ಬೆಂಗಳೂರು:ಬೆಂಗಳೂರು ಮಹಾನಗರ ಕಮಿಷನರೇಟ್ ವ್ಯಾಪ್ತಿಯ ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಗೋವಿಂದರಾಜು ಅವರನ್ನು ಲೋಕಾಯುಕ್ತ ಪೊಲೀಸರು ನಾಲ್ಕು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಲೆ ಬೀಸಿ ಹಿಡಿದಿದ್ದಾರೆ.

ಪೊಲೀಸ್ ಪೆರೇಡ್ ಗ್ರೌಂಡಿನಲ್ಲಿ ಸಮವಸ್ತ್ರದಲ್ಲಿ ತನ್ನ ಕೈಯಾರೆ ಲಂಚ ಪಡೆಯುತ್ತಿದ್ದ ಆರೋಪಿ ಗೋವಿಂದ ರಾಜು ಅವರನ್ನು ಲೋಕಾಯುಕ್ತ ಪೊಲೀಸರು ಕಳ್ಳನನ್ನು ಹಿಡಿಯುವಂತೆ ಹಿಡಿದುಕೊಂಡಿದ್ದಾರೆ,ಆತನ ಕರಕಮಲಗಳನ್ನು ಪಂಚರ ಸಮ್ಮುಖದಲ್ಲಿ ಪಂಚನಾಮೆ ಮಾಡಿ‌ಸುತ್ತಾರೆ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆತನ ಹೆಂಡತಿ ಮಕ್ಕಳು ಬಂಧು ಬಳಗ ತಾಯಿ ತಂದೆಯವರು ಆತನಿಗೆ ಪಾಠ ಹೇಳಿಕೊಟ್ಟ ಶಿಕ್ಷಕರು ಎಲ್ಲರೂ ನೋಡುತ್ತಿರುತ್ತಾರೆ..ಯಾಕಿಂತಹ ಕೆಲಸ ಮಾಡ್ತಾರೆ. ಈತನಿಂದ ಹಣ ವಸೂಲಿ ಮಾಡಿ ಪೋಸ್ಟಿಂಗ್ ಕೊಟ್ಟಿರುವ ಬ್ರೋಕರ್ ರಾಜಕಾರಣಿಗಳು ಡೀಲರುಗಳು ಆರಾಮವಾಗಿರುತ್ತಾರೆ.

ದೂರುದಾರರು ಮತ್ತು ಆರೋಪಿಗಳಿಬ್ಬರ ಬಳಿಯೂ ಈತ ಹಣ ವ‌ಸೂಲಿ ಮಾಡಿ ಮ್ಯಾನೇಜ್ ಮಾಡುವ ಕಲೆ ಈತನಿಗಿತ್ತು, ಸುಖಾಸುಮ್ಮನೆ ಸಣ್ಣ ಪುಟ್ಟ ಉದ್ಯಮಿಗಳಿಗೆ ತೊಂದರೆ ಕೊಟ್ಟು ವಸೂಲಿ ಮಾಡುವುದರಲ್ಲೂ ಈತ ಅನುಭವಿ ಎಂದು ಪೊಲೀಸ್ ಇಲಾಖೆಯಲ್ಲಿ ಗೋವಿಂದರಾಜು ಹೆಸರುವಾ‌ಸಿಯಂತೆ. ಇನ್ನು ಈತನಿಗೆ ದುರ್ದೆಸೆ ಆರಂಭವಾಯಿತು ನೋಡಿ, ಈತನಿಗೆ ಜಾಮೀನು ದೊರೆಯಬಹುದು,ಆರು ತಿಂಗಳ ನಂತರ ಅಮಾನತು ಹಿಂಪಡೆದು ಕೆಲಸ ಮರಳಿ ಪಡೆಯಬಹುದು,ಆದರೆ ದೀರ್ಘ ಕಾಲದ ನ್ಯಾಯಾಂಗ ವಿಚಾರಣೆಯಲ್ಲಿ ಈತ ಗೆಲ್ಲವುದು ಡೌಟು. ಒಂದು ವೇಳೆ ನಿವೃತ್ತಿಯಾದರೂ ಸಹ ವಿಚಾರಣೆಗೆ ಬ್ರೇಕ್ ಇರುವುದಿಲ್ಲ. ಟ್ರಾಪ್ ಕೇಸುಗಳಲ್ಲಿ ಲೋಕಾಯುಕ್ತ ಪೊಲೀಸರು ಅಚ್ಚುಕಟ್ಟಾಗಿ ಬಲೆ ಹೆಣೆದಿರುತ್ತಾರೆ,ಚಾರ್ಜ್ ಶೀಟ್ ಸಲ್ಲಿಕೆ ಮಾಡುತ್ತಾರೆ. ಲೋಕಾಯುಕ್ತ ಕೇಸುಗಳಲ್ಲಿ ಹೈರಾಣಾಗಿ ಬಿಪಿ ಶುಗರ್ ಹೆಚ್ಚಾಗಿ ಆರೋಪಿಗಳು ಕಿಡ್ನಿ ಢಮಾರ್ ಮತ್ತು ಕೆಲವರಿಗೆ ಲಕ್ವಾ ಹೊಡೆದಿರುವ ಉದಾಹರಣೆಗಳನ್ನು ಕಣ್ಣಾರೆ ಕಂಡಿದ್ದೇನೆ.

ಮೂರ್ನಾಲ್ಕು ವರ್ಷಗಳ ಹಿಂದೆ ಮೈ‌ಸೂರು ಪೊಲೀಸ್ ಅಧಿಕಾರಿಯೊಬ್ಬ ಟ್ರಾಪ್ ಆಗುತ್ತಾನೆ,ವಿಷಯ ಪ್ರಚಾರವಾಗುತ್ತದೆ. ಆತನಿಂದ ನೊಂದಿರುವ ನೂರಾರು ಸಾರ್ವಜನಿಕರು ಖುಷಿಯಾಗಿ Whatsapp ನಲ್ಲಿ ಹಂಚಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ಆತನ ಫೋನ್ ಅವನಲ್ಲಿಯೇ ಇರುತ್ತದೆ. ತನ್ನ ಕುರಿತ ಸಂದೇಶ ಹರಡುತ್ತಿದ್ದವರಿಗೆ ಆತನೇ ಫೋನ್ ಮಾಡಿ ಬೆದರಿಕೆ ಹಾಕುತ್ತಾನೆ, ಈ ಕುರಿತು ಭಾಧಿತ ಹಿರಿಯ ನಾಗರೀಕರು ಠಾಣೆಗೆ ದೂರು ಕೊಡಲು ಹೋದರೆ ಅಲ್ಲಿನ ಅಧಿಕಾರಿ ಹೋಗ್ಲಿ ಬಿಡಿ ಸರ್ ಈ ಕೇಸ್ ನಲ್ಲಿ ಅವನು ಬಚಾವಾದರೆ ಸಾಕು ಇನ್ನು ಬೆದರಿಕೆ ಕೇಸ್ ಯಾಕೆ ಬೇಡ ಬಿಡಿ ಎಂದು ಸಮಾಧಾನ ಮಾಡಿ ಕಳಿಸ್ತಾರೆ.

ಪ್ರಕರಣವೊಂದರಲ್ಲಿ ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಪಾಸ್ತಿ ಹೊಂದಿದ್ದ ಅಧಿಕಾರಿ ಲೋಕಾಯುಕ್ತ ಧಾಳಿಗೆ ತುತ್ತಾದ. ನಿವೃತ್ತಿಯ ನಂತರವೂ‌ ವಿಚಾರಣೆ ಮುಂದುವರೆದು ಅರವತ್ತು ಲಕ್ಷ ರೂಪಾಯಿ ದಂಡ ಮತ್ತು ಐದು ವರ್ಷಗಳ ಜೇಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಪ್ರಕಟವಾದಾಗ ಆತ ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೂ ಶಿಕ್ಷೆಯ ತಡೆ ಮತ್ತು ಜಾಮೀನಿಗಾಗಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು ನ್ಯಾಯಾಲಯಕ್ಕೆ ಕಟ್ಟಬೇಕಾಯಿತು. ಆದರೆ ಆಸ್ಪತ್ರೆಯಿಂದ ಆತನ ಹೆಣವನ್ನು ಡಿಸ್ಚಾರ್ಜ್ ಮಾಡಲಾಯಿತು. ಆತ ಉಳಿಸಿದ ಅನೈತಿಕ ಮಾರ್ಗದ ಸಂಪಾದನೆಯಲ್ಲಿ ಆತನ ಹೆಂಡತಿ ಮಕ್ಕಳು ಬದುಕುತ್ತಿದ್ದಾರೆ. ಈ ಅಧಿಕಾರಿಯ ಅಳಿಯ ಪೊಲೀಸ್ ಅಧಿಕಾರಿಯಾಗಿದ್ದರೂ ಅವನನ್ನು ಬಚಾವ್ ಮಾಡಲು ಸಾಧ್ಯವಾಗಲಿಲ್ಲ.

Executive post ಬೇಕೆಂದು ಒದ್ದಾಡುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಹಣ ಲೂಟಿ ಮಾಡಬೇಕೆಂದು,ಅಪರಾಧಿಗಳು ಸಮಾಜ ಘಾತುಕ ಶಕ್ತಿಗಳು ನೀಡುವ ಎಂಜಲು ಕಾಸಿಗೆ ಕೈಯೊಡ್ಡುವುದು ಕೆಳ ಹಂತದ ಅಧಿಕಾರಿಗಳಿಂದ ಮಾಮೂಲಿ ವ‌ಸೂಲಾತಿಗೆಂದೇ ನಿಂತಿರುತ್ತಾರೆ ಎಂಬುದನ್ನು ನ್ಯಾಯಾಲಯಕ್ಕೆ ಮತ್ತು ಸಾರ್ವಜನಿಕರಿಗೆ ತಮ್ಮ ಈ ರೀತಿಯ ನಡವಳಿಕೆಗಳಿಂದ ತೋರ್ಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here