ಚಿತ್ರದುರ್ಗ: ಚಳ್ಳಕೆರೆ ಸಮೀಪ ಭೀಕರ ರಸ್ತೆ ಅಪಘಾತ – ಪೊಲೀಸ್ ಸಿಬ್ಬಂದಿಗಳ ಅಕಾಲಿಕ ನಿಧನಕ್ಕೆ ಸಂತಾಪ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ಬೆಂಗಳೂರಿನಿಂದ ಬಳ್ಳಾರಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಪೊಲೀಸ್ ಸಿಬ್ಬಂದಿಗಳಲ್ಲಿ ಮೂವರು ದುರ್ಘಟನೆಯಲ್ಲಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದು ತಿಳಿದು ಮನಸ್ಸಿಗೆ ಭಾರೀ ಆಘಾತವಾಯಿತು.
ಈ ದುರ್ಘಟನೆಯ ವಿಷಯ ತಿಳಿದ ತಕ್ಷಣ ಮಾನ್ಯ ಗೃಹ ಸಚಿವರಾದ ಶ್ರೀ ಜಿ. ಪರಮೇಶ್ವರ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡೆ. ಇದೇ ಸಂದರ್ಭದಲ್ಲಿ ಮೃತರಾದ ಪೊಲೀಸ್ ಸಿಬ್ಬಂದಿಗಳ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿ ಧೈರ್ಯ ಹೇಳಲಾಯಿತು.
ದುರ್ಘಟನೆಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಗಳ ಆತ್ಮಗಳಿಗೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಗಳು ಶೀಘ್ರವಾಗಿ ಗುಣಮುಖರಾಗಲಿ.





