PRESS RELEASE

ಬೆಂಗಳೂರು, ಏಪ್ರಿಲ್ 23 – ನೀಟ್ ಆಕಾಂಕ್ಷಿಗಳ ಸಂಖ್ಯೆ ಮತ್ತು ಲಭ್ಯವಿರುವ ವೈದ್ಯಕೀಯ ಸೀಟುಗಳ ನಡುವಿನ ಅಂತರ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ನಮ್ಮ ಸರ್ಕಾರವು ದೇಶಾದ್ಯಂತ ಪದವಿಪೂರ್ವ ವೈದ್ಯಕೀಯ ಸೀಟುಗಳನ್ನು ಗಣನೀಯವಾಗಿ ಹೆಚ್ಚಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು (ಎನ್‌ಎಂಸಿ) ಆಗ್ರಹಿಸಿದೆ ಎಂದು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ.

ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಎಸ್‌ಎಬಿವಿಎಂಸಿ) 2019 ರ ಬ್ಯಾಚ್‌ನ ಪದವಿ ಪ್ರದಾನ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಇದಕ್ಕೆ ಪ್ರತಿಯಾಗಿ ಒಂದು ಲಕ್ಷ ವೈದ್ಯಕೀಯ ಸೀಟುಗಳು ಮಾತ್ರ ಲಭ್ಯವಿದೆ. ಇದರಿಂದ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಹೇಳಿದರು.

“ಈ ಅಸಮಾನತೆಯನ್ನು ತಕ್ಷಣ ನಿವಾರಿಸಬೇಕು. ಭಾರತದಲ್ಲಿ ತರಬೇತಿ ಪಡೆಯಲಿರುವ ವೈದ್ಯರು ವಿದೇಶದಲ್ಲಿಯೂ ಹೆಚ್ಚು ಮನ್ನಣೆ ಗಳಿಸುತ್ತಿದ್ದಾರೆ. ನಮ್ಮ ವೈದ್ಯರು ಜಗತ್ತಿನ ಎಲ್ಲೆಡೆ ಚಿಕಿತ್ಸೆ ಒದಗಿಸುತ್ತಿದ್ದಾರೆ” ಎಂದು ಅವರು ಹೇಳಿದರು,

ಭಾರತೀಯ ವೈದ್ಯರಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ
ಜಾಗತಿಕವಾಗಿ ಭಾರತೀಯ ವೈದ್ಯಕೀಯ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಮತ್ತು ಲಭ್ಯತೆಯ ಅಂತರ ಕಡಿಮೆ ಮಾಡಲು ಎನ್‌ಎಂಸಿ ಮಧ್ಯಪ್ರವೇಶಿಸಬೇಕು” ಎಂದು ಸಚಿವರು ತಿಳಿಸಿದರು.

ವೇದಿಕೆಯ ಮೇಲೆ ಹಾಜರಿದ್ದ ಎನ್‌ಎಂಸಿ ಅಧ್ಯಕ್ಷರಾದ ಡಾ. ಬಿ.ಎನ್. ಗಂಗಾಧರ ಅವರಿಗೆ ಈ ಕುರಿತು ಸಚಿವರು ಮನವರಿಕೆ ಮಾಡಿಕೊಟ್ಟರು.

ಈ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 800 ಪದವಿಪೂರ್ವ ಮತ್ತು 600 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೆ ಅನುಮೋದನೆ ಕೋರಿ ಎನ್‌ಎಂಸಿ ಗೆ ಈಗಾಗಲೇ ಔಪಚಾರಿಕ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಶರಣ ಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು

—————————————-
ಅತಿ ಶೀಘ್ರದಲ್ಲೇ ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು
ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸಲು ನಮ್ಮ ಕಾಂಗ್ರೆಸ್‌ ಸರ್ಕಾರ ಸದಾ ಬದ್ಧವಾಗಿದೆ. ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಈ ಪ್ರತಿಯೊಂದು ಕಾಲೇಜುಗಳು ಆಸ್ಪತ್ರೆಯನ್ನು ಹೊಂದಿರುತ್ತವೆ ಮತ್ತು ಪ್ರತಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆರೈಕೆ ಘಟಕಗಳು, ಆಘಾತ ಕೇಂದ್ರಗಳು ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಶರಣ ಪ್ರಕಾಶ ಪಾಟೀಲ ವಿವರಿಸಿದರು.

“ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಹಲವು ಯೋಜನೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಶೀಘ್ರದಲ್ಲೇ, ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಸಂಪೂರ್ಣ ಸುಸಜ್ಜಿತ ಸಂಸ್ಥೆಗಳನ್ನು ಆರಂಭಿಸಲಾಗುತ್ತದೆ. ಇದು ಆರ್ಥಿಕವಾಗಿ ದುರ್ಬಲ ವರ್ಗಗಳ ಅರ್ಹ ವಿದ್ಯಾರ್ಥಿಗಳು ಸರ್ಕಾರಿ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲರು ಆಶಯ ವ್ಯಕ್ತಪಡಿಸಿದರು.

ಎನ್‌ಎಂಸಿ ಅಧ್ಯಕ್ಷರಾದ ಡಾ. ಗಂಗಾಧರ ಅವರು ಭಾಷಣ ಮಾಡಿ, ಜಾಗತಿಕ ಮಟ್ಟದಲ್ಲಿ ಸುಮಾರು 3 ಕೋಟಿ ವೈದ್ಯರ ಕೊರತೆ ಇದೆ ಎಂದರು.

ಯುವ ಪೀಳಿಗೆಯು ವೈದ್ಯಕೀಯ ವೃತ್ತಿಯನ್ನು ಕೈಗೆತ್ತಿಕೊಳ್ಳಬೇಕು. ಭಾರತೀಯ ವೈದ್ಯರಿಗೆ ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯಿದೆ, ಗಟ್ಟಿಯಾದ ಶೈಕ್ಷಣಿಕ ಅಡಿಪಾಯ ಮತ್ತು ಇಂಗ್ಲಿಷ್ ಪ್ರಾವೀಣ್ಯತೆ ಹೊಂದಿರುವ ಭಾರತೀಯರು ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ವೈದ್ಯಕೀಯ ವೃತ್ತಿಪರರ‌ ಸಂಖ್ಯೆ ಹೆಚ್ಚಳ ಮಾಡಲು ಎನ್‌ಎಂಸಿ ಯ ಪ್ರಮುಖ ಗುರಿಗಳಲ್ಲಿ ಒಂದಾಗಿದೆ” ಎಂದು ಹೇಳಿದರು.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಬಿ.ಎಲ್ ಮತ್ತು ಎಸ್‌ಎಬಿವಿಎಂಸಿ ನಿರ್ದೇಶಕ ಡಾ. ಮನೋಜ್ ಕುಮಾರ್ ಹೆಚ್.ವಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here