ದಾವಣಗೆರೆ:ಬಸವಪಟ್ಟಣ ಜನತಾ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಪ್ರಾಂಶುಪಾಲರಾದ ಡಾ.ಎಂ.ಆರ್.ಲೋಕೇಶ್ ಅವರು ಕನ್ನಡ ಭಾಷೆ ಎಲ್ಲ ಕಾಲದಲ್ಲೂ ತನ್ನ ಜೀವಂತಿಕೆಯನ್ನು ಕಾಯ್ದುಕೊಂಡಿದ್ದು, ಆಯಾ ಕಾಲದ ಬಿಕ್ಕಟ್ಟುಗಳೊಂದಿಗೆ ಅನುಸಂಧಾನಗೊಂಡು ತನ್ನತನವನ್ನು ಕಾಯ್ದುಕೊಂಡಿದೆ‌ ಹೀಗಾಗಿ ಪಂಪನಿಂದ ಚಂಪಾವರೆಗೆ ಹಲವಾರು ಸಾಹಿತಿಗಳು ಕನ್ನಡದ ಸಾಹಿತ್ಯ ಲೋಕದ ಶ್ರೀಮಂತಿಕೆಗಾಗಿ ದುಡಿದಿದ್ದರ ಫಲವಾಗಿ ಇಂದು ಕನ್ನಡ ಭಾಷೆಯು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕನ್ನಡಕ್ಕಿರುವ ಶಕ್ತಿ ಹಾಗೂ ಸತ್ವದ ಫಲವಾಗಿ ಶಾಸ್ತ್ರೀಯ ಸ್ಥಾನಮಾನ‌ ಪಡೆದುಕೊಂಡು ವಿಜೃಂಭಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಾಯಕ ಪ್ರಾಧ್ಯಾಪಕರಾದ ಡಾ.ಎ.ಡಿ.ಬಸವರಾಜ್ ಅವರು ಮಾತನಾಡಿ, ಗಡಿನಾಡ ಕನ್ನಡಿಗರು ಹಾಗೂ ಅವರ ಭಾಷಾ ಬೆಳವಣಿಗೆಗೆ ಸರ್ಕಾರಗಳು ವಿಶೇಷ ಉತ್ತೇಜನ‌ ನೀಡಬೇಕು. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಹಾಗೂ ಕನ್ನಡಿಗರ ಹಿತವನ್ನು ಕಾಪಾಡಬೇಕಿದೆ ಎಂಬುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಮಧುಸೂಧನ್, ಪ್ರಕಾಶ್, ಹನುಮಂತಪ್ಪ, ರೆಹಮತ್, ಕತುಮುನಿಸಾ, ಆಶಾ, ಜಯರಾಮ್, ಓಬಳೇಶ್, ಗ್ರಂಥಪಾಲಕರಾದ ಕರಿಬಸಪ್ಪ, ಕಛೇರಿ ಅಧೀಕ್ಷಕರಾದ ಹನುಮಂತಪ್ಪ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ರಾಘವೇಂದ್ರ ಎಂ.ಡಿ ಅವರು ಪ್ರಾರ್ಥನೆ ನೆರವೇರಿಸಿದರು.‌ ಗೋವಿಂದರೆಡ್ಡಿ ಅವರು ನಿರೂಪಿಸಿದರು. ಕು.ವಂದನಾ ಸ್ವಾಗತಿಸಿದರು.

LEAVE A REPLY

Please enter your comment!
Please enter your name here