1937ರಲ್ಲಿ ಮುಂಬೈ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷದ (Independent Labour Party) ಅಭ್ಯರ್ಥಿಯಾಗಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಧ್ಯ ಮುಂಬೈ ಸಾಮಾನ್ಯ ಕ್ಷೇತ್ರದಿಂದ (ಬೈಖಳಾ ಮತ್ತು ಪರಳ) ಸ್ಪರ್ಧಿಸಿದ್ದರು. ಅವರ ಚುನಾವಣೆಯ ಮತಪತ್ರವಿದು. ಅವರ ಚುನಾವಣಾ ಚಿಹ್ನೆ ‘ಮನುಷ್ಯ’ ಆಗಿತ್ತು.
ಅವರ ವಿರುದ್ಧ, ಕಾಂಗ್ರೆಸ್ ಸೇರಿ ಇತರ ಆರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 17 ಫೆಬ್ರವರಿ, 1937 ರಂದು ಚುನಾವಣೆಗಳು ನಡೆದವು.
ಫಲಿತಾಂಶಗಳನ್ನು 24 ಫೆಬ್ರವರಿ, 1937 ರಂದು ಘೋಷಿಸಲಾಯಿತು ಮತ್ತು ಡಾ. ಅಂಬೇಡ್ಕರ್ ಭಾರಿ ಬಹುಮತದಿಂದ ಆಯ್ಕೆಯಾದರು.
1937ರ ಪ್ರಾಂತೀಯ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ 17 ಸ್ಥಾನಗಳಲ್ಲಿ 14 ಸ್ಥಾನಗಳನ್ನು ILP ಪಡೆದುಕೊಂಡಿತು. ಇದರಲ್ಲಿ 11 ಮೀಸಲು ಕ್ಷೇತ್ರಗಳು.
ತಮ್ಮ ಸ್ವತಂತ್ರ ಕಾರ್ಮಿಕ ಪಕ್ಷದ ಪ್ರಣಾಳಿಕೆಯಲ್ಲಿ ಡಾ. ಅಂಬೇಡ್ಕರ್ ಅವರು ತಮ್ಮ ಆರ್ಥಿಕ ಕಾರ್ಯಕ್ರಮವನ್ನು ಪ್ರಮುಖವಾಗಿ ವಿವರಿಸಿದ್ದರು.
ದೇಶದ ಆರ್ಥಿಕತೆಯನ್ನು ಬಲಪಡಿಸುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಆದಾಯ ಹಂಚಿಕೆ ಹೇಗಿರಬೇಕು ಮತ್ತು ದೇಶದ ಕೈಗಾರಿಕಾ ಅಭಿವೃದ್ಧಿ ನಡೆಯುತ್ತಿರುವಾಗಲೇ ಕೃಷಿ ವಲಯದ ಹೆಚ್ಚುವರಿ ಮಾನವ ಸಂಪನ್ಮೂಲವನ್ನು ಕೈಗಾರಿಕಾ ಕ್ಷೇತ್ರಕ್ಕೆ ತರುವ ಕಾರ್ಯಕ್ರಮವನ್ನು ಹೇಗೆ ಜಾರಿಗೆ ತರಬೇಕು ಎಂಬ ಯೋಜನೆ ಅವರದಾಗಿತ್ತು.
ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ILP)ಯು 15 ಆಗಸ್ಟ್ 1936 ರಂದು ಡಾ. ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರೂಪುಗೊಂಡ ಒಂದು ರಾಜಕೀಯ ಸಂಘಟನೆಯಾಗಿದೆ. ಇದು ಭಾರತದಲ್ಲಿನ ಜಾತಿ ಮತ್ತು ಬಂಡವಾಳಶಾಹಿ ವ್ಯವಸ್ಥೆಯನ್ನು ವಿರೋಧಿಸಿತು, ಭಾರತೀಯ ಕಾರ್ಮಿಕ ವರ್ಗವನ್ನು ಬೆಂಬಲಿಸಿತು ಮತ್ತು ಭಾರತದಲ್ಲಿ ಜಾತಿಯನ್ನು ಕಿತ್ತೊಗೆಯಲು ಪ್ರಯತ್ನಿಸಿತು.
ILP ಯ ರಚನೆಯನ್ನು ಕಮ್ಯುನಿಸ್ಟ್ ನಾಯಕರು ಸ್ವಾಗತಿಸಲಿಲ್ಲ ಅಥವಾ ಬೆಂಬಲಿಸಲಿಲ್ಲ, ಇದು ಕಾರ್ಮಿಕ ವರ್ಗದ ಮತಗಳಲ್ಲಿ ವಿಭಜನೆಗೆ ಕಾರಣವಾಗುತ್ತದೆ ಎಂದು ವಾದಿಸಿದರು. ಕಮ್ಯುನಿಸ್ಟ್ ನಾಯಕರು ಕಾರ್ಮಿಕರ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದಾರೆಯೇ ಹೊರತು ದಲಿತ ಕಾರ್ಮಿಕರ ಮಾನವ ಹಕ್ಕುಗಳಿಗಾಗಿ ಅಲ್ಲ ಎಂದು ಡಾ. ಅಂಬೇಡ್ಕರ್ ಉತ್ತರಿಸಿದರು.
1938 ರಲ್ಲಿ, ILP ನೇತೃತ್ವದಲ್ಲಿ ಡಾ. ಅಙಬೇಡ್ಕರ್ ಕೊಂಕಣ ಪ್ರದೇಶದಿಂದ ಬಾಂಬೆಗೆ 20,000 ರೈತರ ಮೆರವಣಿಗೆಯನ್ನು ಆಯೋಜಿಸಿದರು. ಸ್ವಾತಂತ್ರ್ಯಪೂರ್ವದ ಅತಿದೊಡ್ಡ ರೈತ ಸಂಚಲನವೆಂದು ಗುರುತಿಸಲ್ಪಡುತ್ತದೆ.
ಅದೇ ವರ್ಷದಲ್ಲಿ, ಕಾರ್ಮಿಕರ ಮುಷ್ಕರ ನಿಯಂತ್ರಿಸಲು ಉದ್ದೇಶಿಸಿದ್ದ ಕೈಗಾರಿಕಾ ವಿವಾದಗಳ ಮಸೂದೆಗೆ ವಿರೋಧವಾಗಿ ILP ಬಾಂಬೆ ಜವಳಿ ಕಾರ್ಮಿಕರನ್ನು ಸಂಘಟಿಸಿತು. ಬಾಂಬೆ ವಿಧಾನಸಭೆಯಲ್ಲಿ ಮಸೂದೆಯನ್ನು ವಿರೋಧಿಸಿತು.
ಕಾರ್ಮಿಕರ ಹಿತರಕ್ಷಣೆಗಾಗಿ ಸ್ಥಾಪಿತವಾದ ಭಾರತದ ಏಕೈಕ ಕಾರ್ಮಿಕರ ಪಕ್ಷ ILP.
ಚಿತ್ರ:
ವಿಜಯ ಸುರವಾಡೆ ಅವರ ಸಂಗ್ರಹದಿಂದ(ಕೃಪೆ:ಅನಿಲ್ ಹೊಸಮನಿ ಫೇಸ್‌ಬುಕ್)





