ನಮ್ಮ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಬಂದು ನಮ್ಮ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆನೀಡುವ ಮೂಲಕ ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಮುಖ್ಯ ಮಂತ್ರಿ ಹೇಳಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಯಾವುದೇ ಒಂದು ಜಾತಿ-ಧರ್ಮಗಳಿಗೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಯಾರ ವಿರುದ್ಧವೂ ಅಲ್ಲ, ಇದು ಎಲ್ಲರ ಪರವಾಗಿರುವ ಸಮೀಕ್ಷೆ. ಇದರ ಮುಖ್ಯ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಸಾಧಿಸಿ ಸರ್ವರಿಗೂ ಸಮಪಾಲು, ಸಮಬಾಳು ನೀಡುವುದಾಗಿದೆ.
ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಎಲ್ಲವೂ ಯಥಾಸ್ಥಿತಿಯಲ್ಲಿಯೇ ಇರಬೇಕು. ಬಡವರು ಬಡವರಾಗಿಯೇ ಉಳಿಯಬೇಕು, ಹಿಂದುಳಿದವರು ಹಿಂದೆಯೇ ಉಳಿಯಬೇಕು ಮಹಿಳೆಯರು ಅವಕಾಶ ವಂಚಿತರಾಗಿಯೇ ಇರಬೇಕು, ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ. BJP Karnataka ನಾಯಕರ ಅಂತರಂಗದಲ್ಲಿರುವುದು ಇದೇ ಮನುವಾದಿ ಮನಸ್ಥಿತಿ.
ನಮ್ಮ ಸರ್ಕಾರ ನಡೆಸುವ ಸಮೀಕ್ಷೆಯಿಂದ ಕೇವಲ ದಲಿತ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿ-ಗತಿ ಮಾತ್ರವಲ್ಲ, ಮುಂದುವರಿದ ಜಾತಿಗಳೊಳಗಿನ ಬಡವರು ಮತ್ತು ಅವಕಾಶ ವಂಚಿತರ ಸ್ಥಿತಿಗತಿಯೂ ಗೊತ್ತಾಗಲಿದೆ. ಈ ವಾಸ್ತವಸ್ಥಿತಿ ಅರಿವಾಗುವುದು ಬಿಜೆಪಿಯವರಿಗೆ ಬೇಡವಾಗಿದೆ. ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಪ್ರತಿಯೊಂದು ಜಾತಿ ಮತ್ತು ಧರ್ಮದೊಳಗಿನ ಉಳ್ಳವರ ಕೈಯಲ್ಲಿಯೇ ಇರಬೇಕು ಎನ್ನುವುದೇ ಅವರ ವಿರೋಧದ ಹಿಂದಿನ ದುರುದ್ದೇಶ.
ಬಿಹಾರದಲ್ಲಿ ಇವರದ್ದೇ ಮೈತ್ರಿ ಸರ್ಕಾರ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಇದೇ ರೀತಿ ತೆಲಂಗಾಣದಲ್ಲಿಯೂ ನಡೆದಿದೆ. ಅಲ್ಲಿಯೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಈಗ ಕೇಂದ್ರದ Narendra Modi ಅವರ ನೇತೃತ್ವದ ಬಿಜೆಪಿ ಸರ್ಕಾರವೇ ಜಾತಿ ಗಣತಿ ಮಾಡಲು ಹೊರಟಿದೆ.
ಕರ್ನಾಟಕದಲ್ಲಿ ಜಾತಿಗಳನ್ನು ಪರಿಗಣಿಸಿ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರೇ, ನೀವು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ ವಿರೋಧಿಸುತ್ತೀರಾ? ಹಾಗೆ ವಿರೋಧಿಸುವುದಾದರೆ ಅದನ್ನು ಗಟ್ಟಿ ದನಿಯಲ್ಲಿ ಈಗಲೇ ಹೇಳಿಬಿಡಿ. ಪ್ರಧಾನಿಯ ಎದುರು ತಲೆ ಎತ್ತಿ ಮಾತನಾಡುವ ದಮ್ಮು-ತಾಕತ್ತು ಇಲ್ಲದ ನಿಮಗೆ ಇದನ್ನು ವಿರೋಧಿಸುವ ಧೈರ್ಯ ಇದೆಯೇ? ಯಾಕೆ ತಮ್ಮ ಮೂರ್ಖತನದ ಹೇಳಿಕೆಗಳ ಮೂಲಕ ರಾಜ್ಯದ ಪ್ರಜ್ಞಾವಂತ ಜನರ ಎದುರು ನಗೆಪಾಟಲಿಗೀಡಾಗುತ್ತಿದ್ದೀರಿ?
ಬಿಜೆಪಿ ನಾಯಕರ ಈ ಆತ್ಮವಂಚಕ ನಡವಳಿಕೆಯನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು. ಅವರ ರಾಜಕೀಯ ಪ್ರೇರಿತ ಠಕ್ಕುತನದ ಹೇಳಿಕೆಗಳನ್ನು ಮನೆಯ ಕಸದ ಬುಟ್ಟಿಗೆ ಎಸೆದು ಎಲ್ಲರೂ ಈಗ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಬೇಕು. ಈ ಮೂಲಕ ನಾವೆಲ್ಲರೂ ಸೇರಿ ಸಮ ಸಮಾಜವನ್ನು ನಿರ್ಮಾಣ ಮಾಡುವ ಮೂಲಕ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನು ಮಾಡೋಣ ಎಂದು ವಿನಯಪೂರ್ವಕವಾಗಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಹೇಳಿದ್ದಾರೆ.