ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿಯೊಬ್ಬರ ಬಂಧನವಾಗುತ್ತಿದ್ದಂತೆ, ಹುಲಿ ಉಗುರಿನ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಈ ಹುಲಿ ಉಗುರಿನ ಬಗ್ಗೆ ಜನಕ್ಕೆ ಇಷ್ಟೊಂದು ಕ್ರೇಜ್ ಯಾಕೆ ಎನ್ನುವ ಪ್ರಶ್ನೆ ಕೂಡಾ ಮುನ್ನೆಲೆಗೆ ಬಂದಿದೆ.
ವನ್ಯಜೀವಿ ಸಂರಕ್ಷಣೆಗೆಂದೆ ಕಾನೂನಲ್ಲಿ ಕೆಲವು ನಿಯಮಗಳಿವೆ. ಆದರೆ ಈ ಎಲ್ಲಾ ಕಾನೂನು, ಕಟ್ಟು ಪಾಡುಗಳನ್ನು ಮೀರಿ ಜನ ಕಾಡು ಪ್ರಾಣಿಗಳನ್ನು ಭೇಟೆಯಾಡಿ ಮಾಂಸ, ಚರ್ಮ, ಮೂಳೆ, ಕೊಂಬು, ಉಗುರು, ಕೂದಲು ಇತ್ಯಾದಿ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಾಣಿಗಳ ಅವಶೇಷಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಪುರಾತನ ಕಾಲದಿಂದಲೂ ಪ್ರಾಣಿಗಳ ಅವಶೇಷಗಳಿಗೆ ಯಾಕಿಷ್ಟು ಬೇಡಿಕೆ ಇದೆ? ಹಾಗಿದ್ರೆ ಹುಲಿ ಉಗುರು ಅಷ್ಟು ಪವರ್ಫುಲ್ ಇದೆಯಾ..? ಎನ್ನುವ ಪ್ರಶ್ನೆ ಹಲವರಿಗೆ.
ಪುರಾಣದ ಕತೆಗಳಲ್ಲಿ ರಾಜರೂ ಸಹ ಹುಲಿ ಉಗುರು ಧರಿಸುತ್ತಿದ್ದರು ಎಂದು ನಾವು ಚಿತ್ರದಲ್ಲಿ ನೋಡಿದ್ದೇವೆ ಹಾಗೂ ಕಥೆಗಳಲ್ಲಿ ಕೇಳಿದ್ದೇವೆ. ಅಲ್ಲದೆ, ಈ ಹಿಂದೆ ಸ್ವಾಮೀಜಿಗಳು ತಾವು ಕುಳಿತು ಕೊಳ್ಳಲು ಹುಲಿ ಚರ್ಮವನ್ನು ಬಳಕೆ ಮಾಡುತ್ತಿದ್ದರು ಎಂದು ಅದಕ್ಕೆ ಕಾರಣ ಹೇಳಲಾಗುತ್ತದೆ.
ಋಷಿ ಮುನಿಗಳು ಏಕೆ ಬಳಸುತ್ತಿದ್ದರು?: ಹುಲಿ ಚರ್ಮವು ಬೆಚ್ಚಗಿರುತ್ತದೆ. ಧ್ಯಾನ ಮಾಡುವಾಗ ನಮ್ಮ ಬೆನ್ನುಹುರಿಯ ಉದ್ದಕ್ಕೂ ಶಾಖವನ್ನು ಹೆಚ್ಚಿಸುತ್ತದೆ. ಅಲ್ಲದೆ, ಧ್ಯಾನ ಮಾಡುವಾಗ ಇತರ ಪ್ರಾಣಿಗಳನ್ನು ದೂರವಿರಿಸಲು ಇದು ಸಹಾಯ ಮಾಡುತ್ತದೆ. ಅದಕ್ಕಾಗಿ ಘೋರ ಕಾನನದಲ್ಲಿಯೂ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದರು ಎನ್ನಲಾಗಿದೆ. ರಾಜರು ಅಂದಿನ ಕಾಲದಲ್ಲಿ ಕಾಡಿನ ಪ್ರಾಣಿಗಳನ್ನು ಬೇಟೆಯಾಡಿದ ಪರಾಕ್ರಮಕ್ಕಾಗಿ ಧರಿಸುತ್ತಿದ್ದರು ಎನ್ನುವ ನಂಬಿಕೆ ಇದೆ.
ಹುಲಿ ಉಗುರನ್ನು ಧರಿಸುವುದರ ಹಿಂದಿನ ಉದ್ದೇಶ?: ವ್ಯಾಘ್ರ ಉಗುರನ್ನು ಪದಕವನ್ನಾಗಿ ಧರಿಸುವುದರಿಂದ ಹೃದಯಕ್ಕೆ ಹತ್ತಿರವಾಗಿ ಧರಿಸುವುದು ಅದೃಷ್ಟ ಮತ್ತು ರಕ್ಷಣೆಯನ್ನು ತರುತ್ತದೆ. ಹುಲಿ ಉಗುರಿನ ಲಾಕೆಟ್ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹಿಂದಿನಿಂದಲೂ ನಂಬಲಾಗುತ್ತದೆ. ಈ ಪ್ರಾಣಿಗಳ ಉಗುರುಗಳು ಮಾಂತ್ರಿಕ ಗುಣಗಳನ್ನು ನಕಾರಾತ್ಮಕ ಶಕ್ತಿಗಳು ಹತ್ತಿರ ಸುಳಿಯದಂತೆ ರಕ್ಷಣೆ ನೀಡುತ್ತದೆ. ಅಲ್ಲದೆ, ಕಷ್ಟದ ಸಮಯದಲ್ಲಿ ಧೈರ್ಯ, ಶಕ್ತಿ ದೊರೆಯುತ್ತದೆ ರಾಜಯೋಗ ಬರುತ್ತದೆ. ರೋಗ ಅಥವಾ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುವುದರ ಜತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಭಾವಿಸಲಾಗಿದೆ. ಆದರೆ ಇದು ಮೂಢನಂಬಿಕೆ, ಈ ಕುರಿತಾಗಿ ಶಾಸ್ತ್ರಗಳಲ್ಲಿ ಯಾವುದೇ ಖಚಿತ ಆಧಾರ, ಪುರಾವೆಗಳಿಲ್ಲ.
ಹುಲಿ ಉಗುರು ಲಾಕೆಟ್‌ಗಳ ಮೇಲೆ ಯಾಕಿಷ್ಟು ಒಲವು?: ಇಂದಿನ ಕಾಲದಲ್ಲಿ ಅಪರೂಪವಾದ್ದು, ಹಾಗೂ ವಿಶೇಷವಾದದ್ದು ಯಾವುದಾದರು ವಸ್ತು ನಮ್ಮ ಬಳಿ ಇದ್ದರೆ ಅದು ನಮ್ಮ ವರ್ಚಸ್ಸು ಹೆಚ್ಚಿಸುತ್ತದೆ ಎನ್ನುವುದು ಹಲವರ ವಾದ. ಹುಲಿ ಉಗುರು ಅತ್ಯಂತ ವಿಶಿಷ್ಟ ಹಾಗೂ ವಿಶೇಷವಾದ್ದರಿಂದ ಇದನ್ನು ಡಾಲರ್ ಮಾಡಿಕೊಂಡು ಧರಿಸುವವರಿಗೆ ವಿಶಿಷ್ಟವಾದ ಆಕರ್ಷಣೆಯನ್ನು ನೀಡುತ್ತದೆ. ಜನರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಬಹುದು. ಫ್ಯಾಷನ್ ಆಗಿ ಕೂಡಾ ಕಾಣುತ್ತದೆ. ಇದೊಂದೇ ಕಾರಣ ಸಮಂಜಸವೆನಿಸುತ್ತದೆ.
ಈಗ ಕಾನೂನು ಬಿಗಿಯಾಗಿದೆ, ಅಷ್ಟೇ ಅಲ್ಲ, ವನ್ಯಜೀವಿಗಳ ರಕ್ಷಣೆಗೆ ಜನರಲ್ಲಿ ಅರಿವನ್ನು ಸಹ ಮೂಡಿಸಲಾಗುತ್ತಿದೆ. ಆದರೆ ಇವತ್ತಿಗೂ ಹುಲಿ ಉಗುರು, ಹಲ್ಲು, ಆನೆ ಬಾಲದ ಕೂದಲು, ದಂತ ಇವುಗಳನ್ನು ಇಟ್ಟುಕೊಂಡರೆ ತಮಗೊಂದು ಅಗೋಚರ ಶಕ್ತಿ ಸಿಕ್ಕಿಬಿಡುತ್ತದೆ ಎಂದು ಜನರಲ್ಲಿ ವನ್ಯಪ್ರಾಣಿಗಳ ಬಗ್ಗೆ ವಿಚಿತ್ರ ಹಾಗೂ ಯಾವುದೇ ಆಧಾರ ಇಲ್ಲದಂಥ ನಂಬಿಕೆಯೊಂದು ಬೆಳೆದು ಹೋಗಿದೆ. ಇನ್ನು ಬದಲಾದ ಕಾಲಮಾನದಲ್ಲಿ. ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿರುವ ಬಿಗಿಯಾದ ಕಾನೂನುಗಳ ಬಗ್ಗೆ ತಿಳಿವಳಿಕೆ ಇರುವಂಥವರು ಯಾರೂ ಇಂಥ ಮೂರ್ಖತನದ ಕೆಲಸಕ್ಕೆ ಕೈ ಹಾಕಲ್ಲ. ಆದ್ದರಿಂದ ಉಗುರಿನ ಆಸೆಗೆ ಬಿದ್ದು, ಮೂಕ ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುವ ಕೆಲಸ ಮಾಡುವುದು ಅಪರಾಧವಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಅಸಲಿ ಹುಲಿ ಉಗುರುಗಳ ಆಭರಣ ಮಾಡುವುದು, ಮಾರಾಟ ಮಾಡುವುದು, ಧರಿಸುವುದು ಎಲ್ಲವೂ ಅಪರಾಧ. ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.(
ಸದ್ವಿಚಾರ ನಿತಿನ್ ಶಾಮನೂರು ವಾಲ್ ನಿಂದ)