ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ‌ ಕಾರ್ಮಿಕ ಕಲ್ಯಾಣ‌ ಮಂಡಳಿಯು ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೂ 2021 ಅಧಿಸೂಚನೆ ಅನ್ವಯವೇ ಬಾಕಿ ಇರುವ ಮೂರು ವರ್ಷದ ಶೈಕ್ಷಣಿಕ ಧನಸಹಾಯ ವಿತರಿಸಲು ತ್ವರಿತಗತಿಯಲ್ಲಿ ಕ್ರಮವಹಿಸಬೇಕೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು 2023 ರಿಂದ ಶೇ 70 ರಿಂದ ಶೇ. 80 ರಷ್ಟು ಕಡಿತ ಮಾಡಿತ್ತು. ಕಲ್ಯಾಣ ಮಂಡಳಿಯ ಈ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ‌ಕಟ್ಟಡ ಮತ್ತು ಇತರೆ ನಿರ್ಮಾಣ‌ ಕಾರ್ಮಿಕರ ಫೆಡರೇಷನ್‌ (CWFI-CITU) ಸಂಘಟನೆಯು  ಹೈಕೋರ್ಟ್ ಮೊರೆ ಹೋಗಿತ್ತು.

ಈ  ರಿಟ್  ಅರ್ಜಿಯನ್ನು ಮಾನ್ಯ‌ಮಾಡಿದ್ದ ನ್ಯಾಯಮೂರ್ತಿ ಶ್ರೀ ನಾಗಪ್ರಸನ್ನ  ನೇತೃತ್ವದ ಏಕ‌ಸದಸ್ಯ ಪೀಠವು‌, 2024 ಏಪ್ರಿಲ್ ನಲ್ಲೇ ಮಧ್ಯಂತರ ಆದೇಶ ನೀಡಿ, ಅರ್ಜಿ ಸಲ್ಲಿಸಿದ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡ ಸಹಿತ ಶೈಕ್ಷಣಿಕ ಸಹಾಯಧನ ಪಾವತಿಸುವಂತೆ ಆದೇಶಿಸಿತ್ತು. ಇದೀಗ ಅಂತಿಮ ತೀರ್ಪು ಹೊರ ಬಂದಿದ್ದು, ಅದರ ಅನ್ವಯ 2020 – 21, 2021 – 22 ಹಾಗೂ 2022 – 23 ನೇ ಸಾಲಿನ ಶೈಕ್ಷಣಿಕ ಸಹಾಯಧನವನ್ನು 2021 ರ ಅಧಿಸೂಚನೆ ಅನ್ವಯವೇ ಬಿಡುಗಡೆ ಮಾಡುವಂತೆ  ಆದೇಶ ನೀಡಿದೆ. ಮಾತ್ರವಲ್ಲ ಸದರಿ ಆದೇಶವನ್ನು  ಜಾರಿ ಮಾಡಲು ಅಗತ್ಯ ಕ್ರಮವಹಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ 2023 ರ ಸರ್ಕಾರದ  ಅಧಿಸೂಚನೆಯನ್ನು ರದ್ದುಗೊಳಿಸಿ ಈ ಹಿಂದಿನ  2021 ರ ಅಧಿಸೂಚನೆ ಪ್ರಕಾರವೇ ವಿದ್ಯಾರ್ಥಿ ವೇತನ ಪಾವತಿಸಲು ಆದೇಶಿಸಿದೆ.

ಕಲ್ಯಾಣ ಮಂಡಳಿಯಾಗಲಿ ಅಥವಾ ಸರ್ಕಾರವು ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಪರಿಸ್ಕರಿಸುವಾಗ ಹೈಕೋರ್ಟ್ ನ ಈ ಆದೇಶಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ಶೈಕ್ಷಣಿಕ ನೆರವಿನ ಯಾವುದೇ ಪರಿಷ್ಕರಣೆಯು ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಗಳ ಕಲ್ಯಾಣವೇ ಅತ್ಯಂತ ಆದ್ಯತೆ ಆಗಿರಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ನ್ಯಾಯಾಲಯಕ್ಕೆ ಅಲೆದಾಡದಂತೆ ಭವಿಷ್ಯದಲ್ಲಿ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಜತೆಗೆ ಕಲ್ಯಾಣ ಮಂಡಳಿಯ ಲೆಕ್ಕಪತ್ರವನ್ನು ಆಡಿಟ್ ಮಾಡಿಸಿ, 3 ತಿಂಗಳೊಳಗೆ ಅದರ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸುವಂತೆ  ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್(CAG)  ಅವರಿಗೆ ಸೂಚಿಸಲಾಗಿದೆ, ಸಿಎಜಿಯಿಂದ ವರದಿಯನ್ನು ಸಂಗ್ರಹಿಸಲು ಮತ್ತು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಲಾಗಿದೆ. ಆ ವರದಿ ಬಂದ ಕೂಡಲೇ  ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಪ್ರಕರಣವನ್ನು ವಿಚಾರಣೆಗಾಗಿ ಮರುಪಟ್ಟಿ‌ಮಾಡಲು ಹೈಕೋರ್ಟ್ ರಿಜಿಸ್ಟರ್ ಅವರಿಗೆ ಸೂಚನೆಯನ್ನು ನೀಡಿದೆ.

ಸ್ವಾಗತ
ಬಡ ಕಟ್ಟಡ ಕಾರ್ಮಿಕರ ಶೈಕ್ಷಣಿಕ ಬದುಕನ್ನೇ ಕಿತ್ತು ಕೊಂಡಿದ್ದ 2023 ರ ರಾಜ್ಗ ಸರ್ಕಾರದ ಅಧಿಸೂಚನೆ ಯನ್ನು ರದ್ದುಗೊಳಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ನ್ಯಾಯ ‌ನೀಡಿರುವ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ‌ಕಾರ್ಮಿಕರ ಫೆಡರೇಷನ್‌ (ರಿ)  ಕಲ್ಯಾಣ‌ ಮಂಡಲಿಯು‌ ಕೂಡಲೇ 2021 ಅಧಿಸೂಚನೆ ಅನ್ವಯವೇ ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಾಕಿ ಸಹಿತ ಶೈಕ್ಷಣಿಕ ಧನ‌ಸಹಾಯವನ್ನು ಅವರ ಖಾತೆಗೆ ವರ್ಗಾಹಿಸಲು ಅಗತ್ಯ ಕ್ರಮವಹಿಸಬೇಕೆಂದು ಪ್ರಧಾನ ಕಾರ್ಯದರ್ಶಿಕೆ.ಮಹಾಂತೇಶ ಆಗ್ರಹಿಸಿದ್ದಾರೆ.



9448415167

LEAVE A REPLY

Please enter your comment!
Please enter your name here