ಬೆಂಗಳೂರು, ಡಿ.6: ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಿಜಿಕೆ ಬೀದಿರಂಗ ದಿನಾಚರಣೆಯ ಪ್ರಯುಕ್ತ ಡಿ.8, 9, ಮತ್ತು 10 ರಂದು ರಂಗಭೂಮಿ ಒಡಲಾಳ ನಾಟಕೋತ್ಸವವನ್ನು ನಗರದ ರವೀಂದ್ರ ಕಲಾಕ್ಷೇತ್ರ ಹಾಗೂ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಬೀದಿನಾಟಕ ಅಕಾಡೆಮಿ ಕಾರ್ಯದರ್ಶಿ ಯತೀಶ್ ಸೊಂಡೆಕೊಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಟಕೋತ್ಸವದ ಭಾಗವಾಗಿ ಮೂರು ದಿನಗಳಲ್ಲಿ ಸಿಜಿಕೆ ಪುರಸ್ಕಾರ, ರಂಗ ಗೌರವ, ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನಗಳು ನಡೆಯಲಿವೆ. ಡಿ.8ರ ಸಂಜೆ 6:45ಕ್ಕೆ ರಂಗಕರ್ಮಿ ಎನ್.ಮಂಗಳಾ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಡಿ.9 ರಂದು ಚಾಮರಾಜನಗರದ ರಂಗವಾಹಿನಿ ತಂಡ ಅಭಿನಯಿಸುವ ‘ಬೆಲ್ಲದ ದೋಣಿ’ ನಾಟಕ ಪ್ರದರ್ಶನ ನಡೆಯಲಿದ್ದು, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ಗೆ ರಂಗಗೌರವವನ್ನು ಸಲ್ಲಿಸಲಾಗುವುದು. ವೇದಿಕೆಯಲ್ಲಿ ರಂಗಕರ್ಮಿಗಳಾದ ಸಿ.ಕೆ.ಗುಂಡಣ್ಣ ಣ್ಣ, ಸಿ.ಎಂ.ನರಸಿಂಹಮೂರ್ತಿ ಉಪಸ್ಥಿತಲಿರಲಿದ್ದಾರೆ.
ಡಿ.10 ರಂದು ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಜಿ. ಕಪ್ಪಣ್ಣ ಅಭಿನಂದನಾ ಮಾತುಗಳನ್ನ ನುಡಿಯಲ್ಲಿದ್ದು, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಲಲಿತಕಲಾ ಅಕಾಡಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಜಿಕೆ ಅವರ ಮಡದಿ ಜಯಲಕ್ಷ್ಮಿ, ನಾಟಕಕಾರ ಡಾ.ನಟರಾಜ್ ಹುಳಿಯಾರ್, ಕೃಷ್ಣರಾಯಚೂರು ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ

ಇದೆ ಸಂದರ್ಭದಲ್ಲಿ ಡಾ. ರಾಜಕುಮಾರ ಪ್ರಶಸ್ತಿ ಪಡೆದ ಹಿರಿಯ ಕಲಾವಿದೆ ಡಾ. ಉಮಾಶ್ರೀ ಅವರಿಗೆ ರಂಗಗೌರವ ನೀಡಲಾಗುತ್ತದೆ.ಸಂಜೆ 7:15ಕ್ಕೆ ಯಲಯಂಕ ಸರಕಾರಿ ಪ್ರಥಮ ದರ್ಜೆ ಕಾಲೇಜು ರಂಗಸಿರಿ ರಂಗತಂಡ ಅಭಿನಯಿಸುವ ಶೂದ್ರ ತಪಸ್ವಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಯತೀಶ್ ಸೊಂಡೆಕೊಪ್ಪ ಮಾಹಿತಿ ನೀಡಿದ್ದಾರೆ.





