ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಚಿತ್ರದುರ್ಗ ಜಿಲ್ಲೆಯ ಸಿರಗೆರೆಯ ‘ತರಳಬಾಳು ಜಗದ್ಗುರು ಪೀಠ’ಕ್ಕೆ ವಿಶಿಷ್ಟ ಸ್ಥಾನವಿದೆ. “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ತತ್ವದಡಿ ಬೆಳೆದು ಬಂದ ಈ ಪರಂಪರೆಯಲ್ಲಿ, ಕಳೆದ ಕೆಲವು ವರ್ಷಗಳಿಂದ ಕಂಡುಬಂದಿದ್ದ ಸಣ್ಣದೊಂದು ವಿರಸ ಈಗ ಸುಖಾಂತ್ಯದತ್ತ ಸಾಗಿದೆ. ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಾಣೇಹಳ್ಳಿ ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ನಡುವಿನ ವೈಮನಸ್ಸು ಮರೆತು, ಅವರಿಬ್ಬರೂ ಬರುವ ಜನವರಿ 24 ರಿಂದ ಭದ್ರಾವತಿಯಲ್ಲಿ ನಡೆಯಲಿರುವ ‘ತರಳಬಾಳು ಹುಣ್ಣಿಮೆ’ಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವುದು ನಾಡಿನ ಸಮಸ್ತ ಭಕ್ತಕುಲಕ್ಕೆ ಹಬ್ಬದ ಸಡಗರ ತಂದಿದೆ. ಯಾವುದೇ ಬೃಹತ್ ಸಂಸ್ಥೆಯಲ್ಲಿ ಆಡಳಿತಾತ್ಮಕ ವೈವಿಧ್ಯತೆ ಅಥವಾ ಕಾರ್ಯವೈಖರಿಯ ಭಿನ್ನತೆ ಇರುವುದು ಸಹಜ. ಆದರೆ ಇದನ್ನು ಮನಗಾಣದೇ ಹಲವಾರು ವಿವಿಧ ಸಮಾಜದವರು ತರಳಬಾಳು ಮಠವನ್ನು ಅವಮಾನ ಮಾಡಿದ್ದುಂಟು, ಸಿರಗೆರೆಯ ಮೂಲ ಮಠದ ಆಡಳಿತ ಮತ್ತು ಸಾಣೇಹಳ್ಳಿ ಶಾಖಾಮಠದ ಸ್ವತಂತ್ರ ನಿರ್ಧಾರಗಳ ನಡುವೆ ಕಾಲಕ್ರಮೇಣ ವಿಚಾರಧಾರೆಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದವು. ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಭಿನ್ನಾಭಿಪ್ರಾಯವಾಗಿರದೆ, ಮಠದ ಭಕ್ತರಲ್ಲಿ ಎರಡು ಭಾಗಗಳಾಗಿ ನೋಡುವಂತೆ ಮಾಡಿತ್ತು.ತರಳಬಾಳು ಪೀಠದ ಪರಂಪರೆಯಲ್ಲಿ ಶಿಸ್ತು ಮತ್ತು ನೀತಿ ಸಂಹಿತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಂವಹನದ ಕೊರತೆಯಿಂದಾಗಿ ಕೆಲವು ತಪ್ಪು ತಿಳುವಳಿಕೆಗಳು ಮೂಡಿದ್ದವು. ಇದರಿಂದಾಗಿ ಕಳೆದ ಕೆಲವು ವರ್ಷಗಳ ಹುಣ್ಣಿಮೆ ಮಹೋತ್ಸವಗಳಲ್ಲಿ ಸಾಣೇಹಳ್ಳಿ ಶ್ರೀಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದು ಭಕ್ತರಲ್ಲಿ ನೋವುಂಟು ಮಾಡಿತ್ತು, ಏಕೆಂದರೆ ತರಳಬಾಳು ಸಮಾಜಕ್ಕೆ ಇಬ್ಬರೂ ಶ್ರೀಗಳು ಎರಡು ಕಣ್ಣುಗಳಿದ್ದಂತೆ. ಯಾವುದೇ ಒಂದು ದೊಡ್ಡ ಸಂಸ್ಥೆಯಲ್ಲಿ ಅಥವಾ ಕುಟುಂಬದಲ್ಲಿ ವಿಚಾರಗಳ ಭಿನ್ನಾಭಿಪ್ರಾಯ ಸಹಜ. ಸಿರಿಗೆರೆಯ ಮೂಲ ಪೀಠ ಮತ್ತು ಸಾಣೇಹಳ್ಳಿಯ ಶಾಖಾಮಠದ ನಡುವೆ ವೈಚಾರಿಕ ಭಿನ್ನಾಭಿಪ್ರಾಯಗಳು ಮೂಡಿದ್ದವು ಇದು ರಹಸ್ಯವಾಗಿ ಉಳಿದಿರಲಿಲ್ಲ. ಈ ವೈಮನಸ್ಸು ಭಕ್ತರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ, “ಗುರುಕುಲದ ಹಿತವೇ ಪರಮೋಚ್ಚ” ಎಂಬ ತತ್ವಕ್ಕೆ ಬದ್ಧರಾದ ಇಬ್ಬರೂ ಶ್ರೀಗಳು, ತಮ್ಮ ನಡುವಿನ ಸಣ್ಣಪುಟ್ಟ ಅಸಮಾಧಾನಗಳನ್ನು ಬದಿಗಿಟ್ಟು ಸಮಾಜದ ಏಳಿಗೆಗಾಗಿ ಒಂದಾಗಲು ನಿರ್ಧರಿಸಿರುವುದು ಅವರ ಔದಾರ್ಯಕ್ಕೆ ಸಾಕ್ಷಿ.
ಈ ಬಿಕ್ಕಟ್ಟನ್ನು ಬಗೆಹರಿಸಲು ಸಮಾಜದ ಮುಖಂಡರು, ಹಿರಿಯರು, ಕಿರಿಯರು, ಮತ್ತು ರಾಜಕೀಯ ನಾಯಕರು ನಿರಂತರ ಪ್ರಯತ್ನ ನಡೆಸಿದ್ದರು. ಆದರೆ, ನಿಜವಾದ ಬದಲಾವಣೆ ಸಾಧ್ಯವಾದದ್ದು ಇಬ್ಬರೂ ಶ್ರೀಗಳು ತೋರಿದ ‘ದೊಡ್ಡಗುಣ’ದಿಂದ. ಇತ್ತೀಚೆಗೆ ಸಾವನ್ನಪ್ಪಿದ ಕಾಂಗ್ರೆಸ್ ನಾಯಕರಾದ, ದಾವಣಗೆರೆ ದಣಿ ಎಂದೇ ಹೆಸರಾದ ಶಾಮನೂರು ಶಿವಶಂಕರಪ್ಪ ಸಾವಿನ ಅಂತ್ಯಸಂಸ್ಕಾರದಲ್ಲಿ ಇಬ್ಬರೂ ಗುರುಗಳು ಮುಖಾಮುಖಿಯಾಗಿ ಮಾತನಾಡಿದರು.”ಸಮಾಜದ ಹಿತವೇ ದೊಡ್ಡದು” ಎಂಬ ನಿರ್ಧಾರಕ್ಕೆ ಬಂದ ಶ್ರೀಗಳು, ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ಅಧ್ಯಾಯ ಆರಂಭಿಸಲು ಒಪ್ಪಿಕೊಂಡಿದ್ದಾರೆ. ಸಾಣೇಹಳ್ಳಿ ಶ್ರೀಗಳು ಮೂಲ ಮಠದ ಮೇಲಿರುವ ಗೌರವವನ್ನು ಉಳಿಸುತ್ತಾ ಬಂದವರು, ಸಿರಗೆರೆ ಜಗದ್ಗುರುಗಳು ತರಳಬಾಳು ಮಠವನ್ನು ವಿಶ್ವಾದ್ಯಂತ ಬೆಳೆಸಿದವರು. ಈ ನಮ್ಮ ಇಬ್ಬರು ಗುರುಗಳ ಸಮಾಗಮವು ಕೇವಲ ವ್ಯಕ್ತಿಗಳ ಭೇಟಿಯಲ್ಲ, ಅದು ಸಿದ್ಧಾಂತಗಳ ಮರುಮಿಲನ.

ಭದ್ರಾವತಿಯಲ್ಲಿ ನಡೆಯುವ ತರಳಬಾಳು ಹುಣ್ಣಿಮೆ ಈ ನಮ್ಮ ಇಬ್ಬರು ಗುರುಗಳ ಭದ್ರವಾದ ಕೊಂಡಿಯಾಗಿದೆ. ಹುಣ್ಣಿಮೆಯ ವೈಶಿಷ್ಟ್ಯಬರುವ ಜನವರಿ 24 ರಂದು ಕೈಗಾರಿಕಾ ನಗರಿ ಭದ್ರಾವತಿಯಲ್ಲಿ ಆರಂಭವಾಗಲಿರುವ ತರಳಬಾಳು ಹುಣ್ಣಿಮೆಯು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಇದು ಕೇವಲ ಧಾರ್ಮಿಕ ವಿಧಿವಿಧಾನಗಳ ಆಚರಣೆಯಲ್ಲ, ಬದಲಾಗಿ ‘ಐಕ್ಯತೆಯ ಹಬ್ಬ’. ಹತ್ತಾರು ಅಡಿ ಎತ್ತರದ ವೇದಿಕೆಯ ಮೇಲೆ ಇಬ್ಬರೂ ಶ್ರೀಗಳು ಅಕ್ಕಪಕ್ಕದಲ್ಲಿ ಕುಳಿತು ಆಶೀರ್ವಚನ ನೀಡುವುದನ್ನು ನೋಡಲು ಲಕ್ಷಾಂತರ ಭಕ್ತರು ಕಾತರರಾಗಿದ್ದಾರೆ.
ರೈತ ಚೈತನ್ಯವಾದ ಸಿರಿಗೆರೆ ಶ್ರೀಗಳು ತಮ್ಮ ಕೆರೆ ತುಂಬಿಸುವ ಯೋಜನೆಗಳ ಮೂಲಕ ರೈತರ ಪಾಲಿನ ಭಗೀರಥರಾಗಿದ್ದಾರೆ. ಇತ್ತ ಪಂಡಿತಾರಾಧ್ಯ ಶ್ರೀಗಳು ರಂಗಭೂಮಿಯ ಮೂಲಕ ಸಮಾಜವನ್ನು ತಿದ್ದುವ, ಮತ್ತು ಬಸವಾದಿ ಶಿವ ಶರಣರ ತತ್ವಗಳನ್ನು ಸಾರುವಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರಿಬ್ಬರ ಶಕ್ತಿ ಸೇರಿದರೆ ತರಳಬಾಳು ಮಠದ ಭಕ್ತರಲ್ಲಿ ಆನೆಬಲ ಬಂದಂತಾಗುತ್ತದೆ. ಸಾಣೇಹಳ್ಳಿಯ ಶ್ರೀಗಳು ‘ಶಿವಸಂಚಾರ’ದ ಮೂಲಕ ಕಲೆ ಮತ್ತು ಧರ್ಮವನ್ನು ಬೆಸೆದವರು. ಸಿರಗೆರೆಯ ಶ್ರೀಗಳು ಆಧುನಿಕ ತಂತ್ರಜ್ಞಾನ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಪಾರಂಗತರು. ಇದು ಮಠದ ಭಕ್ತರ ಪಾಲಿಗೆ ದೊಡ್ಡ ಶಕ್ತಿಯಾಗಿದೆ. ತರಳಬಾಳು ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ನೌಕರರಿಗೆ ಈ ಐಕ್ಯತೆಯ ಕೊಂಡಿಯಾಗಿದೆ. ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬುದಕ್ಕೆ ಈ ಗುರುಗಳು ಆದರ್ಶವಾಗಿದ್ದಾರೆ. ಬಸವತತ್ವವನ್ನು ಪಾಲಿಸುವ ಈ ಪೀಠವು ಒಂದಾಗಿರುವುದರಿಂದ ಇಡೀ ಶರಣ ಸಮುದಾಯಕ್ಕೆ ಹೊಸ ನೈತಿಕ ಶಕ್ತಿ ಲಭಿಸಲಿದೆ.
ಭದ್ರಾವತಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ, ಬಳ್ಳಾರಿ , ಹಾವೇರಿ, ತುಮಕೂರಿನ ಹಳ್ಳಿ ಹಳ್ಳಿಗಳಲ್ಲಿ ಈಗಾಗಲೇ ಸಂಭ್ರಮ ಮನೆಮಾಡಿದೆ. ಪ್ರತಿ ಮನೆಯ ಮುಂದೆಯೂ ತರಳಬಾಳು ಧ್ವಜಗಳು ಹಾರಾಡುತ್ತಿವೆ. “ನಮ್ಮ ಗುರುಗಳು ಒಂದಾದರು” ಎಂಬ ಸಮಾಧಾನ ಭಕ್ತರ ಮುಖದಲ್ಲಿ ಎದ್ದು ಕಾಣುತ್ತಿದೆ. ಇದು ಕೇವಲ ಮಠವಲ್ಲ ಭಕ್ತರ ಪಾಲಿಗೆ ದೈವ ಕೇಂದ್ರ, ಭಕ್ತರ ರಕ್ತದ ಕಣ ಕಣದಲ್ಲೂ ಈ ಮಠದ ಮೇಲೆ ಜೀವವನ್ನೆ ನೀಡುವ ಅಭಿಮಾನವಿದೆ. ಈ ಹುಣ್ಣಿಮೆಯ ಒಂಬತ್ತು ದಿನಗಳ ಕಾಲ ನಡೆಯುವ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿ ಮೊದಲಿಗಿಂತಲೂ ಹೆಚ್ಚು ಅರ್ಥಪೂರ್ಣವಾಗಲಿವೆ.
ಒಟ್ಟಾರೆ ಸಿರಬೆಳಕು ಹರಡಲಿ ಈ”ಹುಣ್ಣಿಮೆ” ಅಂದರೆ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ತರುವ ದಿನ. ಭದ್ರಾವತಿಯ ಈ ಹುಣ್ಣಿಮೆಯು ಸಿರಿಗೆರೆ ಪರಂಪರೆಯ ನಡುವೆ ಇದ್ದ ಸಣ್ಣಪುಟ್ಟ ಕತ್ತಲೆಯನ್ನು ಓಡಿಸಿ, ಪ್ರೀತಿಯ ಬೆಳಕನ್ನು ಚೆಲ್ಲಲಿದೆ. ಇಬ್ಬರು ಶ್ರೀಗಳ ಸಮಾಗಮವು ಕೇವಲ ಭಾವನಾತ್ಮಕ ಮಿಲನವಾಗಿದ್ದರೂ, ಅದು ನಾಡಿನ ಜಲ, ನೆಲ ಮತ್ತು ಭಾಷೆಯ ಹಿತಾಸಕ್ತಿಗಾಗಿ ಶ್ರಮಿಸುವ ಹೊಸ ಪರ್ವವಾಗಲಿ. ಭದ್ರಾವತಿಯ ಮಣ್ಣಿನಲ್ಲಿ ಜರುಗಲಿರುವ ಈ ‘ಮಹಾ ಸಂಗಮ’ವು ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಡಲಿ ಎಂಬುದು ಸಮಸ್ತ ಭಕ್ತರ ಆಶಯ. ನನ್ನದೊಂದು ದೊಡ್ಡ ಹರಕೆ ಸಹ ಆಗಿತ್ತು ಏಕೆಂದರೆ ಇದು ‘ನಮ್ಮ ಮಠ’ ಎಂಬುದೇ ನಮ್ಮ ಅಸ್ತಿತ್ವ ಮತ್ತು ಹೆಮ್ಮೆಯಾಗಿದೆ.

ಬಿಂದು ಆರ್. ಡಿ. ರಾಂಪುರ





