ಜನಸಮುದಾಯದ ಜೊತೆ ಚವ್ದಾರ್ ಕೆರೆಯತ್ತ ಹೆಜ್ಜೆ ಹಾಕಿದ ಅಂಬೇಡ್ಕರ್ ಬೊಗಸೆಯಲ್ಲಿ ಕೆರೆಯ ಸಿಹಿನೀರು ಕುಡಿದರು. ಸಾವಿರಾರು ವರ್ಷಗಳಿಂದ ಮಲೆತುಹೋಗಿದ್ದ ಇಂಡಿಯಾದ ಚರಿತ್ರೆ ಇದ್ದಕ್ಕಿದ್ದಂತೆ ಚಲಿಸಿತ್ತು. ಸಮಾವೇಶ ಮುಗಿಸಿ ಊರಿಗೆ ಹೊರಡುವ ಮುನ್ನ ಪ್ರತಿನಿಧಿಗಳು ಊಟ ಮಾಡತೊಡಗಿದರು. ಭದ್ರತೆಯ ಕಾರಣಕ್ಕಾಗಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿದ್ದ ಅಂಬೇಡ್ಕರ್ ಮತ್ತಿತರರು ಅಲ್ಲಿಗೆ ಮರಳಿದರು.
ಎರಡು ಗಂಟೆಯ ಹೊತ್ತಿಗೆ ವೀರೇಶ್ವರ ದೇವಾಲಯದ ಪೂಜಾರಿ ‘ಅಸ್ಪೃಶ್ಯರು ದೇವಾಲಯ ಪ್ರವೇಶಿಸುತ್ತಿದ್ದಾರೆ; ಕಾಪಾಡಿ, ಕಾಪಾಡಿ’ ಎಂದು ಊರ ತುಂಬಾ ಕೂಗುತ್ತಾ ಓಡತೊಡಗಿದ. ಇನ್ನು ಕೆಲವರು ‘ಮಹರ್ ಜನ ಚವ್ದಾರ್ ಕೆರೆಯ ನೀರನ್ನು ಅಪವಿತ್ರಗೊಳಿಸಿ ನಿಮ್ಮ ದೇವಾಲಯಗಳಿಗೆ ಹೋಗಲು ತಯಾರಾಗುತ್ತಿದ್ದಾರೆ’ ಎಂದು ಕುಣಬಿ ಸಮುದಾಯದವರನ್ನು ರೊಚ್ಚಿಗೆಬ್ಬಿಸಿದರು.
ಸವರ್ಣೀಯರು ಲಾಠಿ ಹಿಡಿದು ವೀರೇಶ್ವರ ದೇವಸ್ಥಾನದ ಬಳಿ ಬಂದು ಸೇರಿದರು. ಈ ನಡುವೆ ತಮ್ಮನ್ನು ಕಂಡ ಪೊಲೀಸ್ ಅಧಿಕಾರಿಗೆ ಅಂಬೇಡ್ಕರ್ ತಮ್ಮವರಿಗೆ ದೇವಾಲಯ ಪ್ರವೇಶಿಸುವ ಇರಾದೆಯೇ ಇಲ್ಲ ಎಂದು ಹೇಳಿದರು. ಅತ್ತ ಊರಿಗೆ ಹೊರಟ ದಲಿತರ ಮೇಲೆ ಸವರ್ಣೀಯ ಗೂಂಡಾಗಳು ಹಲ್ಲೆ ಮಾಡಿದರು. ಸಮ್ಮೇಳನದ ಅಡುಗೆಮನೆಗೆ ನುಗ್ಗಿ ಅಲ್ಲಿದ್ದ ಹೆಂಗಸರು ಮಕ್ಕಳನ್ನೂ ಹೊಡೆದರು. ಗೂಂಡಾಗಳಿಂದ ತಪ್ಪಿಸಿಕೊಂಡು ಓಡುತ್ತಾ ಆಸರೆ ಬೇಡುತ್ತಿದ್ದ ದಲಿತರನ್ನು ಮೇಲುಜಾತಿಯ ಬಹುತೇಕರು ಮನೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ.
ಮುಸಲ್ಮಾನರು ಅವರ ರಕ್ಷಣೆಗೆ ಬರದಿದ್ದರೆ ಅವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿರುತ್ತಿತ್ತು. ಮುಸಲ್ಮಾನರು ಮತ್ತು ಕಾಯಸ್ಥ ಜಾತಿಯವರು ಮಾತ್ರ ಅವರ ನೆರವಿಗೆ ಬಂದರು. ಜನರನ್ನು ಸಂತೈಸುತ್ತಾ, ‘ಏನೇ ಆಗಲಿ ಶಾಂತಿಯಿಂದ ಇರಿ’ ಎಂದು ಅಂಬೇಡ್ಕರ್ ಕೇಳಿಕೊಂಡರು. ಅಲ್ಲಿ ಸೇರಿದ್ದ, ಮಿಲಿಟರಿ ಸೇವೆಯಿಂದ ನಿವೃತ್ತರಾಗಿದ್ದ ದೃಢಕಾಯ ದಲಿತರಿಗೇನಾದರೂ ಅಂಬೇಡ್ಕರ್ ‘ಹೂಂ’ ಎಂದಿದ್ದರೆ ಕತೆಯೇ ಬೇರೆಯಾಗುತ್ತಿತ್ತು ಎಂದು ತೇಳ್ತುಂಬ್ಡೆ ಬರೆಯುತ್ತಾರೆ. ಆನಂತರ ಕೆರೆಯ ಸಿಹಿನೀರನ್ನು ಪುರೋಹಿತರು ಸಗಣಿ, ಗಂಜಲ ಹಾಕಿ ‘ಶುದ್ಧಿ’ ಮಾಡಿದ ಕತೆಯೂ ಕೆಲವು ಪುಸ್ತಕಗಳಲ್ಲಿದೆ.
ಮಹಾಡ್ನಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಕೆಲವರಿಗೆ ನಂತರ ಶಿಕ್ಷೆಯಾಯಿತು. ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದ ಮಹಾಡ್ ಸತ್ಯಾಗ್ರಹಕ್ಕಾಗಿ ಅಂಬೇಡ್ಕರ್ ವ್ಯಾಪಕ ಸಿದ್ಧತೆ ಶುರು ಮಾಡಿದರು. ಇದೆಲ್ಲದರ ಮಧ್ಯೆ, ತಾವೂ ಮಹಾಡ್ ಸತ್ಯಾಗ್ರಹವನ್ನು ಬೆಂಬಲಿಸುತ್ತೇವೆಂದು ಬಂದ ದಲಿತ ಸಾಧುಗಳು ಅಂಬೇಡ್ಕರ್ ‘ಅರೆ ರುದ್ರಾವತಾರಿ’ ಎಂದು ಪ್ರತಿಪಾದಿಸತೊಡಗಿದರು! ಇದನ್ನು ಕೇಳಿ ಮೊದಲು ನಕ್ಕ ಅಂಬೇಡ್ಕರ್, ನಂತರ ಗಂಭೀರವಾಗಿ ಹೇಳಿದರು: ‘ಇಂಥ ಕಲ್ಪನೆಗಳಿಂದಲೇ ಬ್ರಾಹ್ಮಣರು ಸಮಾಜವನ್ನು ನಾಶ ಮಾಡಿರುವುದು. ಇಂಥದ್ದನ್ನೆಲ್ಲಾ ಎಂದೂ ಸಮುದಾಯದಲ್ಲಿ ಹಬ್ಬಿಸಬಾರದು’.
ಈ ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿರುವಾಗಲೇ ಮಹಾಡ್ ಮುನಿಸಿಪಾಲಿಟಿ ಚವ್ದಾರ್ ಕೆರೆಯ ನೀರನ್ನು ಎಲ್ಲರೂ ಬಳಸಬಹುದು ಎಂಬ ನಿರ್ಣಯವನ್ನು ವಾಪಸ್ ತೆಗೆದುಕೊಂಡಿತು. ದಲಿತರು ಈ ಕೆರೆಯ ನೀರನ್ನು ಬಳಸಬಾರದೆಂದು ಸವರ್ಣೀಯರು ಕೋರ್ಟಿನಿಂದ ತಡೆಯಾಜ್ಞೆ ತಂದರು; ಸಮ್ಮೇಳನಕ್ಕೆ ಜಾಗವೇ ಸಿಗದಂತೆ ಮಾಡಿದ್ದೇವೆಂದು ಗುಜಾರ್ ಬ್ರಾಹ್ಮಣರು ಹಿಗ್ಗಿನಲ್ಲಿದ್ದರು.
ಆದರೆ ಫತೇಹ್ ಖಾನ್ ಎಂಬಾತ ಸಂತೋಷದಿಂದ ಸಮ್ಮೇಳನಕ್ಕೆ ಜಾಗ ಕೊಟ್ಟ. ಗುಜಾರ್ ಬ್ರಾಹ್ಮಣರ ಒತ್ತಡಕ್ಕೆ ಫತೇಹ್ ಖಾನ್ ಮಣಿಯಲಿಲ್ಲ; ಅವನ ಹೊಲದಲ್ಲಿ ಹಾಕಿದ ದೊಡ್ಡ ಪೆಂಡಾಲಿನಲ್ಲಿ, 25 ಡಿಸೆಂಬರ್ 1927ರಂದು ಹತ್ತು ಸಾವಿರ ಪ್ರತಿನಿಧಿಗಳ ಸತ್ಯಾಗ್ರಹ ಸಮ್ಮೇಳನ ಶುರುವಾಯಿತು. ಕೆಲವು ದಲಿತೇತರ ನಾಯಕರೂ ಸಮ್ಮೇಳನದಲ್ಲಿ ಮಾತಾಡಿದರು
ಈ ಕಾಲದ ಮುಖ್ಯ ಚಿಂತಕರಲ್ಲೊಬ್ಬರಾದ ಆನಂದ್ ತೇಳ್ ತುಂಬ್ಡೆ ನಾಲ್ಕೈದು ವರ್ಷಗಳಿಂದ ಬರೆಯುತ್ತಿದ್ದ ‘ಮಹಾಡ್: ದಿ ಮೇಕಿಂಗ್ ಆಫ್ ದಿ ಫಸ್ಟ್ ದಲಿತ್ ರಿವೋಲ್ಟ್’ (ಆಕಾರ್ ಬುಕ್ಸ್, ನವದೆಹಲಿ) ಪುಸ್ತಕ ಮೊನ್ನೆ ಬಂದಿದೆ. ‘ಇಂಡಿಯಾದ ದಲಿತ ಚಳವಳಿಯ ಜಾನಪದವೇ ಆಗಿಹೋಗಿರುವ’ 20 ಮಾರ್ಚ್ 1927ರ ಮಹಾಡ್ ಸಮ್ಮೇಳನವನ್ನು ಆನಂದ್ ‘ಜಗತ್ತಿನ ಮೊದಲ ಮುಖ್ಯ ನಾಗರಿಕ ಹಕ್ಕುಗಳ ಹೋರಾಟಗಳಲ್ಲಿ ಒಂದು’ ಎನ್ನುತ್ತಾರೆ.
ಆನಂತರ 25 ಡಿಸೆಂಬರ್ 1927ರಂದು ಬೃಹತ್ ಮಹಾಡ್ ಸತ್ಯಾಗ್ರಹವನ್ನು ಏರ್ಪಡಿಸಿದ ಅಂಬೇಡ್ಕರ್ ಅಲ್ಲಿ ಮನುಸ್ಮೃತಿಯನ್ನು ಸುಟ್ಟರು. ಈ ಎರಡು ಚಾರಿತ್ರಿಕ ಸಮ್ಮೇಳನಗಳನ್ನು ಕುರಿತು ಮರಾಠಿಯಲ್ಲಿರುವ ಅನೇಕ ದಾಖಲೆಗಳು, ವಸಾಹತು ಆಡಳಿತದ ಟಿಪ್ಪಣಿಗಳು, ಅಂಬೇಡ್ಕರರ ‘ಬಹಿಷ್ಕೃತ ಭಾರತ’ ಪತ್ರಿಕೆಯ ಸಂಪಾದಕೀಯಗಳನ್ನು ಆನಂದ್ ಮಂಡಿಸಿದ್ದಾರೆ; ಆಳವಾಗಿ ವಿಶ್ಲೇಷಿಸಿದ್ದಾರೆ.(ಕೃಪೆ:ದಸ್ತಗಿರ್ ಮುಲ್ಲಾ ಫೇಸ್ಬುಕ್)





