ರಾಜ್ಯದ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ಆಗಸ್ಟ್ 24 ರಂದು ದೇಶಾದ್ಯಂತ ಮತ್ತು ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಲಿದ್ದಾರೆ.

ಕಾರ್ಮಿಕರ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಮತ್ತು ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವಾಷರತ್ತುಗಳು) ಕಾಯ್ದೆ – 1996 ಮತ್ತು ಸೆಸ್ ಕಾಯ್ದೆ – 1996 ಕಾಯ್ದೆ ಹಾಗೂ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆ 1979 ಕಾಯ್ದೆಯನ್ನು ಬಲಪಡಿಸಬೇಕು. ಎಲ್ಲಾ ಕಟ್ಟಡ ಕಾರ್ಮಿಕರಿಗೆ ತಿಂಗಳು ಕನಿಷ್ಠ ವೇತನ 26000 ರೂ. ಮತ್ತು ಪಿಂಚಣಿ 10000 ರೂ. ಖಾತ್ರಿಪಡಿಸಬೇಕು. ನಿರ್ಮಾಣ ಸಾಮಗ್ರಿಗಳು ಮತ್ತು ಸಲಕರಣೆಗಳ ಬೆಲೆಗಳನ್ನು ನಿಯಂತ್ರಣ ಮಾಡಬೇಕು, ಸೆಸ್ ಸರಿಯಾದ ಸಂಗಹಕ್ಕೆ ಕ್ರಮವಹಿಸಿ ಸೆಸ್ ವಂಚನೆ ತಡೆಗಟ್ಟಿ ಮತ್ತು ಸೆಸ್ ದುರ್ಬಳಕೆ ನಿಲ್ಲಿಸಿ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಮವಹಿಸಬೇಕು ಹಾಗೂ ದೇಶದ ಎಲ್ಲಾ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಗಳಲ್ಲಿ ಸಿಐಟಿಯು ಸೇರಿ ಹಾಗೂ ಕೇಂದ್ರ ಕಾರ್ಮಿಕ ಸಂಘಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು, BOCW ಕಾಯಿದೆ ಅಡಿಯಲ್ಲಿ ನಿರ್ಮಾಣೇತರ ಕಾರ್ಮಿಕರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಮತ್ತು ನಕಲಿ ಕಾರ್ಡುಗಳ ಹಾವಳಿ ತಡೆಗಟ್ಟಬೇಕು ಎನ್ನುವ ಇನ್ನೂ ಹಲವು ಬೇಡಿಕೆಗಳಿಗಾಗಿ ಆಗಸ್ಟ್ 17 ರಿಂದ 23 ರವರೆಗೆ ಪ್ರಚಾರಾಂದೋಲನ ನಡೆಸಿ ಆಗಸ್ಟ್ 24 ರಂದು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆಗಳಿಗೆ ಸಿಐಟಿಯು ಸಂಯೋಜಿತ ಕನ್ಸ್ಟ್ರಕ್ಷನ್ ವರ್ಕರ‍್ಸ್ ಫೆಡರೇಷನ್ ಆಫ್ ಇಂಡಿಯಾ ( CWFI ) ಕರೆ ನೀಡಿದೆ.

ಈ ಹೋರಾಟದ ಭಾಗವಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಕೇಂದ್ರೀಯ ಕಟ್ಟಡ ಕಾರ್ಮಿಕ ಸಂಘಗಳ ಒಕ್ಕೂಟವಾದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್(ಸಿಐಟಿಯು) ನೇತೃತ್ವದಲ್ಲಿ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರ ಕಚೇರಿಗಳ ಮುಂಭಾಗದಲ್ಲಿ ಪ್ರತಿಭಟನೆಗಳನ್ನು ನಡೆಸಲಿದ್ದಾರೆ. ಮಂಗಳೂರಿನಲ್ಲಿ ನಿರ್ಮಾಣ ವಲಯದ ಕಾರ್ಮಿಕರು ಮೂರು ದಿನಗಳ ಚಳವಳಿಯನ್ನು ಅಲ್ಲಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದೆ ನಡೆಸಲಿದ್ದಾರೆ.

ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ನೋಟು ಅಮಾನ್ಯೀಕರಣ, ಜಿ.ಎಸ್.ಟಿ. ನೀತಿಗಳು ಜಾರಿಯಾದ ಬಳಿಕ ಹಾಗೂ ಕೋವಿಡ್ ನಂತರದಲ್ಲೂ ಸಾಕಷ್ಟು ಅಭದ್ರತೆಯ ಜೀವನ ನಡೆಸುತ್ತಿದ್ದಾರೆ. ಈ ಹಲವಾರು ಸಮಸ್ಯೆಗಳನ್ನು ಜುಲೈ 20 ರಂದು ಕಾರ್ಮಿಕ ಸಚಿವರಾದ ಶ್ರೀ ಸಂತೊಷ ಲಾಡ್ ಆವರ ಗಮನಕ್ಕೆ ತರಲಾಗಿದೆ. ಅದಾಗಿಯೂ ಶೈಕ್ಷಣಿಕ ಧನ ಸಹಾಯ ಬಿಡುಗಡೆ, ವೇತನ ಚೀಟಿ, ಹಾಜರಾತಿ ಕಡ್ಡಾಯ ಆದೇಶ ರದ್ದು, ಪಿಂಚಣಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಮೊದಲಾದ ಸಮಸ್ಯೆಗಳು ಇತ್ಯರ್ಥವಾಗಲಿಲ್ಲ.

ಈ ಹಿನ್ನಲೆಯಲ್ಲಿ ನಿರ್ಮಾಣ ಕಾರ್ಮಿಕರು ಚಳವಳಿಗೆ ಮುಂದಾಗಿದ್ದಾರೆ. ಆಗಸ್ಟ್ 21 ರಂದು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿಗಳು ಕಾರ್ಮಿಕ ಸಂಘಗಳ ಜತೆ ಸಭೆಯನ್ನು ಆಯೋಜಿಸಿದ್ದಾರೆ. ಈ ಸಭೆಯಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸ್ಷಷ್ಟ ನಿರ್ಧಾರ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ತಿರ್ಮಾನಿಸಿದೆ.

ಚಳವಳಿಯ ಪ್ರಮುಖ ಬೇಡಿಕೆಗಳು :

ರಾಜ್ಯದಲ್ಲಿ ಬಾಕಿ ಇರುವ 2021-22 ನೇ ಸಾಲಿನ ಶೈಕ್ಷಣಿಕ ಅರ್ಜಿಗಳಿಗೆ ಕೂಡಲೇ ಹಣ ವರ್ಗಾವಣೆ ಆಗಬೇಕು. ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯ ಆದೇಶವನ್ನು ವಾಪಸ್ ಪಡೆಯಬೇಕು. ಬೋಗಸ್ ಕಾರ್ಡ್ ನಿಯಂತ್ರಿಸಿ ನೈಜ ಕಾರ್ಮಿಕರನ್ನು ಮಾತ್ರ ನೊಂದಣಿ/ನವೀಕರಣ ಮಾಡಬೇಕು. ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಜಾರಿಗೊಳಿಸಬೇಕು. ಹೊಸ ತಂತ್ರಾಂಶವನ್ನು ಕೂಡಲೇ ಆರಂಭಿಸಬೇಕು.ಕಾರ್ಮಿಕ ಸಂಘಗಳಿಗೆ ಮಾತ್ರ ಮಾನ್ಯತೆ ನೀಡಬೇಕು.
ಮತ್ತು ನಕಲಿ ಕಾರ್ಡುಗಳನ್ನು ವ್ಯಾಪಕವಾಗಿ ಮಾಡುತ್ತಿರುವ ಸೇವಾಸಿಂಧೂ ಕೇಂದ್ರಗಳಲ್ಲಿ ನೋಂದಣಿ/ ನವೀಕರಣ ನಿಲ್ಲಿಸಬೇಕು ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆ ನಿಲ್ಲಿಸಬೇಕು. ಜೀವಿತಾವಧಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯ ಬದಲಾಗಿ ಕಾರ್ಮಿಕ ಇಲಾಖೆಯೇ ನೀಡಬೇಕು: ಅರ್ಜಿಗಳ ವಿಲೆವಾರಿ ವಿಳಂಬ ತಡೆಗಟ್ಟಿ, ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿಂದಿನ ಬಿಜೆಪಿ ಸರ್ಕಾರದ ಸಚಿವರು ಮಂಡಳಿಯಿಂದ ಆರಂಭಿಸಲಾದ ಶಿಶುವಿಹಾರ ಹಾಗೂ ಮೊಬೈಲ್ ಕ್ಲಿನಿಕ್ ಗಳು, ವಿವಿಧ ಕಿಟ್, ಬಸ್ ಪಾಸ್,ಜಾಹೀರಾತು ಕಾರ್ಯಕ್ರಮ ನಿಲ್ಲಬೇಕು.

ಬಹುದಿನದ ಕಾರ್ಮಿಕರ ಬೇಡಿಕೆಯಾದ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಬೇಕು, ಸ್ಲಂ ಬೋರ್ಡ್‌ಗೆ ನೀಡಿದ ಹಣ ವಸೂಲಿ ಮಾಡಬೇಕು. ನಿರ್ಮಾಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೆ ತರಬೇಕು. ಕಲ್ಯಾಣ ಮಂಡಳಿಯಲ್ಲಿ ಸಿಐಟಿಯು ಸಂಘಟನೆಗೆ ಪ್ರಾತಿನಿದ್ಯ ಸಿಗಬೇಕು. ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು: ಎಲ್ಲ ಖರೀದಿಗಳನ್ನು ನಿಲ್ಲಿಸಬೇಕು ಫಲಾನುಭವಿಗೆ ನೇರ ಹಣ ವರ್ಗಾವಣೆ ಮಾಡಬೇಕು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ತೊಂದರೆಗಳನ್ನು ಕೂಡಲೇ ಬಗೆಹರಿಸಲು ಕ್ರಮವಹಿಸಬೇಕು. ಸರ್ಕಾರಿ ಹಾಗೂ ಖಾಸಗಿ ಉದ್ಯಮ/ಸಂಸ್ಥೆಗಳಿಂದ ಬಾಕಿ ಇರುವ ಸೆಸ್‌ ಮತ್ತು ಬೆಂಗಳೂರು ಸೇರಿ ರಾಜ್ಯದ್ಯಾಂತ ಸರ್ಕಾರದ ಆದೇಶದಂತೆ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳಿಂದಲೂ ಸೆಸ್ ಸಂಗ್ರಹಕ್ಕೆ ಕ್ರಮವಹಿಸಬೇಕು, ಕಟ್ಟಡ ನಿರ್ಮಾಣ ಕೆಲಸಗಳಿಗೆ ತೊಡಕಾಗಿರುವ ‘ಮರಳು ಸಮಸ್ಯೆ’ಯನ್ನು ಬಗೆಹರಿಸಬೇಕು ಎನ್ನುವುದವುಗಳು ಹೋರಾಟದ ಬೇಡಿಕೆಗಳಾಗಿವೆ. ಎಂದು ಪ್ರಧಾನಕಾರ್ಯದರ್ಶಿ

ಕೆ.ಮಹಾಂತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here