತು.ಅದರಂತೆ ಗಡಿಯಿಂದ 1 ಕಿ.ಮೀ. ದೂರದಲ್ಲಿ ವಿಂಡ್ ಟರ್ಬೈನ್ ಗಳನ್ನು ನಿರ್ಮಿಸಬಹುದು ಗಡಿಯಿಂದ 2 ಕಿ.ಮೀ. ದೂರದಲ್ಲಿ ಸೌರ ಫಲಕಗಳನ್ನು ನಿರ್ಮಿಸಲು ಅನುಮತಿ ಕೊಡಬಹುದು ಎಂದು ತೀರ್ಮಾನಿಸಲಾಯಿತು. ಇದಕ್ಕೆ ಸೇನಾ ಅಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸಿದಾಗ ಅವೆಲ್ಲವನ್ನು ತಳ್ಳಿ ಹಾಕಲಾಯಿತು.

ಇದಾಗಿ ಕೇವಲ 18 ದಿನಗಳ ಅಂತರದಲ್ಲಿ ಅಂದರೆ ಮೇ 8, 2023ರಂದು ಕೇಂದ್ರ ಸರ್ಕಾರವು ಗಡಿ ನಿರ್ಬಂಧವನ್ನು 10 ಕಿ. ಮಿ ವ್ಯಾಪ್ತಿಯಿಂದ 1 ಕಿ. ಮಿ ವ್ಯಾಪ್ತಿಗೆ ಇಳಿಸಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿತು.

ನಿಯಮಗಳು ಸಡಿಲಗೊಂಡ ನಂತರ SECI ತನ್ನ 23,000 ಹೆಕ್ಟೇರ್ ಭೂಮಿಯಲ್ಲಿ ಯೋಜನೆ ಪ್ರಾರಂಭಿಸಿತೇ? ಇಲ್ಲ., SECI ತನ್ನ 23,000 ಹೆಕ್ಟೇರ್ ಭೂಮಿಯನ್ನು ಹಿಂತಿರುಗಿಸಲು ನಿರ್ಧರಿಸಿತು. ವರದಿಗಳು ಹೇಳುವಂತೆ ಇದಕ್ಕೆ ಕಾರಣ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರ ತೀರ್ವ ಒತ್ತಡ ಮತ್ತು ಸೂಚನೆ.

ಆಮೇಲೇನಾಯಿತು?

SECI ಎಂಬ ಸರ್ಕಾರಿ ಸಂಸ್ಥೆಯು ತನ್ನ ಭೂಮಿಯನ್ನು ಹಿಂತಿರುಗಿಸಿದ ಬೆನ್ನಲ್ಲೇ, ಅದೇ ಭೂಮಿಯನ್ನು ಯಾವುದೇ ಹೊಸ ಹರಾಜು ಅಥವಾ ಸ್ಪರ್ಧಾತ್ಮಕ ಪ್ರಕ್ರಿಯೆ ಇಲ್ಲದೆಯೇ ಅದಾನಿಗೆ ವರ್ಗಾಯಿಸಲಾಯಿತು.

ಭಕ್ತರಿಗೆ ಪ್ರಶ್ನೆಗಳು.

  1. ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಸಡಿಲಗೊಳಿಸುವ ಅಗತ್ಯವೇನಿತ್ತು? – ಗಡಿಯ 10 ಕಿ.ಮೀ. ಒಳಗೆ ದಶಕಗಳಿಂದ ಜಾರಿಯಲ್ಲಿದ್ದ ನಿರ್ಬಂಧವನ್ನು ತೆಗೆದುಹಾಕಿದ್ದು ಯಾವ ತುರ್ತು ಪರಿಸ್ಥಿತಿಗಾಗಿ?
  2. ಸೇನೆಯ ಆಕ್ಷೇಪಣೆಗಳನ್ನು ಏಕೆ ಕಡೆಗಣಿಸಲಾಯಿತು? ಪ್ರಮುಖ ಸೇನಾ ಕಾರ್ಯಾಚರಣೆಗಳಿಗೆ ಅಡ್ಡಿಯಾಗಬಹುದೆಂಬ ಕಾಳಜಿಗಳನ್ನು ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ?
  3. ಸರ್ಕಾರಿ ಸಂಸ್ಥೆಯ ಭೂಮಿಯನ್ನು ಅದಾನಿಗೆ ನೇರವಾಗಿ ಏಕೆ ವರ್ಗಾಯಿಸಲಾಯಿತು? – SECI ತನ್ನ ಭೂಮಿಯನ್ನು ಹಿಂತಿರುಗಿಸಿದ ಬೆನ್ನಲ್ಲೇ, ಅದೇ ಭೂಮಿಯನ್ನು ಸ್ಪರ್ಧಾತ್ಮಕ ಹರಾಜು ಇಲ್ಲದೆ ಅದಾನಿಗೆ ನೀಡಲಾಯಿತು. ಇದನ್ನು ಪಾರದರ್ಶಕ ಎನ್ನಬಹುದೇ?
  4. 2014ರಲ್ಲಿ ಅದಾನಿ ಪಾಕಿಸ್ತಾನಕ್ಕೆ ವಿದ್ಯುತ್ ರಫ್ತು ಮಾಡಲು ಯೋಜಿಸಿದ್ದ ಯೋಜನೆಯೇ ಇದೇನು? – ಹಾಗಿದ್ದರೆ, ನಮ್ಮ ಗಡಿಯ ಸಮೀಪದಲ್ಲೇ ಪಾಕಿಸ್ತಾನಕ್ಕೆ ವಿದ್ಯುತ್ ರಫ್ತು ಮಾಡುವ ಉದ್ದೇಶದಿಂದ ಯೋಜನೆಯನ್ನು ಅನುಮತಿಸಲಾಗಿದೆಯೇ?
  5. “ಪಾರದರ್ಶಕತೆ” ಎಲ್ಲಿದೆ? – ಏಪ್ರಿಲ್ 21ರ ಗುಪ್ತ ಸಭೆಯ ವಿವರಗಳು, ಸೇನೆ ಮತ್ತು ಸರ್ಕಾರದ ನಡುವಿನ ಪತ್ರವ್ಯವಹಾರಗಳು ಇನ್ನೂ ಸಾರ್ವಜನಿಕವಾಗಿಲ್ಲ.
  6. ಮೋದಿ ಸರ್ಕಾರವು ತನ್ನ “ಆತ್ಮೀಯ ಸ್ನೇಹಿತ” ಗೌತಮ್ ಅದಾನಿಗೆ ಅನುಕೂಲವಾಗಲು, ರಾಷ್ಟ್ರೀಯ ಭದ್ರತೆಯನ್ನೇ ಪಣಕ್ಕಿಟ್ಟಿದೆಯೇ?
  7. ವಿಶ್ವದ ಅತ್ಯಂತ ಸೂಕ್ಷ್ಮ ಗಡಿಗಳಲ್ಲಿ ಒಂದಾದ ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ 1 ಕಿ.ಮೀ. ದೂರದಲ್ಲಿ, ಸ್ಥಾಪಿತ ಸೇನಾ ಮಾನದಂಡಗಳನ್ನು ಬದಲಾಯಿಸಿ, ನಿರ್ದಿಷ್ಟ ಕಂಪನಿಯೊಂದಕ್ಕೆ ಪ್ರಯೋಜನವಾಗುವಂತೆ ನಿಯಮಗಳನ್ನು ಸಡಿಲಗೊಳಿಸಿದ್ದು ಏಕೆ?.

(✍️ಸುರೇಶ್ ರಾಜ್ ಭಟ್ ಕೋಡು)

LEAVE A REPLY

Please enter your comment!
Please enter your name here