ದಾವಣಗೆರೆ ಅ 5- ಬಿಸಿಯೂಟ ತಯಾರಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಕ್ಟೋಬರ್ 10 ರಿಂದ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಆವರಗೆರೆ ಚಂದ್ರು ತಿಳಿಸಿದ್ದಾರೆ.
ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫಡರೇಷನ್ ರಾಜ್ಯ ಸಮಿತಿ ನೇತೃತ್ವದಲ್ಲಿ ನಡೆಯುವ ಈ ಧರಣಿಯಲ್ಲಿ , ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಮಾಸಿಕ 6,000 ರೂ ವೇತನ ನೀಡುವುದಾಗಿ 6ನೇ ಗ್ಯಾರಂಟಿಯಾಗಿ ಭರವಸೆ ನೀಡಿತ್ತು. ಕಳೆದ ಸಾಲಿನ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ಸಾವಿರ ರೂಪಾಯಿ ಹೆಚ್ಚಳ ಮಾಡಿ ಘೋಷಣೆ ಮಾಡಿತ್ತು ಆ ವೇತನವನ್ನು ಕೂಡಲೇ ಜಾರಿಗೊಳಿಸಬೇಕು, ಎಸ್ ಡಿ ಎಂ ಸಿ ಅಧ್ಯಕ್ಷರ ಮತ್ತು ಮುಖ್ಯೋಪಾಧ್ಯಾಯರ ಬ್ಯಾಂಕ್ ಜಂಟಿ ಖಾತೆ ಮಾಡಿಸುವ ಆದೇಶವನ್ನು ಕೂಡಲೇ ರದ್ದುಗೊಳಿಸಿ ಮೊದಲಿದ್ದ ಹಾಗೆ ಮುಖ್ಯೋಪಾಧ್ಯಾಯರ ಮತ್ತು ಅಡುಗೆಯವರ ಜಂಟಿ ಬ್ಯಾಂಕ್ ಖಾತೆಯನ್ನು ಮುಂದುವರಿಸಬೇಕು, ನಿವೃತ್ತಿಯಾದ ಬಿಸಿಯೂಟ ತಯಾರಕರಿಗೆ ಎರಡು ಲಕ್ಷ ರೂಪಾಯಿ ಇಡುಗಂಟು ಕೊಡಬೇಕು ಮತ್ತು ಅಡುಗೆ ಮಾಡುವ ಸಮಯದಲ್ಲಿ ಅನಾಹುತಗಳಾಗಿ ಮೃತಪಟ್ಟ ಅಡುಗೆಯವರಿಗೆ 25 ಲಕ್ಷ ಪರಿಹಾರ ಕೊಡಬೇಕು ಎನ್ನುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು.
ಆದ್ದರಿಂದ ಎಲ್ಲಾ ಬಿಸಿಯೂಟ ತಯಾರಕರು ರೊಟ್ಟಿ ಬುತ್ತಿ ಕಟ್ಟಿಕೊಂಡು ಹಾಸಲು ಹೊದೆಯಲು ತೆಗೆದುಕೊಂಡು ಆಧಾರ ಕಾರ್ಡ್ ಜೊತೆಯಲ್ಲಿಟ್ಟುಕೊಂಡು 9 ನೇ ತಾರೀಖು ಸೋಮವಾರ ಸಂಜೆಯಿಂದಲೇ ತಮ್ಮ ತಮ್ಮ ಊರುಗಳಿಂದ ಬಸ್ಸುಗಳ ಮೂಲಕ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಬೇಕೆಂದು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಕಾಂ ಹೊನ್ನಪ್ಪ ಮರೆಮ್ಮನವರ, ಪ್ರಧಾನ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ,ರಾಜ್ಯ ಖಜಾಂಚಿ ಕಾಂ ರುದ್ರಮ್ಮ ಬೆಳಗೆರೆ ಮತ್ತಿತರೆ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here