ದಾವಣಗೆರೆ:ಕೇಂದ್ರ ಸರಕಾರವು ಜಾರಿಗೆ ತಂದಿರುವ ನೂತನ ಲೇಬರ್ ಕೋಡ್‌ಗಳು ಅಕ್ಷರಶಃ ಕಾರ್ಮಿಕರ ಪಾಲಿನ ಮರಣ ಶಾಸನವಾಗಿದೆ. ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಹಾಗೂ ಕಾರ್ಮಿಕರನ್ನು ಜೀತದಾಳುಗಳನ್ನಾಗಿಸುವ ಹುನ್ನಾರ ಅಡಗಿದೆ. ಕೇಂದ್ರ ಸರಕಾರದ ಕಾರ್ಮಿಕ ಸಂಹಿತೆಗಳನ್ನು ಈ ಕೂಡಲೇ ವಾಪಾಸ್ ಪಡೆಯಬೇಕು ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್‌ನ ಜಂಟಿ ಕಾರ್ಯದರ್ಶಿ ಹಾಗೂ ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಸರಕಾರವನ್ನು ಆಗ್ರಹಿಸಿದರು. ಕೇಂದ್ರ ಕಾರ್ಮಿಕ ಸಂಘಟನೆಗಳು ‌ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಗಳು ಕೇಂದ್ರ ಸರಕಾರದ ರೈತಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ನಡೆಸಿದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ 4 ಲೇಬರ್ ಕೋಡ್‌ಗಳು ಹಾಗೂ ಜನ ವಿರೋಧಿ ಮಸೂದೆಗಳನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ, ಕಾರ್ಮಿಕರ ಉದ್ಯೋಗ ಮತ್ತು ಉದ್ಯೋಗ ಭದ್ರತೆಯ ಮೇಲೆ ತಿದ್ದುಪಡಿಯ ನೆಪದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಕರೆ‌ ನೀಡಿರುವ ಒಂದು ದಿನದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕಿಂಗ್ ವಲಯದ ಪ್ರಮುಖ ನೌಕರರ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಹಾಗೂ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮುಷ್ಕರದಲ್ಲಿ ಪಾಲ್ಗೊಂಡವು.



ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ಕಾರ್ಮಿಕ ಕಾನೂನುಗಳು ಕಾರ್ಮಿಕರ ಪರವಾಗಿರದೇ ಬಂಡವಾಳಷಾಹಿಗಳ ಪರವಾಗಿದೆ. ಈ ಮುಷ್ಕರ ಕೇವಲ ಕಾರ್ಮಿಕರ, ರೈತರ, ಕೂಲಿಕಾರರ, ದುಡಿಯುವ ಜನರ ಹೋರಾಟವಷ್ಟೇ ಅಲ್ಲ. ಇದು ಕೆಲಸದ ಹಕ್ಕು, ಬದುಕಿನ ಭದ್ರತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಗಾಗಿ ನಡೆಯುತ್ತಿರುವ ಸಾರ್ವತ್ರಿಕ ಮುಷ್ಕರವಾಗಿದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳನ್ನು, ಗ್ರಾಮೀಣ ಬ್ಯಾಂಕುಗಳನ್ನು, ವಿಮಾ ಕಂಪೆನಿಗಳನ್ನು ಖಾಸಗೀಕರಣಗೊಳಿಸಬಾರದು ಮತ್ತು ಸರಕಾರಿ ಬಂಡವಾಳವನ್ನು ಹಿಂತೆಗೆಯಬಾರದು, 5 ದಿನಗಳ ಬ್ಯಾಂಕಿಂಗ್ ಪದ್ಧತಿಯನ್ನು ಜಾರಿಗೆ ತರಬೇಕು, ಎಲ್ಲ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಸೌಲಭ್ಯವನ್ನು ನೀಡಬೇಕು, ಬ್ಯಾಂಕುಗಳಲ್ಲಿ ಎಲ್ಲ ಹುದ್ದೆಗಳ ಅಗತ್ಯ ನೇಮಕಾತಿ ಮಾಡಬೇಕು, ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಿ ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದ ಖಾಸಗಿ ಬಂಡವಾಳಷಾಹಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಬ್ಯಾಂಕುಗಳಲ್ಲಿ ಬಡ್ತಿ ಮತ್ತು ಸೇವಾ ನಿಯಮಗಳ ಪರಿಷ್ಕರಣೆ ಮಾಡಬೇಕು, ಜನಸಾಮಾನ್ಯರಿಗೆ ಬ್ಯಾಂಕುಗಳು ವಿಧಿಸುವ ಶುಲ್ಕವನ್ನು ಕಡಿಮೆ ಮಾಡಬೇಕು, ದಿನಗೂಲಿ ಮತ್ತು ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು, ಐಡಿಬಿಐ ಬ್ಯಾಂಕನ್ನು ಮಾರಾಟ ಮಾಡಬಾರದು ಎನ್ನುವ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗಿಯಾದರು ಎಂದು ಬ್ಯಾಂಕ್ ಕಾರ್ಮಿಕ ನಾಯಕ ಕೆ‌.ರಾಘವೇಂದ್ರ ನಾಯರಿ ಹೇಳಿದರು.ಹೊಸದಾಗಿ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಬೇಕು, ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆದು ಮೊದಲಿದ್ದ ಕೃಷಿಕೂಲಿ ಕಾರ್ಮಿಕ ಸ್ನೇಹಿ ನರೇಗಾ ಯೋಜನೆಯನ್ನು ಮರುಸ್ಥಾಪಿಸಬೇಕು, ಸರಕಾರಿ ಬ್ಯಾಂಕುಗಳ ವಿಲೀನ ಮತ್ತು ಖಾಸಗೀಕರಣ ಕೈಬಿಡಬೇಕು, ಭೂಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು, ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಸಗಿಕರಣ ಪ್ರಸ್ತಾಪವನ್ನು ಕೈಬಿಡಬೇಕು, ಬೀಜ ಕಾಯ್ದೆಯನ್ನು ಹಿಂಪಡೆಯಬೇಕು, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆಯನ್ನು ರದ್ದುಗೊಳಿಸಬೇಕು, ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ ಮಾಡುವ ಅಧಿಸೂಚನೆ ಹೊರಡಿಸಬೇಕು ಎನ್ನುವ ಹತ್ತು ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾದ ರೈತ ಸಂಘಟನೆಗಳು, ಬ್ಯಾಂಕ್-ವಿಮೆ-ಕಾರ್ಖಾನೆಗಳು ಸೇರಿದಂತೆ ಸ್ವತಂತ್ರ ಸಂಘಟನೆಗಳು ಒಂದು ದಿನದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು.

ಮುಷ್ಕರದ ಅಂಗವಾಗಿ ಜಿಲ್ಲಾ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ, ಸಂಯುಕ್ತ ಕಿಸಾನ್ ಮೋರ್ಚಾ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ, ನೆರಳು ಬೀಡಿ ಕಾರ್ಮಿಕರ ಸಂಘ ಮತ್ತು ಹತ್ತು ಹಲವು ರೈತ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ದಾವಣಗೆರೆ ನಗರದ ಜಯದೇವ ವೃತ್ತದಿಂದ ಕಾರ್ಮಿಕರ ಮೆರವಣಿಗೆ ಆರಂಭವಾಗಿ ಕೊನೆಯಲ್ಲಿ ಬಹಿರಂಗ ಸಭೆಯೊಂದಿಗೆ ಮುಕ್ತಾಯವಾಯಿತು.

ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಮತ್ತು ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ‌ನೌಕರರ ಸಂಘದ ನಾಯಕರುಗಳಾದ ಕೆ.ರಾಘವೇಂದ್ರ ನಾಯರಿ, ನಾಗರಾಜ ನಾಶಿ, ಕೆ.ವಿಶ್ವನಾಥ ಬಿಲ್ಲವ, ಹೆಚ್.ಎಸ್.ತಿಪ್ಪೇಸ್ವಾಮಿ, ಶ್ರೀಹರ್ಷ, ಪರಶುರಾಮ, ಆಂಜನೇಯ ಆರ್, ಎಂ.ಎಂ.ಸಿದ್ದಲಿಂಗಯ್ಯ, ಅಣ್ಣಪ್ಪ ನಂದಾ, ಸೈಯದ್ ಚಾಂದಬಾಷಾ, ಹೆಚ್.ಜೆ.ಆಶಾ, ಆರ್‌.ಮಂಜಪ್ಪ, ಕೆ.ರವಿಶಂಕರ್, ಶ್ರೀನಿವಾಸ ನಾಡಿಗ್, ಜ್ಞಾನೇಶ್ವರ ಮಾಳವಾಡೆ, ಎಸ್.ಪ್ರಶಾಂತ್, ಆಕನೂರು ತಿಪ್ಪೇಸ್ವಾಮಿ, ಮಂಜಮ್ಮ, ಅಶ್ವಿನಿ ಟಿ, ಗಂಗು ಬಸವರಾಜ್, ರಾಜೇಶ್, ಸುನಂದಮ್ಮ, ಅನಿಲ್, ಯಲ್ಲಪ್ಪ, ರೇಖಾ, ಪವನ್, ಮೇಕಲ ಕೀರ್ತಿ, ಶ್ರೀನಿವಾಸ ಬಾದಷಹ, ನರೇಶ್, ಸೂರ್ಯನಾರಾಯಣ, ಲಕ್ಷ್ಮಿನಾರಾಯಣ, ಅಬ್ರಾರ್ ಅಹಮದ್, ದುರ್ಗಪ್ಪ‌, ಜೋಸೆಪ್ ಮತ್ತಿತರರು ಮುಷ್ಕರದ ನೇತೃತ್ವವನ್ನು ವಹಿಸಿದ್ದರು.

LEAVE A REPLY

Please enter your comment!
Please enter your name here