ಕಲಬುರಗಿ:ರೈತ ದೇಶದ ಬೆನ್ನೆಲುಬು ಎನ್ನುವುದು ಮಾತಲ್ಲ, ನಮ್ಮ ದಿನ ನಿತ್ಯದ ಶ್ರಮವೇ ಅದಕ್ಕೆ ಸಾಕ್ಷಿ ಎಂದು ರೈತ ವಿಜ್ಞಾನಿ, ಕೃಷಿ ಪಂಡಿತರಾದ ಶರಣಬಸಪ್ಪ ಪಾಟೀಲ ಹೇಳಿದರು. ಕಲಬುರಗಿ ನಗರದ ನಂದಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಜನ್ಮ ದಾತಾ ವಿ ಎಸ್ ಅಟ್ಟೂರ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ರೈತ ದಿನಾಚರಣೆ ನಿಮಿತ್ಯ ಸನ್ಮಾನ ಸ್ವೀಕರಿಸಿ ಮಾತಾಡುತ್ತ ಮಳೆ–ಬಿಸಿಲು, ಲಾಭ–ನಷ್ಟಗಳ ನಡುವೆಯೂ ನಾವು ಭೂಮಿಯೊಂದಿಗೆ ಬದುಕನ್ನು ಕಟ್ಟಿಕೊಂಡಿದ್ದೇವೆ.
ಇಂದಿನ ಕಾಲದಲ್ಲಿ ಕೃಷಿ ಕೇವಲ ಪರಂಪರೆಯ ಉದ್ಯೋಗವಲ್ಲ; ಅದು ವಿಜ್ಞಾನ, ತಂತ್ರಜ್ಞಾನ ಮತ್ತು ಜ್ಞಾನದಿಂದ ಬೆಳೆಯಬೇಕಾದ ಕ್ಷೇತ್ರವಾಗಿದೆ. ಸುಧಾರಿತ ಬೀಜಗಳು, ಹನಿ ನೀರಾವರಿ, ಮಣ್ಣು ಪರೀಕ್ಷೆ, ಡಿಜಿಟಲ್ ಮಾರುಕಟ್ಟೆ ಮತ್ತು ಬೆಳೆ ವಿಮೆ ಯೋಜನೆಗಳು ರೈತನ ಬದುಕಿಗೆ ಹೊಸ ಆಶಾಕಿರಣ ತಂದಿವೆ. ಇವುಗಳನ್ನು ಸರಿಯಾಗಿ ಬಳಸಿಕೊಂಡರೆ ರೈತನ ಆರ್ಥಿಕ ಸ್ಥಿತಿಯೂ ಬಲವಾಗುತ್ತದೆ.
ಆದರೆ ಪ್ರಗತಿಗೆ ಸರ್ಕಾರ, ವಿಜ್ಞಾನಿಗಳು ಮತ್ತು ಸಮಾಜ ಎಲ್ಲರೂ ಕೈಜೋಡಿಸಬೇಕು ಎಂದು ಮಾರ್ಮಿಕವಾಗಿ ನುಡಿದರು. ಟ್ರಸ್ಟ್ ನ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡತ್ತ ಯುವಕರು ಕೃಷಿಯಿಂದ ದೂರ ಸರಿಯದೆ, ಹೊಸ ಆಲೋಚನೆಗಳೊಂದಿಗೆ ಮುಂದೆ ಬರಬೇಕು.ಶರಣಬಸಪ್ಪ ಪಾಟೀಲರು ಕೃಷಿಗೆ ಸಂಬಂಧಪಟ್ಟ ಹಲವಾರು ಸಲಕರಣೆ ಸಂಶೋಧನೆ ಗೊಳಿಸಿ ಅತಿ ಕಡಿಮೆ ಬೆಲೆಯಲ್ಲಿ ರಾಜ್ಯವಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಹಲವಾರು ರೈತರು ಸಲಕರಣೆ ಪಡೆದು ಪ್ರಗತಿಪರ ರೈತರಾ ಗಿದ್ದಾರೆ. ಇವರ ಸಂಶೋಧನೆಗಳಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.ಪಾಟೀಲರು ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ನಾಡಿನ ರೈತ ವಿಜ್ಞಾನಿ ಯಾಗಿದ್ದಾರೆ. ರೈತನ ಶ್ರಮಕ್ಕೆ ನ್ಯಾಯ ಸಮ್ಮತ ಬೆಲೆ ದೊರೆತಾಗ ಮಾತ್ರ ಕೃಷಿ ಸಾರ್ಥಕವಾಗುತ್ತದೆ.
ನಾವು ಪ್ರಕೃತಿಯನ್ನು ಗೌರವಿಸಿ, ಪರಿಸರ ಸ್ನೇಹಿ ಕೃಷಿಯನ್ನು ಅಳವಡಿಸಿಕೊಂಡು ಮುಂದಿನ ತಲೆಮಾರಿಗೆ ಆರೋಗ್ಯಕರ ಭವಿಷ್ಯವನ್ನು ನೀಡೋಣ. ರೈತನ ಪ್ರಗತಿ ಎಂದರೆ ದೇಶದ ಪ್ರಗತಿ. ಈ ನಂಬಿಕೆಯೊಂದಿಗೆ ನಾವು ಶ್ರಮಿಸುತ್ತಲೇ ಇರುತ್ತೇವೆ ಎಂದು ಹೇಳಿದರು. ಮುಖ್ಯ ಅಥಿತಿಗಳಾಗಿ
ನಾಗಿಂದ್ರಯ್ಯ ಮಠ, ಹಿರಿಯ ಕಲಾವಿದರಾದ ದಿಲೀಪಕುಮಾರ ಭಕ್ರೆ, ಅಸ್ಲಾಂ ಶೈಖ ಆಗಮಿಸಿದರು.ಸಂಗೀತ ಕಲಾವಿದ ಶ್ರವಣಕುಮಾರ ಮಠ, ಮಹೇಶ ತೆಲೆಕುಣಿ, ಜನಪದ ಕಲಾವಿದ ರಾಜು ಹೆಬ್ಬಾಳ ರೈತ ಗೀತೆಗಳನ್ನು ಪ್ರಸ್ತುತ ಪಡಿಸಿದರು.ಕಾರ್ಯಕ್ರಮದಲ್ಲಿ ಶರಣಬಸಪ್ಪ ಜೆ ಪಾಟೀಲ,ಭರತ ಮಠ, ಶರಣು ಕಲ್ಮಠ, ಗುರುರಾಜ ಮರಗುತ್ತಿ, ನಂದೀಶ ಮಠ,ಜಮೀರ್ ಶೇಖ್, ನಾಗರಾಜ ಮರಗುತ್ತಿ, ರವಿಕುಮಾರ ಕಾಗೆ ಸೇರಿದಂತೆ ಅನೇಕ ಉಪಸ್ಥಿತರಿದ್ದರು ಎಂದು ಟ್ರಸ್ಟ್ ಅಧ್ಯಕ್ಷರಾದ ಹಣಮಂತರಾಯ ಅಟ್ಟೂರ ತಿಳಿಸಿದ್ದಾರೆ.





