ಬೆಂಗಳೂರು:ಕುಮಾರ್ ಸ್ವಾಮಿಯವರೆ ನೀವು ಪ್ರತಿ ಬಾರಿ ಬೆಂಗಳೂರಿಗೆ ಬಂದಾಗ ಎಚ್ಎಂಟಿ, ಕೆಐಓಸಿಎಲ್ ಬಗ್ಗೆ ಮಾತನಾಡುತ್ತೀರಿ. ಆದರೆ 10 ವರ್ಷವಾದರೂ ಪ್ರಾರಂಭವಾಗದ ಎನ್ಎಂಡಿಸಿ ಉಕ್ಕು ಕಾರ್ಖಾನೆ ಅಥವಾ ಪುನಶ್ಚೇತನ ಆಗದ ವಿಐಎಸ್ಎಲ್ ಬಗ್ಗೆ ಏಕೆ ಮಾತನಾಡುತ್ತಿಲ್ಲ?ಎಂದು ಈಶ್ವರ್ ಖಂಡ್ರೆಯವರು ಕೇಂದ್ರಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.
ಹಸಿಸುಳ್ಳು ಹೇಳುತ್ತಿರುವವರು ಯಾರು ?
ಎಚ್ಎಂಟಿ ಭೂಮಿ ಡಿನೋಟಿಫಿಕೇಷನ್ ಆಗಿಲ್ಲ ಎಂಬುದು ಸುಳ್ಳೇ? ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದ ಭೂಮಿ ಅರಣ್ಯವಾಗೇ ಉಳಿಯುತ್ತದೆ ಎಂಬುದು ಸುಳ್ಳೇ? ಎಚ್.ಎಂ.ಟಿ. 300 ಕೋಟಿ ರೂ.ಗೆ 165 ಎಕರೆ ಅರಣ್ಯ ಭೂಮಿ ಮಾರಾಟ ಮಾಡಿರುವುದು ಸುಳ್ಳೇ? ಕೆ.ಐ.ಓ.ಸಿ.ಎಲ್. ಗಣಿಗಾರಿಕೆ ಮಾಡುವಾಗ ಪರಿಸರವನ್ನು ಹಾಳು ಮಾಡಿರುವುದು ಸುಳ್ಳೇ? ಅರಣ್ಯ ಇಲಾಖೆಗೆ ಕೆ.ಐ.ಓ.ಸಿ.ಎಲ್. ಭೂಮಿಯನ್ನು ಹಸ್ತಾಂತರ ಮಾಡದಿರುವುದು ಸುಳ್ಳೇ? ದೇವದಾರಿ ಗಣಿಗೆ ಅರಣ್ಯ ಭೂಮಿ ನೀಡಬಾರದು ಎಂದು ಅರಣ್ಯ ಇಲಾಖೆ 2020ರ ಜನವರಿ 16ರಂದು ಶಿಫಾರಸ್ಸು ಮಾಡಿರುವುದು ಸುಳ್ಳೆ? ಅರಣ್ಯ ಇಲಾಖೆಯ ವಿರೋಧವಿದ್ದರೂ, ಅಂದಿನ ಬಿಜೆಪಿ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡುವಂತೆ 2020ರ ಅಕ್ಟೋಬರ್ 9ರಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸುಳ್ಳೆ? ಅರಣ್ಯ ಇಲಾಖೆಯ ಪ್ರತಿರೋಧವಿದ್ದ ಗಣಿ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ 2021 ಆಗಸ್ಟ್ 13ರಂದು ಅನುಮತಿ ನೀಡಿದ್ದು ಸುಳ್ಳೆ? ಯಾವುದು ಹಸಿಸುಳ್ಳು ಕುಮಾರಸ್ವಾಮಿ ಅವರೇ ? ಆ 300 ಹೊರಗುತ್ತಿಗೆ ನೌಕರರ ಉದ್ಯೋಗದ ಬಗ್ಗೆ ಮಾತನಾಡುವ ನೀವು, 50 ಸಾವಿರ ಉದ್ಯೋಗ ಸೃಷ್ಟಿಸುವ ಎನ್ಎಂಡಿಸಿ ಉಕ್ಕು ಕಾರ್ಖಾನೆಯ ಸ್ಥಾಪನೆ ಬಗ್ಗೆ ಏಕೆ ಮಾತನಾಡುತ್ತಿಲ್ಲ?ಎಂದು ಹೇಳಿದ್ದಾರೆ.
ವಿಶಾಖಪಟ್ಟಣದ ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಕೇವಲ 48 ಗಂಟೆ ಬೇಕಾಯಿತು. ಆದರೆ ಬಳ್ಳಾರಿಯಲ್ಲಿರುವ ಎನ್ಎಂಡಿಸಿ ಕಾರ್ಖಾನೆಗೆ ಇಷ್ಟು ವರ್ಷಗಳಾದರೂ ಏಕೆ ಪ್ರಾರಂಭವಾಗಿಲ್ಲ?
ದೇವದಾರಿ ಕಾಡು ಕುರುಚಲು ಕಾಡಲ್ಲ, ಅದು ನೈಸರ್ಗಿಕ ಕಾನನ. ಹಿಂದಿನಿಂದಲೇ ನಾಶವಾಗುತ್ತಿರುವ ಅರಣ್ಯ ಪ್ರದೇಶಗಳನ್ನು ಉಳಿಸಲು ಅರಣ್ಯ ಸಚಿವನಾಗಿ ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ನಮ್ಮ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ, ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳ ಪುನಶ್ಚೇತನದ ಮಾತಿನ ಜೊತೆಗೆ ಪರಿಸರವನ್ನು ರಕ್ಷಿಸುವ ಬದ್ಧತೆ ಕೂಡ ನಾವು ಹೊಂದಿದ್ದೇವೆ ಎಂದು ಈಶ್ವರ್ ಖಂಡ್ರೆಯವರು ಹೇಳಿದ್ದಾರೆ.