ಕಾಂಗ್ರೆಸ್ ಪಕ್ಷವು ಚುನಾವಣಾ ಸಮಯದಲ್ಲಿ ಆಶ್ವಾಸನೆ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ 2025ರ ನವೆಂಬರ್ 25ರವರೆಗೆ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಒಟ್ಟಾರೆ ₹4,006.47 ಕೋಟಿ ಬಾಕಿ ಉಳಿಸಿಕೊಂಡಿದ್ದು, ಇದರ ಪರಿಣಾಮವಾಗಿ ಸಾರಿಗೆ ಸಂಸ್ಥೆಗಳು ಗಂಭೀರ ನಷ್ಟದ ಹಾದಿಗೆ ತಳ್ಳಲ್ಪಟ್ಟಿವೆ.
ಈ ನಾಲ್ಕು ನಿಗಮಗಳಿಗೆ,
▪️2023–24ನೇ ಸಾಲಿನಲ್ಲಿ ₹1,180.62 ಕೋಟಿ,
▪️2024–25ನೇ ಸಾಲಿನಲ್ಲಿ ₹1,170.45 ಕೋಟಿ,
▪️2025–26ನೇ ಸಾಲಿನ ನವೆಂಬರ್ 25 ರ ಅಂತ್ಯಕ್ಕೆ ₹1,655.40 ಕೋಟಿ ಬಾಕಿಯಾಗಿದ್ದು,
ಒಟ್ಟಾರೆ ಬಾಕಿ ಮೊತ್ತ ₹4,006.47 ಕೋಟಿಗೆ ತಲುಪಿದೆ.

ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೆ ಸುಮಾರು 650 ಕೋಟಿ ಫಲಾನುಭವಿಗಳು ಪ್ರಯಾಣ ನಡೆಸಿದ್ದಾರೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಭರ್ಜರಿ ಪ್ರಚಾರ ಮಾಡಿದ್ದರು. ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿಲ್ಲ, ಲಾಭದಲ್ಲಿವೆ ಎಂಬ ಹಸಿ ಸುಳ್ಳುಗಳನ್ನು ನುಡಿದಿದ್ದರು. ಆದರೆ, ವಾಸ್ತವದಲ್ಲಿ ಸರ್ಕಾರ ನೀಡಿರುವ ಅಧಿಕೃತ ಅಂಕಿ-ಅಂಶಗಳು, ಶಕ್ತಿ ಯೋಜನೆಯ ಬಾಕಿ ಹಣದಿಂದ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿವೆ.
ಕರ್ನಾಟಕದ ಸಾರಿಗೆ ನಿಗಮಗಳು ಈಗಾಗಲೇ ಸತತವಾಗಿ ಭಾರೀ ನಷ್ಟವನ್ನು ಅನುಭವಿಸುತ್ತಿದ್ದು, ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ, ಸರ್ಕಾರದಿಂದ ಹಣ ಪಾವತಿ ಸರಿಯಾಗಿ ಆಗದೇ ಈ ನಷ್ಟ ಇನ್ನಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರವು ಸಾರಿಗೆ ನಿಗಮಗಳನ್ನು ನಷ್ಟದ ಸುಳಿಯಿಂದ ಹೊರತರುವ ಬದಲು, ಅವುಗಳನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರವು ಸಾರಿಗೆ ನಿಗಮಗಳನ್ನು ಸಂಪೂರ್ಣವಾಗಿ ನಷ್ಟದಿಂದ ಮೇಲಕ್ಕೆತ್ತಲು ವಿಫಲವಾಗಿದ್ದು, ಅವುಗಳ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಚಲವಾದಿ ನಾರಾಯಣ ಸ್ವಾಮಿ ವಿವರಿಸಿದ್ದಾರೆ.





