ಬೆಂಗಳೂರು, ಫೆ.15: ಲೇಖಕ ಹನೂರು ಚನ್ನಪ್ಪ ರಚಿಸಿರುವ ‘ಕಬ್ಬಿಣದ ಕುದುರೆಗಳು’ ಕಾದಂಬರಿಯು ಭಾಷಾ ವಿಜ್ಞಾನ ಮತ್ತು ಸಾಮಾಜಿಕ ನೆಲೆಯ ದೃಷ್ಟಿಯಿಂದ ಅಧ್ಯಯನಾಸಕ್ತರಿಗೆ ಪಠ್ಯವಾಗುವ ಪುಸ್ತಕವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಜ್ಞಾನಭಾರತಿ ಆವರಣದಲ್ಲಿರುವ ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹನೂರು ಚನ್ನಪ್ಪ ರಚಿಸಿರುವ ‘ಕಬ್ಬಿಣದ ಕುದುರೆಗಳು’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಕಥನ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗಗಳ ಒಂದು ಮಾದರಿಯಾಗಿ ಕೃತಿಯನ್ನು ನೋಡಬೇಕಾಗುತ್ತದೆ. ಕಾದಂಬರಿ ಕ್ಷೇತ್ರ ವೈವಿಧ್ಯಮಯವಾದದ್ದು ಎಂದರು.
ಅಭಿವ್ಯಕ್ತಿಯ ವಿನ್ಯಾಸದಲ್ಲಿ ನಿರೂಪಣೆ ತಂತ್ರ ಮತ್ತು ಭಾಷಾ ವೈವಿಧ್ಯತೆ ಸೇರಿರುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾದಂಬರಿ ಪ್ರಪಂಚ ಎಲ್ಲ ರೀತಿಯ ಮಾದರಿಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡು ವಿಕಾಸಹೊಂದಿದ, ಬೆಳೆದಂತ, ಕೆಲವೊಮ್ಮೆ ಸ್ಥಿತ್ಯಂತರಕ್ಕೆ ಕಾರಣವಾದಂತ ಕ್ಷೇತ್ರವಾಗಿದೆ. ಕೆಲವು ಪ್ರಯೋಗಗಳು ಮ್ಯೂಸಿಯಂ ಮಾದರಿಯಲ್ಲಿರುತ್ತದೆ. ಪ್ರಾದೇಶಿಕತೆ ತೋರಿಸುತ್ತೇವೆಂದು ಹೇಳಿ ಪ್ರಜ್ಞಾಪೂರ್ವಕವಾಗಿ ಕೆಲವರು ಹಳ್ಳಿ ಭಾಷೆಯನ್ನು ಬಳಸುವಂತಹ ಕವಿಗಳು, ಕಾದಂಬರಿಕಾರರು ನಮ್ಮಲ್ಲಿದ್ದಾರೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಎಲ್ಲಿ ಬದುಕು ಸ್ಥಗಿತವಾಗಿರುವುದನ್ನು ಹೇಳುತ್ತದೋ ಅಂತಹ ಕೃತಿಗಳು ಮ್ಯೂಸಿಯಂ ಮಾದರಿಯಲ್ಲಿರುತ್ತದೆ. ಎಲ್ಲಿ ಬದುಕಿನ ಚಲನಶೀಲತೆಯನ್ನು ಗ್ರಹಿಸಿ, ಆ ಬುದಕಿನ ಚಲನಶೀಲತೆಯನ್ನು ತನ್ನ ಆತ್ಮಶಕ್ತಿಯಾಗಿ ಪಡೆದುಕೊಂಡಿರುತ್ತದೊ, ಅಂತಹ ಕಾದಂಬರಿಗಳು ಪ್ರಯೋಗಗಳಾಗಿ ಮಾತ್ರ ಉಳಿಯುವುದಿಲ್ಲ. ಯಾವಾಗ ಶಕ್ತಿ ರಾಜಕಾರಣ ಸಾಹಿತ್ಯ ಕ್ಷೇತ್ರದ ವಿಮರ್ಶಾ ಮಾನದಂಡಗಳಾಗಿ ರೂಪುಗೊಳ್ಳುತ್ತದೊ, ಅಂತಹ ಸಂದರ್ಭದಲ್ಲಿ ನಿಜವಾದ ಸಾಹಿತ್ಯ ಕೃತಿಗಳ ಬಗ್ಗೆ ನಡೆಯಬೇಕಾದ ಚರ್ಚೆ ಅದೆಲ್ಲವೂ ನಿರ್ಲಕ್ಷಕ್ಕೆ ಒಳಗಾಗುತ್ತದೆ ಎಂದು ಅವರು ಹೇಳಿದರು.
ಪ್ರಯೋಗಗಳೇ ಪರಂಪರೆಯಾದಾಗ ಅದಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಗಟ್ಟಿಯಾದ ನೆಲೆಯಿರುತ್ತದೆ. ಪ್ರಯೋಗ ಪ್ರಯೋಗಕ್ಕಷ್ಟೇ ಸೀಮಿತವಾದರೆ, ಅದು ತಾತ್ಕಾಲಿಕವಾಗಿರುತ್ತದೆ. ಆದರೆ ಅದಕ್ಕೆ ನಿರಂತರತೆ ಇರುವುದಿಲ್ಲ. ಆದರೆ ನಿಜವಾದ ಪ್ರಯೋಗಗಳು ಒಂದು ಪರಂಪರೆಯಾಗುವ ಶಕ್ತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಕನ್ನಡ ಕಾದಂಬರಿ ಕ್ಷೇತ್ರ ಎಷ್ಟು ಪ್ರಯೋಗ ಶೀಲವಾಗಿದೆ ಎಂದರೆ ಸರಳತೆಯಿಂದಲೇ ಸಂಕೀರ್ಣ ವಿಷಯಗಳನ್ನು ಹೇಳಿದ ಕಾದಂಬರಿಗಳು ನಮ್ಮಲ್ಲಿ ಇದ್ದಾವೆ ಎಂದು ಬರಗೂರು ರಾಮಚಂದ್ರಪ್ಪ ನುಡಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ, ಅಂಕಣಕಾರ ರಘುನಾಥ್ ಚ.ಹ., ಸಾಹಿತ್ಯ ಅಕಾಡಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ಕೃತಿಕಾರ ಹನೂರು ಚನ್ನಪ್ಪ ಭಾಗವಹಿಸಿದ್ದರು.





