ಬೆಂಗಳೂರು : ಸರ್ಕಾರಿ ಭೂಮಿಯನ್ನು ರಕ್ಷಿಸಿ ಎಂದು ಕಂದಾಯ ಅಧಿಕಾರಿಗಳಿಗೆ ಶಾಸಕ ಎಸ್.ಟಿ ಸೋಮಶೇಖರ್ ಸೂಚಿಸಿದರು.

ಕ್ಷೇತ್ರದ ರಾಮೋಹಳ್ಳಿ ಗ್ರಾಪಂ ವ್ಯಾಪ್ತಿಯ ಭೀಮನಕುಪ್ಪೆ ಗ್ರಾಮದಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಡೆದ ಜನಸ್ಪಂದನ ಹಾಗೂ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಸ್ಥಳೀಯರ ಸರ್ಪಗಾವಲು, ಗ್ರಾಮ ಪಂಚಾ ಯಿತಿಯವರ ಕಣ್ಣಾವಲು ಇದ್ದರೂ ಸುಮಾರು 20 ವರ್ಷಗಳ ಹಿಂದೆ ಆಶ್ರಯ ಯೋಜನೆಗೆ ಮೀಸಲಿಟ್ಟಿದ್ದ ಸರ್ಕಾರಿ ಭೂಮಿಯನ್ನೇ ಕೆಲವು ಭೂಗಳ್ಳರು ಕಬಳಿಸಿದ್ದಾರೆ. ಕ್ಷೇತ್ರದಲ್ಲಿ ಭೂಗಳ್ಳರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಬಡವರಿಗೆ ಬೆಟ್ಟನಪಾಳ್ಯ, ಚಲ್ಲಗಟ್ಟ ಗ್ರಾಮಗಳಲ್ಲಿ ನಿವೇಶನ ಹಂಚಲು ಸಿದ್ಧತೆ ನಡೆಸಲಾಗಿದೆ. ಅದರಂತೆ ರಾಮೋಹಳ್ಳಿಯ 10 ಎಕರೆ ಭೂಮಿಯ ತೊಡಕುಗಳನ್ನು ನಿವಾರಿಸಿದರೆ ನೂರಾರು ಜನರಿಗೆ ನಿವೇಶಗಳು ಹಂಚಬಹುದು. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಕೂಡಲೇ ಕಾರ್ಯೋನ್ಮುಖರಾಗಬೇಕು ಎಂದರು.

ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, ಜನಸ್ಪಂದನದಲ್ಲಿ ಬಂದ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಏನೋ ಒಂದು ಹಿಂಬರಹ ಕೊಟ್ಟು ಕೆಲಸ ಮುಗಿಯಿತು ಎಂದು ಕೈ ತೊಳೆದುಕೊಳ್ಳುವುದಲ್ಲ ಬದಲಾಗಿ ಅರ್ಜಿಗಳಿಗೆ ತಾರ್ಕಿಕ ಅಂತ್ಯ ಕಲ್ಪಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಮೋಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ. ಮಹೇಶ್‌ ಮಾತನಾಡಿ ಜನತೆ ನೀಡಿದ ಅಧಿಕಾರವನ್ನು ಅವರ
ಸೇವೆ ಮಾಡುವ ಮೂಲಕ ಜನತೆ ಋಣ ತೀರಿಸಲಾಗುವುದು ಹಣ ಅಂತಸ್ತು ಅಧಿಕಾರ ಶಾಶ್ವತವಲ್ಲ. ಶಾಸಕ ಎಸ್.ಟಿ.ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ
ರಾಮೋಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ
ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ,ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಅಗತ್ಯ ಮೂಲಭೂತ ಸೌಕರ್ಯ,ವಿಶೇಷ ಚೇತನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ,ಸುಮಾರು 15 ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ, ಕ್ಷೇತ್ರವ್ಯಾಪ್ತಿಯಲ್ಲಿ ಹೊಸ ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಪರವಾನಗೆ ನೀಡಬಾರದು ಎಂದು ಶಾಸಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ಹಕ್ಕು ಪತ್ರ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಶುದ್ದ ಕುಡಿಯುವ ನೀರಿನ ಸಾಧನ, ಕೃಷಿ ಯಂತ್ರ, ಉಚಿತ ವಸತಿ ನಿಲಯ ಸೌಲಭ್ಯ, ಕಾರ್ಮಿಕರ ಕಿಟ್, ಇ-ಸ್ವತ್ತು ವಿತರಣೆ, ಸಹಾಯಧನ ಇತ್ಯಾದಿ ಸಾಧನ ಸಲಕರಣೆ ಸೇರಿ ಹಲವು ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.
ಬೆಂಗಳೂರು ದಕ್ಷಿಣ ತಾಲೂಕು ಎಸಿ ವಿಶ್ವನಾಥ್, ತಹಶೀಲ್ದಾರ್ ಅಶ್ವಿನಿ, ಉಪ ತಹಶೀಲ್ದಾರ್ ಕೆಂಪೇಗೌಡ, ಪಶುಪಾಲನ ಇಲಾಖೆಯ ಡಾ. ರಾಜು, ಇಓ ನಾರಾಯಣ್, ಬಿಇಒ ರೇಖಾ, ಗ್ರಾಪಂ ಅಧ್ಯಕ್ಷ ಮಹೇಶ್, ಪಿಡಿಒ ಭಾರತಿ, ಉಪಾಧ್ಯಕ್ಷೆ ರತ್ನಮ್ಮ ವೆಂಕಟೇಶ್, ಮಾಜಿ ಅಧ್ಯಕ್ಷ ವಿ.ವೇಣುಗೊಪಾಲ್, ಚೇತನ್ ವಿವಿಧ ಇಲಾಖೆ ಅಧಿಕಾರಿಗಳು ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here