ಬೆಂಗಳೂರು:ಕೊವೀಡ್ ಸಮಯದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ರೂ 258 ಕೋಟಿ ಅಕ್ರಮ ಎಸೆಗಿದೆ ಎಂದು ಭಾರತದ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಬಯಲುಗೊಳಿಸಿದ ವರದಿಯನ್ನು ಕರ್ನಾಟಕ ವಿಧಾನ ಸಭೆಯಲ್ಲಿ ಮಂಡನೆಯಾಗಿದೆ ಇದು ಬಡ ಕಾರ್ಮಿಕರಿಗೆ ಅಂದಿನ ಬಿಜೆಪಿ ಸರ್ಕಾರ ಮತ್ತು ಅಧಿಕಾರಿಗಳು ಮಾಡಿದ ಮಹಾದ್ರೋಹವಾಗಿದೆ. ಇಂತಹ ಹಣಕಾಸಿನ ಅವ್ಯವಹಾರಗಳು ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಅವ್ಯಾಹತವಾಗಿ ಮುಂದುವರೆದಿದ್ದು ಈ ಹಿನ್ನಲೆಯಲ್ಲಿ ಒಟ್ಟಾರೆ 2019 ರಿಂದ 2025 ರವರೆಗಿನ ಮಂಡಳಿಯ ಎಲ್ಲ ಅವ್ಯವಹಾರಗಳನ್ನು ಸಮಗ್ರ ತನಿಖೆಗೆ ಒಳಪಡಿಸಿ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಆಗ್ರಹಪಡಿಸಿದೆ.
ಇಡೀ ದೇಶದಲ್ಲಿರುವ 8 ಕೋಟಿ ವಲಸೆ ಕಾರ್ಮಿಕರು ಕರೋನಾ ವೈರಸ್ ಪ್ರಮುಖ ಬಲಿಪಶುಗಳು ಕರೋನಾದಿಂದಾಗಿ ಹಸಿವು.ನೀರಡಿಗೆ ಹಾಗೂ ವಸತಿ ರಹಿತವಾದ ಈ ವಿಭಾಗಕ್ಕೆ ಕಿಂಚಿತ್ತೂ ಆರ್ಥಿಕ ನೆರವನ್ನು ಕೇಂದ್ರ ಸರಕಾರ ನೀಡಲಿಲ್ಲ. ಇಡೀ ದೇಶದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳು ತಮ್ಮ ಖಜಾನೆಯಲ್ಲಿರುವ ಹಣದಲ್ಲಿ ಸುಮಾರು 3000 ಕೋಟಿಯಷ್ಟು ಕಟ್ಟಡ ಕಾರ್ಮಿಕರ ನಿಧಿಯನ್ನು ಈ ವಲಸೆ ಕಾರ್ಮಿಕರಿಗಾಗಿ ಖರ್ಚು ಮಾಡಿದ್ದು ಸ್ವಾಗತಾರ್ಹವಾದರೂ ರಾಜ್ಯದ ಅಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸ್ವತಃ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು )ಆರೋಪಿಸಿ ಇತರೆ ಕಾರ್ಮಿಕ ಸಂಘಟನೆಗಳ ಜತೆ ಸೇರಿ ತೀವ್ರ ಸ್ವರೂಪದ ಹೋರಾಟಗಳನ್ನು ನಡೆಸಿತ್ತು.
ಕೋವೀಡ್ ಬಳಿಕಾವೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅದ್ಯಕ್ಷರೂ ಹಾಗೂ ಸಚಿವರು ಆಗಿದ್ದ ಶಿವರಾಂ ಹೆಬ್ಬಾರ್ ಆರೋಗ್ಯ ತಪಾಸಣೆ, ಕಳಪೆ ದರ್ಜೆಯ ಆಹಾರ ಕಿಟ್, ವಿವಿಧ ಬಗೆಯ ಟೂಲ್ ಕಿಟ್ ಗಳ ಖರೀದಿಗಳನ್ನು ನಡೆಸಿ ನೂರಾರು ಕೋಟಿ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಕ್ಯಾಬಿನೆಟ್ ಗಮನಕ್ಕೂ ತರದೇ ಪಾರದರ್ಶಕ ಕಾಯದೆ(ಕೆಪಿಟಿಟಿ)ಯ ಸೆಕ್ಷನ್ 4 ನ್ನು ಉಲ್ಲಂಘಿಸಿ ಹಲವು ಏಜೆನ್ಸಿಗಳಿಗೆ ನಿಯಮಬಾಯಿರವಾಗಿ ಟೆಂಡರ್ ಗಳನ್ನು ನೀಡಿದ್ದು ಮಾತ್ರವಲ್ಲ ಅಕ್ರಮವಾಗಿ ಹಣವನ್ನು ಕಲ್ಯಾಣ
ಮಂಡಳಿಯಿಂದ ಬಿಡುಗಡೆ ಮಾಡಿ ಅಂದಿನ ಕಾರ್ಮಿಕ ಸಚಿವರು ಮತ್ತು ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಭಾರತದ ಮಹಾಲೆಕ್ಕಪರಿಶೋಧಕರ (ಸಿಎಜಿ) ತನ್ನ ವರದಿಯಲ್ಲಿ ಬಯಲುಗೊಳಿಸಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಾದ ಮಾನ್ಯ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಶ್ರೀ ಸಂತೋಷ ಲಾಡ್ ಯಾವುದೇ ಕಾನೂನು ಕ್ರಮವಹಿಸದೇ ಮೌನವಹಿಸಿದ್ದಾರೆ. ಬಹುಶಃ ಶಿವರಾಮ ಹೆಬ್ಬಾರ್ ಅಪ್ರತ್ಯಕ್ಷವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದರಿಂದಲೇ ಸ್ವತಃ ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆ ಅವ್ಯವಹಾರಗಳಿಗೆ ತನಿಖೆಗೆ ಆದೇಶಿಸಿದ್ದರೂ ಕಾರ್ಮಿಕ ಇಲಾಖೆ ಕೋವೀಡ್ ಸಮಯದಲ್ಲಿ ನಡೆಸಿದ 5000 ಕೋಟಿ ಅವ್ಯವಹಾರಗಳ ಬಗ್ಗೆ ಯಾವುದೇ ತನಿಖೆ ನಡೆಸಲು ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ಎರಡು ವರ್ಷಗಳಿಂದ ಕಾರ್ಮಿಕ ಸಚಿವರಾಗಿರುವ ಸಂತೋಷ ಲಾಡ್ ಅವರು ಕೂಡ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಯಾವುದೇ ಖರೀದಿಗಳನ್ನು ನಡೆಸುವುದಿಲ್ಲ ಎಂದು ಹೇಳುತ್ತಲೇ ಹಿಂದಿನ ಬಿಜೆಪಿ ಸರ್ಕಾರದ ಹಾದಿಯಲ್ಲೇ ನಕಲಿ ವೈದ್ಯಕೀಯ ತಪಾಸಣೆ, ವಿವಿಧ ರೀತಿಯ ಕಿಟ್ ಗಳ ಖರೀದಿಗಳ ಮೂಲಕ ನೂರಾರು ಕೋಟಿ ವ್ಯವಹಾರಗಳನ್ನು ಇಂತಹುದೇ ಏಜೆನ್ಸಿಗಳ ಮೂಲಕ ಕೋಟ್ಯಾಂತರ ರುಪಾಯಿಗಳ ಅವ್ಯವಹಾರಕ್ಕೆ ಕಾರಣವಾಗಿದ್ದಾರೆ. ಈ ಬಗ್ಗೆ ನಾವು ಹಲವ ಬಾರಿ ಆಕ್ಷೇಪಣೆಗಳನ್ನು ಎತ್ತಿದರೂ ಅದಕ್ಕೆ ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿ ಅಧಿಕಾರಿಗಳು ಯಾವುದೇ ಮಾನ್ಯತೆ ನೀಡುತ್ತಿಲ್ಲ.
ಇದೀಗ ಭಾರತದ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯು ವಿಧಾನ ಸಭೆಯ ಅಧಿವೇಶನದಲ್ಲೇ ಮಂಡನೆಯಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂ 258 ಕೋಟಿ ಅವ್ಯವಹಾರಗಳು ನಡೆದಿವೆ ಎನ್ನುವ ನಮ್ಮ ವಾದವನ್ನು ಎತ್ತಿಹಿಡಿದಿದೆ. ಆದರೆ ನಮ್ಮ ಅಭಿಪ್ರಾಯದಲ್ಲಿ ವಿವಿಧ ರೀತಿಯ ಖರೀದಿಗಳ ಮೂಲಕ ಇನ್ನೂ ನೂರಾರು ಕೋಟಿಗಳ ಮಂಡಳಿ ನಿಧಿಯನ್ನು ಕೊಳ್ಳೆ ಹೊಡೆಯಲಾಗಿದೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು)ವತಿಯಿಂದ 2029 ರಿಂದ 2025 ರವರೆಗೆ ನಡೆದಿರುವ ಎಲ್ಲಾ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿ ನಿತ್ಯ ಬೆವರು ಸುರಿಸಿ ದುಡಿಯುವ ಲಕ್ಷಾಂತರ ಬಡ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಆ ಮೂಲಕ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಆಗ್ರಹಪಡಿಸಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ)(CITU)ಪ್ರಧಾನ ಕಾರ್ಯದರ್ಶಿಕೆ.ಮಹಾಂತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.