ಸಿರಗುಪ್ಪ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ನೇತಾಜಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ 3 ತಿಂಗಳವರೆಗೆ ಉಚಿತ ಟ್ಯೂಷನ್‌ಕ್ಲಾಸ್‌ ನಡೆಸಿದ್ದು ಈ ದಿನ ಟ್ಯೂಷನ್ ಕ್ಲಾಸ್ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಸುಧೀರ್‌ ಹಂಗಳೂರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರಿಗೆ ಪ್ರಗತಿನಿಧಿ ನೀಡುವುದು ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೆಸರುವಾಸಿಯಾಗಿದೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಾಂತ 1028 ಶಾಲೆಗಳಿಗೆ ಜ್ಞಾನದೀಪ ಅತಿಥಿ ಶಿಕ್ಷಕರ ನಿಯೋಜನೆ ಮಾಡಲಾಗಿದ್ದು, ಇದಕ್ಕಾಗಿ 4.25 ಕೋಟಿ ಅನುದಾನ ಮೀಸಲಿಡಲಾಗಿದೆ. ಈವರೆಗೆ 10234 ಗೌರವ ಶಿಕ್ಷಕರನ್ನು ಒದಗಿಸಿದ್ದು 29 ಕೋಟಿ 96 ಲಕ್ಷದ 97 ಸಾವಿರ ಮೊತ್ತವನ್ನು ವಿನಿಯೋಗಿಸಲಾಗಿದೆ.

ಶಾಲೆಗಳಿಗೆ ಪೀಠೋಪಕರಣ ಒದಗಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯದ 508 ಶಾಲೆಗಳಿಗೆ ರೂ. 2.77 ಕೋಟಿ ಮೌಲ್ಯದ 4064 ಜೊತೆ ಬೆಂಚು-ಡೆಸ್ಕ್‌ಗಳನ್ನು ಒದಗಿಸಿದ್ದು ಇದರಿಂದ 20 ಸಾವಿರದ 320 ವಿದ್ಯಾರ್ಥಿಗಳಿಗೆ ಅನುಕೂಲವಾಗಿರುತ್ತದೆ. ಈವರೆಗೆ 11621 ಪೀಠೋಪಕರಣಗಳನ್ನು ಒದಗಿಸಿದ್ದು ಇದಕ್ಕಾಗಿ 28 ಕೋಟಿ 54 ಲಕ್ಷದ 83 ಸಾವಿರ ಮೊತ್ತ ವಿನಿಯೋಗಿಸಲಾಗಿರುತ್ತದೆ.

ಯೋಜನೆಯ ಪಾಲುದಾರ ಕುಟುಂಬಗಳ ಮಕ್ಕಳಿಗೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಈ ತನಕ ಒಟ್ಟು 1,17,934 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿದ್ದು, ಪ್ರಸ್ತುತ ವರ್ಷ 60,531 ಮಕ್ಕಳಿಗೆ ರೂ. 32.44 ಕೋಟಿ ಮೌಲ್ಯದ ವಿದ್ಯಾರ್ಥಿ ವೇತನ ಒದಗಿಸಲಾಗಿದೆ. ಈವರೆಗೆ 1 ಲಕ್ಷ 25 ಸಾವಿರದ 10 ಜನ ವಿದ್ಯಾರ್ಥಿಗಳಿಗೆ 152 ಕೋಟಿ 74 ಲಕ್ಷದ 42 ಸಾವಿರ ಮೊತ್ತ ವಿನಿಯೋಗಿಸಲಾಗಿರುತ್ತದೆ.

ಇಷ್ಟು ಮಾತ್ರವಲ್ಲದೆ ಹಿಂದೂ ರುದ್ರಭೂಮಿ ಅಭಿವೃದ್ಧಿ, ಗ್ರಾಮ ಕಲ್ಯಾಣ ಯೋಜನೆ, ನವಚೇತನ ಕಾರ್ಯಕ್ರಮ, ಗೋ-ಶಾಲೆ ಅಭಿವೃದ್ಧಿ, ಜನಮಂಗಲ ಕಾರ್ಯಕ್ರಮ, ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮ, ಪ್ರಕೃತಿ ವಿಕೋಪಕ್ಕೆ ಪರಿಹಾರ, ವಿಶೇಷಚೇತನರಿಗೆ ಸಲಕರಣೆಗಳ ವಿತರಣೆ, ನಿರ್ಗತಿಕರಿಗೆ ಮಾಸಾಶನ ವಿತರಣೆ, ನಿರ್ಗತಿಕರಿಗೆ ವಾತ್ಸಲ್ಯ ಕಿಟ್‌ಗಳ ವಿತರಣೆ, ವಾತ್ಸಲ್ಯ ಮನೆ ರಚನೆ, ಶುದ್ಧಗಂಗಾ ಘಟಕಗಳು, ಕೆರೆಗಳ ಹೂಳೆತ್ತುವುದು, ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಯೋಜನೆಯು ಬಡವರ ಪಾಲಿನ ಆಶಾಕಿರಣವಾಗಿದೆ, ಈ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಲು ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಮಾಹಿತಿ ಮಾರ್ಗದರ್ಶನದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಟ್ಯೂಷನ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಈ ವರ್ಷ ಉತ್ತಮ ಫಲಿತಾಂಶ ಪಡೆಯುವುದರೊಂದಿಗೆ ಶಾಲೆಗೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನೇತಾಜಿ ಪ್ರೌಢಶಾಲೆಯ ಕಾರ್ಯದರ್ಶಿ ಜಯಲಕ್ಷ್ಮೀ, ಶಾಲಾ ಮುಖ್ಯಗುರಗಳಾದ ರಾಮಕೃಷ್ಣ ಪೂಜಾರ, ಶಿಕ್ಷಕರಾದ ಸೋಮಲಿಂಗಪ್ಪ, ಭಾಗ್ಯಶ್ರೀ ಪಾಟೀಲ್, ಜಡೇಶ, ಅನ್ನಪೂರ್ಣ, ಪಲ್ಲವಿ, ಮಲ್ಲಯ್ಯ ಹಾಗೂ ವಲಯ ಮೇಲ್ವಿಚಾರಕ ಹನಮಪ್ಪ, ಸ್ಥಳೀಯ ಸೇವಾಪ್ರತಿನಿಧಿ ಲಕ್ಷ್ಮೀ, ದೇವಿ, ವಿದ್ಯಾರ್ಥಿ ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here