ಬ್ರಿಟಿಷ್ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ಸರ್ಕಾರದ ಸರ್ವೇಕ್ಷಣಾಧಿಕಾರಿಯಾಗಿದ್ದ ಫ್ರಾನ್ಸಿಸ್ ಬುಕಾನನ್, 23 ಏಪ್ರಿಲ್ 1800 ರಂದು ಮದ್ರಾಸಿನಿಂದ ತನ್ನ ಪ್ರಯಾಣ ಬೆಳೆಸಿ 24 ಜುಲೈ 1800 ರಂದು ಮಧುಗಿರಿ ತಲುಪುತ್ತಾನೆ. ಹಿಂದಿನ ದಿನ ಜುಲೈ 23 ರಂದು ಗೌರಿಬಿದನೂರು ತಾಲ್ಲೂಕಿನ ಹೊಸೂರಿನಿಂದ ಹೊರಟು ನನ್ನೂರು ವಡ್ಡಗೆರೆಗೆ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿರುವ ದೊಡ್ಡಬ್ಯಾಲ್ಯ ಗ್ರಾಮದ ಮಾರ್ಗವಾಗಿ ಮಧುಗಿರಿಗೆ ಪ್ರಯಾಣಿಸಿರುತ್ತಾನೆ. ಕುಂಚಿಟಿಗರು ಎಂಬ ಸಮುದಾಯದ ಸಾಂಸ್ಕೃತಿಕ ರಾಜಧಾನಿ ಎನ್ನಿಸಿದ ವಡ್ಡಗೆರೆ ಗ್ರಾಮಕ್ಕೆ ಅವನು ಒಂದುವೇಳೆ ಭೇಟಿ ನೀಡಿದ್ದಿದ್ದರೆ ಆ ಕಾಲದ ಅನೇಕ ಸಾಂಸ್ಕೃತಿಕ ಗುರುತುಗಳನ್ನು ಅವನು ದಾಖಲಿಸಲು ಸಾಧ್ಯವಾಗುತ್ತಿತ್ತು. ಕುರುಬರು ಕೆಟ್ಟು ಕುಂಚಿಟಿಗರಾದ ಸಾಂಸ್ಕೃತಿಕ ಕುಲಪುರಾಣವನ್ನು ಕವಿ ಕೆಂಪನಂಜುಂಡ ದಾಖಲಿಸಿದ್ದಾನೆ. ಸುಮಾರು ಎಂಟುನೂರು ವರ್ಷಗಳ ಹಿಂದೆ ಕೆಂಪನಂಜುಂಡನು ತಾಳೆಗರಿಗಳಲ್ಲಿ ಬರೆದಿರುವ ‘ವೀರಕ್ಯಾತರಾಯನ ದಿಗ್ವಿಜಯ ಯಕ್ಷಗಾನ ಕಥಾಪ್ರಸಂಗ’ ಕೃತಿಯು ಈ ‌ಕುಲಕಥನವನ್ನು ಮಂಡಿಸುತ್ತದೆ.‌ ಮಹಾಸತಿ ವಡ್ಡಗೆರೆ ವೀರನಾಗಮ್ಮನ ಮಾವನಾದ ವೀರಕ್ಯಾತರಾಯನು ಕುಂಚಿಟಿಗರ ಸಾಂಸ್ಕೃತಿಕ ನಾಯಕನಾಗಿದ್ದಾನೆ. 1800 ರ ಜುಲೈ 24 ರಂದು ಮಧುಗಿರಿ ತಲುಪಿದ ಬುಕಾನನ್ ಜುಲೈ 29 ರವರೆಗೂ ಒಂದು ವಾರ ಕಾಲ ಮಧುಗಿರಿಯಲ್ಲಿಯೇ ಉಳಿದುಕೊಂಡು ಸುತ್ತಮುತ್ತಲಿನ ಪ್ರದೇಶದ ಕೃಷಿ, ಪಶುಪಾಲನೆ, ಕಲೆ, ವಾಣಿಜ್ಯ, ಧರ್ಮ, ಕೈಗಾರಿಕೆ, ಗಣಿಗಾರಿಕೆ, ಚರಿತ್ರೆ, ಜನ ಜೀವನ, ನೀರಿನ ಅನುಕೂಲ, ಜಾತಿ ಪದ್ದತಿ ಮುಂತಾದ ಅನೇಕ ವಿಷಯಗಳನ್ನು ಕುರಿತು ಮಾಹಿತಿ ಸಂಗ್ರಹಿಸುತ್ತಾನೆ. ವಿಶೇಷವಾಗಿ ಹಾಲುಮತ ಕುರುಬ ಸಮುದಾಯದ ಸಾಮಾಜಿಕ ಒಳಪ್ರಭೇದಗಳು, ಕುರಿ ಸಾಕಾಣಿಕೆ, ಕಂಬಳಿ ನೇಕಾರಿಕೆ, ಕುರುಬರ ಉಡುಗೆ ತೊಡುಗೆ, ಆಹಾರ ಸಂಸ್ಕೃತಿ, ಪಶುಪಾಲನೆ, ಆರ್ಥಿಕತೆ, ದೇವರು ಧರ್ಮ ಮುಂತಾದ ಸಂಗತಿಗಳನ್ನು ಕುರಿತು ದಾಖಲಿಸುತ್ತಾನೆ.

ಕುರುಬರ ಕುಲದೇವರಾದ ಬೀರಪ್ಪನನ್ನು ಆರಾಧಿಸುವ ಬಗ್ಗೆ ಹಾಗೂ ಬೀರಪ್ಪನ ವಂಶಪಾರಂಪರ್ಯ ಪೂಜಾರಿ ವರ್ಗವನ್ನು ಕುರಿತು ಬುಕಾನನ್ ಹೀಗೆ ದಾಖಲಿಸಿದ್ದಾನೆ : “The peculiar god of the cast is Biruppa, or father Biray, one of the names of Siva; and the image is in shape of the Linga; but no other person prays to Siva under this name, nor offers sacrifices to that god, which is the mode by which the Curubas worship Biruppa. The priests who officiate in the temples of this deity are Curubas. Their office is hereditary, and they do not intermarry with the daughters of laymen” (Buchanan, Chapter V|, page 397). ಅಂದರೆ ಬುಕಾನನ್ ಹೇಳುವಂತೆ, “ಕುರುಬರ ವಿಶಿಷ್ಟ ದೈವವೆಂದರೆ ‘ಭೀರಪ್ಪ’ ದೇವರು. ಅದು ಶಿವನ ಹಲವು ನಾಮಗಳ ಪೈಕಿ ಒಂದು. ಭೀರಪ್ಪನನ್ನು ಲಿಂಗದ ರೂಪದಲ್ಲಿ ಆರಾಧಿಸಲಾಗುತ್ತದೆ. ಆದರೆ ಮತ್ತಾರೂ ಶಿವನನ್ನು ‘ಭೀರಪ್ಪ’ ಎಂಬ ಹೆಸರಲ್ಲಿ ಪೂಜಿಸುವುದಿಲ್ಲ. ಅಲ್ಲದೆ ಭೀರಪ್ಪ ದೇವರಿಗೆ ‘ಬಲಿ’ ನೀಡುವ ರೂಢಿಯಿಲ್ಲ. ಇದು ಕುರುಬರು ಭೀರಪ್ಪನನ್ನು ಪೂಜಿಸುವ ವಿಧಾನ. ಈ ದೇವರ ಪೂಜಾ ಕಾರ್ಯಗಳನ್ನು ಕುರುಬ ಜಾತಿಯ ವ್ಯಕ್ತಿಯೇ ನಿರ್ವಹಿಸುವನು. ಅದು ವಂಶಪಾರಂಪರಿಕವಾದುದು. ಅಂತಹ ವ್ಯಕ್ತಿ ಇತರೆ ಸಾಮಾನ್ಯ ಕುರುಬರ ಪುರುಷನ ಹೆಣ್ಣುಮಕ್ಕಳನ್ನು ವಿವಾಹವಾಗುವುದಿಲ್ಲ”. ಹೀಗೆ ಬೀರಪ್ಪ ದೇವರ ಪೂಜಾರಿ ಮನೆತನದ ವೈಶಿಷ್ಟ್ಯವನ್ನು ಕುರಿತು ಬುಕಾನನ್ ತನ್ನ ಸರ್ವೇಕ್ಷಣಾ ವರದಿಯಲ್ಲಿ ತಿಳಿಸಿದ್ದಾನೆ.

ಕುರುಬರಲ್ಲಿರುವ ಒಡೆಯರ್ ಎಂಬ ಸರೂರು ಮಠದ ಪುರೋಹಿತ ವರ್ಗವು ಇತರೆ ಜನಸಾಮಾನ್ಯ ಕುರುಬರನ್ನು ಅಶುದ್ಧರೆಂದು ಪರಿಗಣಿಸುವ ಬಗ್ಗೆ ಬುಕಾನನ್ ಹೇಳಿರುವಂತೆ, “They are considered as too impure to be allowed to wear the Linga, as their Guru does. This person is called a Wodear, or Jangama; but he is married, and his office is hereditary. His title is Révana Siddhérwara, and he originally lived at Sarur, which is near Kalyana pattana. At his visits he bestows consecrated ashes, and receives charity. He has a fixed due on marriages, and sends his agents to collect it” (Buchanan, Chapter V|, page 397, 398)

ಈ ಪೂಜಾರಿ ಮನೆತನಕ್ಕೆ ಸೇರಿದ ಕುರುಬರು ಇತರೆ ಜ‌ನಸಾಮಾನ್ಯ ಕುರುಬರನ್ನು ‘ಪವಿತ್ರರಲ್ಲ ಅಥವಾ ಪರಿಶುದ್ಧರಲ್ಲ’ ಎಂದು ಪರಿಗಣಿಸುತ್ತಾರೆ. ಅವರು ‘ಗುರು’ವಿನ ರೀತಿ ಲಿಂಗ ಧರಿಸಲು ಅವಕಾಶವಿಲ್ಲ. ಹಾಗೆಯೇ ಬುಕಾನನ್ ತಿಳಿಸುವಂತೆ “ಅವರು ಗುರುವನ್ನು ‘ಒಡೆಯರ್’ ಅಥವಾ ‘ಜಂಗಮ’ ಎಂದು ಕರೆಯುವರು. ಆದರೆ ಒಡೆಯರ್ ಗೃಹಸ್ಥನಾಗಿರುತ್ತಾನೆ. ಅವನ ಸ್ಥಾನವು ವಂಶಪಾರಂಪರಿಕವಾದುದು. ಅವನ ಹೆಸರು ‘ರೇವಣಸಿದ್ದೇಶ್ವರ’. ಅವನು ಮೂಲತಃ ಕಲ್ಯಾಣ ಪಟ್ಟಣದ ಸಮೀಪ ಇರುವ ‘ಸರೂರು’ ಎಂಬ ಸ್ಥಳದಲ್ಲಿ ವಾಸ ಮಾಡುತ್ತಾನೆ. ಆತ ಭಕ್ತರಿಗೆ ದರ್ಶನ ನೀಡುವ ವೇಳೆ ಪವಿತ್ರ ಬಂಡಾರ ನೀಡಿ, ಅವರಿಂದ ಕಾಣಿಕೆ ಸ್ವೀಕರಿಸುವನು. ಭಕ್ತರ ಮದುವೆ ಸಂದರ್ಭದಲ್ಲಿ ಇಂತಿಷ್ಟು ನಿಗದಿತ ಕಾಣಿಕೆಗಳನ್ನು ತನ್ನ ಮಧ್ಯವರ್ತಿಗಳ ಮೂಲಕ ಸಂಗ್ರಹಿಸುವನು”. ಹೀಗೆ ಬುಕಾನನ್ ಹಾಲುಮತ ಕುರುಬ ಸಮುದಾಯವನ್ನು ಕುರಿತು ಅಪರೂಪದ ಮಾಹಿತಿಗಳನ್ನು ಕಲೆಹಾಕಿಕೊಂಡು ಜುಲೈ 30, 1800 ರಂದು ಬಡವನಹಳ್ಳಿಗೆ ತಲುಪಿ ಜುಲೈ 31 ರಂದು ಸಿರಾ ಸೀಮೆಗೆ ತಲುಪುತ್ತಾನೆ. ಆಗಸ್ಟ್ 7 ರಂದು ಚಂದ್ರಗಿರಿ, ಆಗಸ್ಟ್‌ 8 ರಂದು ಮಡಿಗೇಶಿ (ಮಿಡಿಗೇಶಿ) ಪ್ರದೇಶದಲ್ಲಿ ಮಾಹಿತಿ ಸಂಗ್ರಹಿಸಿಕೊಂಡು ಆಗಸ್ಟ್ 10 ರಂದು ಮತ್ತೆ ಮಧುಗಿರಿಗೆ ಬರುತ್ತಾನೆ. ಈಗ ಅವನು ಗೊಲ್ಲ ಸಮುದಾಯ, ಕುರಿಗಾರಿಕೆ, ದನಗಳ ತಳಿ ಮತ್ತು ಪಶುಪಾಲನೆ ಕುರಿತು ವಿಶೇಷ ಮುತುವರ್ಜಿವಹಿಸಿ ಮಾಹಿತಿ ಸಂಗ್ರಹಿಸಿ ವರದಿ ಮಾಡಿದ್ದಾನೆ. 12 ಆಗಸ್ಟ್‌ 1800 ರಂದು ನನ್ನೂರು ವಡ್ಡಗೆರೆಗೆ ಕೇವಲ 6 ಕಿಲೋಮೀಟರ್ ದೂರ ಇರುವ ಏಳು ಸುತ್ತಿನ ಕೋಟೆಯ ಚನ್ನರಾಯನದುರ್ಗಕ್ಕೆ ಭೇಟಿ ನೀಡುತ್ತಾನೆ. ಆಗಸ್ಟ್ 13 ರಂದು ಇಲ್ಲಿಯ ಸುತ್ತಮುತ್ತಲಿನ ಮಾಹಿತಿ ಸಂಗ್ರಹಿಸಿಕೊಂಡು ಆಗಸ್ಟ್ 14 ರಂದು ತೋವಿನಕೆರೆ ಮಾರ್ಗವಾಗಿ ತುಮಕೂರು ತಲುಪುತ್ತಾನೆ. ಚನ್ನರಾಯನದುರ್ಗ ಮತ್ತು ತೋವಿನಕೆರೆಯ ತಾಕಿನಲ್ಲಿಯೇ ಇರುವ ಬೂಧಗವಿ- ಸಿದ್ಧರಬೆಟ್ಟಕ್ಕೆ ಬುಕಾನನ್ ಭೇಟಿ ನೀಡದಿರುವುದು ಚಾರಿತ್ರಿಕ ದಾಖಲೀಕರಣದ ದೃಷ್ಟಿಯಿಂದ ಆದಿಜಾಂಬವರ ಅರಸ ಕುರಂಗರಾಯನ ಗುರುತು ವಂಚಿತವಾದಂತಾಯಿತು. 14 ಆಗಸ್ಟ್ 1800 ರಂದು ಬುಕಾನನ್ ತುಮಕೂರಿಗೆ ಭೇಟಿನೀಡಿದಾಗ ಇಲ್ಲಿ ಕೇವಲ ಐದುನೂರು ಅಥವಾ ಆರುನೂರು ಮನೆಗಳಿದ್ದವೆಂದೂ, ತುಮಕೂರು ಪಟ್ಟಣದ ಸುತ್ತಲೂ ಸುಭದ್ರವಾದ ಕೋಟೆ ಇತ್ತೆಂದೂ ದಾಖಲಿಸಿದ್ದಾನೆ. ಇಲ್ಲೀಗ ಅವನು ಬೆಸ್ತರು (ಕಬ್ಬೇರರು) ಮತ್ತು ಕುರುಬರು ‘ಲಿಂಗಪ್ಪ’ ಎಂಬ ಗುರುವಿನ ಅನುಯಾಯಿಗಳಾಗಿ ನಡೆದುಕೊಳ್ಳುತ್ತಿದ್ದ ಬಗ್ಗೆ ವಿವರಿಸುತ್ತಾನೆ. ಕುರುಬರ ಅನುಯಾಯಿಗಳ ಮೇಲ್ವಿಚಾರಣೆಯಲ್ಲಿರುವ ಈ ಗುರುವು ‘ಕುರುಬ ಜಂಗಮರು’ ಪೈಕಿಯವನಾಗಿದ್ದಾನೆ. ಶಿವನ ಉಪಾಸಕನಾಗಿರುವುದರಿಂದ ಅವನು ಗುಡಿಯಲ್ಲಿ ನಿದ್ರಿಸುತ್ತಾನೆ. ಅವನು ಶಿವದಾರ ಧರಿಸಿ ಹಣೆಗೆ ಅರಿಶಿನ ಲೇಪಿಸಿಕೊಂಡಿರುತ್ತಾನೆ. ಹೀಗೆಂದು ಫ್ರಾನ್ಸಿಸ್ ಬುಕಾನನ್ ತನ್ನ ವರದಿಯಲ್ಲಿ ವಿವರಿಸಿದ್ದಾನೆ. ಬುಕಾನನ್ ಹೇಳುವಂತೆ, “ಅವನು ಕುರುಬರಿಗೆ ಬಂಡಾರ (ಅರಿಶಿನ ಪುಡಿ) ನೀಡಿ ಹಣೆಗೆ ಹಚ್ಚಿಕೊಳ್ಳಲು ಸೂಚಿಸುತ್ತಾನೆ. ಜೊತೆಗೆ ಧರ್ಮ ಪಾಲಿಸುವಂತೆ ಉಪದೇಶಿಸುತ್ತಾನೆ”.

ವೀರಶೈವರ ಪ್ರಭಾವದಿಂದಾಗಿ ಕುರುಬರ ಗುರುಗಳನ್ನು ‘ಕುರುಬ ಜಂಗಮರು’ ಎಂದು ಕರೆಯುವುದು ವಾಡಿಕೆಯಲ್ಲಿದೆ. ಫ್ರಾನ್ಸಿಸ್ ಬುಕಾನನ್ ತನ್ನ ”A journey from Madras through the countries of Mysore, Malabar and Canarese ಕೃತಿಯಲ್ಲಿ ‘ಕುರುಬ ಜಂಗಮರು’ ಎಂಬ ಹೆಸರಿನಿಂದಲೇ ಕುರುಬರು ತಮ್ಮ ಗುರುಗಳನ್ನು ಕರೆಯುತ್ತಿದ್ದ ವಾಡಿಕೆಯ ಬಗ್ಗೆ ದಾಖಲಿಸಿದ್ದಾನೆ. ಮಾತ್ರವಲ್ಲದೆ ತುಮಕೂರು ಸೀಮೆಯಲ್ಲಿ ಬೆಸ್ತರು (ಕಬ್ಬೇರರು) ಮತ್ತು ಕುರುಬರನ್ನು ಕುರಿತ ತನ್ನ ಸರ್ವೇಕ್ಷಣೆಯಲ್ಲಿ ವಿಶ್ಲೇಷಿಸುತ್ತಾ ಬೆಸ್ತರು (ಕಬ್ಬೇರರು) ಮತ್ತು ಕುರುಬರು ತಮ್ಮ ಗುರುವನ್ನು ‘ಲಿಂಗಪ್ಪ’ ಎಂದು ಕರೆಯುತ್ತಿದ್ದ ಬಗ್ಗೆ ತಿಳಿಸಿದ್ದಾನೆ. ಬೆಸ್ತ (ಕಬ್ಬೇರ) ಸಮುದಾಯದವರು ಕುರುಬರ ಗುರುಗಳಿಗೆ ಅನುಯಾಯಿಗಳಾಗಿದ್ದು ಇವರು ಲಿಂಗಪ್ಪನ ಮೇಲ್ವಿಚಾರಣೆಯಲ್ಲಿ ಇರುವುದರ ಬಗ್ಗೆ ದಾಖಲಿಸಿದ್ದಾನೆ. ಶಿವದಾರ ಧರಿಸಿ ಹಣೆಗೆ ಬಂಡಾರ (ಹರಿಶಿನ ಪುಡಿ) ಹಚ್ಚಿರುವ ಕುರುಬರ ಗುರು, ಬೆಸ್ತ (ಕಬ್ಬೇರ) ಸಮುದಾಯದ ಅನುಯಾಯಿಗಳ ಹಣೆಗೆ ಬಂಡಾರ ಹಚ್ಚಿಕೊಳ್ಳಲು ಸೂಚಿಸುತ್ತಾನೆ. ಜೊತೆಗೆ ಶೈವಧರ್ಮ ಪಾಲಿಸುವಂತೆ ಉಪದೇಶಿಸುತ್ತಾನೆ. ತುಮಕೂರು ಸೀಮೆಯ ಬೆಸ್ತರಿಗೆ ಹೀಗೆ ಧರ್ಮೋಪದೇಶ ನೀಡುವ ಕುರುಬರ ಗುರುಮಠವು ಸವಣೂರು ಬಳಿಯ ಮೈಲಾರದಲ್ಲಿದೆ ಎಂದು ಫ್ರಾನ್ಸಿಸ್ ಬುಕಾನನ್ ದಾಖಲಿಸಿದ್ದಾನೆ. 14 ಆಗಸ್ಟ್ 1800 ರಂದು ತುಮಕೂರು ಸೀಮೆಯಲ್ಲಿ ಫ್ರಾನ್ಸಿಸ್ ಬುಕಾನನ್ ಸರ್ವೇಕ್ಷಣಾ ಸಮಯದಲ್ಲಿ ಬೆಸ್ತರು (ಕಬ್ಬೇರ) ಸಮುದಾಯದ ಜನರಿಗೆ ಕುರುಬರ ಗುರುವೇ ಧಾರ್ಮಿಕ ಗುರುವಾಗಿರುವ ಅಂಶವನ್ನು ಕುರಿತು ಹೀಗೆ ದಾಖಲಿಸಿದ್ದಾನೆ : “They have a Guru; yet, although he was here fifteen days ago, they know very little about him. He is a married man, is named Linguppa, and was attended by servants of the Curuba caste. His disciples here were Cubbaru, Curubas, and some other cultivators. He slept in one of the temples of the Saktis. All these circumstances would point him out to be a worshipper of Siva, and one of the Curubaru Jangamas; but he wore a thread, and marked his forehead with turmeric, like a worshipper of Jaina. He gave the Cubbar turmeric to mark their fore-heads, and accepted of their Dharma, or charity. His Matam, or college, is at Meilar, near Savanuru”. (Buchanan, Chapter VII, Page 25, 26) ಇದೇ ಅಧ್ಯಾಯದಲ್ಲಿ ಫ್ರಾನ್ಸಿಸ್ ಬುಕಾನನ್‌ ಕುರುಬರ ಭೈರವಾರಾಧನೆಯನ್ನು ಮತ್ತು ಕುರುಬರ ಗುರುವು, ಬೆಸ್ತ ಸಮುದಾಯದ ಭಕ್ತರಿಗೆ ಬಂಡಾರ ಹಚ್ಚುವಿಕೆಯನ್ನು ಕುರಿತು ಹೀಗೆ ಹೇಳಿದ್ದಾನೆ : “The Curubas here say, that, at a temple of Bhairawa at Hervay Samudra, (ಹರೇಸಮುದ್ರಂ) which is near Mercasera, (ಮಡಕಶಿರಾ) to the north of this place, and where one of their cast acts as Pújári, the image represents a man sitting on horseback, with the Linga round his neck, and a drawn sword in his hand. They offer sacrifices to this image, and eat the flesh. The family of Ravana have now spread all over the country; but Sarur is still considered as the proper family seat. Their Guru has the power of restoring any outcaste to the enjoyment of full communion. They have a book peculiar to the caste, called Jiraga Chapagodu. It is written in the language of Karnáta, and gives an account of the tribe. The Curubaru buy their wives; a girl of a good family costs from 30 to 40 Fanams; a girl of the bastard or Cutiga (ಕೂಟಿಗೆ) breed costs 15 Fanams, or 10s”. (Buchanan, chapter V||, page 26)
ಫ್ರಾನ್ಸಿಸ್ ಬುಕಾನನ್ ದಾಖಲಿಸುವಂತೆ ತುಮಕೂರು ಸೀಮೆಯ ಮಡಕಶಿರಾ ಸಮೀಪದ ಹರೇಸಂದ್ರ ಎಂಬ ಗ್ರಾಮದಲ್ಲಿರುವ ಭೈರವನ ದೇವಾಲಯಕ್ಕೆ ಒಕ್ಕಲಾಗಿ ನಡೆದುಕೊಳ್ಳುತ್ತಾರೆ. ಇಲ್ಲಿರುವ ದೇವಾಲಯಕ್ಕೆ ಕುರುಬ ಕುಲದವನೇ ಒಬ್ಬ ವ್ಯಕ್ತಿ ಪೂಜಾರಿಯಾಗಿದ್ದಾನೆ. ದೇವರ ಮೂರ್ತಿ ಕುದುರೆ ಮೇಲೆ ಕುಳಿತ ಮನುಷ್ಯನ ಆಕಾರದಲ್ಲಿದೆ. ಪೂಜಾರಿಯ ಕೊರಳಲ್ಲಿ ಒಂದು ಲಿಂಗವಿದೆ. ಹಾಗೂ ಕೈಯಲ್ಲಿ ಕತ್ತಿ ಹಿಡಿದಿದ್ದಾನೆ. ಅವರು ದೇವರ ಮೂರ್ತಿಗೆ ಪ್ರಾಣಿ ಬಲಿ ನೀಡಿ ಅದರ ಮಾಂಸವನ್ನು ಸೇವಿಸುತ್ತಾರೆ. ದೇಶಾದ್ಯಂತ ‘ರಾವಣ’ನ ಕುಟುಂಬ ವ್ಯಾಪಿಸಿಕೊಂಡಿದೆ. ಆದರೆ ‘ಸರೂರು’ ಈಗಲೂ ಕೌಟುಂಬಿಕ ಜೀವನ ನಡೆಸಲು ಸೂಕ್ತ ಸ್ಥಳವೆಂದು ತೀರ್ಮಾನಿಸಲಾಗಿದೆ. ಯಾವುದೇ ಅನ್ಯ ಜಾತಿಯ ವ್ಯಕ್ತಿಗಳನ್ನು ಸಂತೋಷ ಕೂಟದಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವ ಅಧಿಕಾರವನ್ನು ಪೂಜಾರಿ ಹೊಂದಿರುತ್ತಾನೆ. ‘ಜೀರಗಾ ಚಾಪಗೋಡು’ ಎಂದು ಕರೆಯಲ್ಪಡುವ ವಿಚಿತ್ರವಾದ ಒಂದು ಗ್ರಂಥವನ್ನು ಆ ಜಾತಿ ಜನರು ಹೊಂದಿದ್ದಾರೆ. ಅದನ್ನು ‘ಕರ್ನಾಟ’ ಭಾಷೆಯಲ್ಲಿ ರಚಿಸಲಾಗಿದೆ. ಅದು ಆ ಬುಡಕಟ್ಟು ಜನರ ಮಾಹಿತಿ ಒಳಗೊಂಡಿದೆ” ಎಂದು ಬುಕಾನನ್ ತನ್ನ ಸರ್ವೇಕ್ಷಣಾ ವರದಿಯಲ್ಲಿ ದಾಖಲಿಸಿದ್ದಾನೆ.

ಹಾಲುಮತ ಕುರುಬ ಸಮುದಾಯವನ್ನು ಕುರಿತು ಫ್ರಾನ್ಸಿಸ್ ಬುಕಾನನ್ ತನ್ನ ಸರ್ವೇಕ್ಷಣೆಯ ವರದಿಯಲ್ಲಿ ಇವೆಲ್ಲವನ್ನೂ ದಾಖಲಿಸಿರುವುದರಿಂದಾಗಿ, ಅವನ ಸುತ್ತಾಟದ ದಾರಿಯ ಹೆಜ್ಜೆಗುರುತುಗಳನ್ನು ಅನುಸರಿಸಿ ನಾನು, ಆಂಧ್ರಪ್ರದೇಶದ ಹರೇಸಮುದ್ರಂ ಗ್ರಾಮಕ್ಕೆ ಭೇಟಿ ನೀಡಿದೆ. ಇಲ್ಲಿನ ಹಾಲುಮತ ಕುರುಬರ ಭೈರವಾರಾಧನೆಯ ಕುರುಹುಗಳನ್ನು ಹುಡುಕಿಕಾಡಿದೆ. ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆ (ಅನಂತಪುರಂ ಜಿಲ್ಲೆ) ಮಡಕಶಿರಾ ಪಟ್ಟಣದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಹರೇಸಮುದ್ರಂ ಗ್ರಾಮದಲ್ಲಿ ನಾನು ಕೈಗೊಂಡ ಅಧ್ಯಯನದ ಕ್ಷೇತ್ರಕಾರ್ಯ ಕುರಿತು ಬರೆಯಲಿರುವ ಲೇಖನಕ್ಕಾಗಿ ನಿರೀಕ್ಷಿಸುತ್ತಿರಿ. ಅಂದ್ಹಾಗೆ ಈ ಊರಿನಲ್ಲಿ ನಾನೆಲ್ಲಿಯೂ ಕಂಡು ಕೇಳರಿಯದಷ್ಟು ನೂರೊಂದು ಪುರಾತನ ಗುಡಿಗಳಿವೆ. ವಂದನೆಗಳು.(ಮಾರಸಮುದ್ರ -ವಡ್ಡಗೆರೆ ನಾಗರಾಜಯ್ಯ)

LEAVE A REPLY

Please enter your comment!
Please enter your name here