ವಿಜಯನಗರ:ಕೂಡ್ಲಿಗಿ ಪಟ್ಟಣದ ಎಸ್.ಎ.ವಿ.ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಕಲಿ ಸೀಲು ಹಾಗೂ ನಕಲಿ ಸೇವಾ ಪ್ರಮಾಣಪತ್ರ ಸಿದ್ಧಪಡಿಸಿಕೊಂಡು ನಾಲ್ಕು ವರ್ಷಗಳ ನಕಲಿ ಸೇವಾ ಪ್ರಮಾಣಪತ್ರ ತಯಾರಿಸಿಕೊಂಡ ಕೂಡ್ಲಿಗಿ ತಾಲ್ಲೂಕಿನ ಸೂಲದಹಳ್ಳಿ ಅಗ್ರಹಾರ ಗ್ರಾಮದ ಎಸ್.ಸಿದ್ಧನಗೌಡ ಎಂಬ ಅತಿಥಿ ಉಪನ್ಯಾಸಕನ ಮೇಲೆ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಎನ್.ಕಲ್ಲಪ್ಪ ಇವರು ಕೂಡ್ಲಿಗಿ ನಗರದ ಪೋಲಿಸ್ ಠಾಣೆಯಲ್ಲಿ ಐ.ಪಿಸಿ ಸೆಕ್ಷನ್ 1860 ಕಲಂ 420, 465, 468, 471 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಎಸ್.ಸಿದ್ಧನಗೌಡ ಅವರು ನಕಲಿ ಸೇವಾ ಪ್ರಮಾಣಪತ್ರ ಸಿದ್ಧಪಡಿಸಿಕೊಂಡು 2023ನೇ ಸಾಲಿನಲ್ಲಿ ನಡೆದ ಅತಿಥಿ ಉಪನ್ಯಾಸಕರ ಕೌನ್ಸಿಲಿಂಗ್ ನಲ್ಲಿ ಕನ್ನಡ ಉಪನ್ಯಾಸಕರಾಗಿ ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಆಯ್ದುಕೊಂಡು ಸೇವೆಗೆ ವರದಿ ಮಾಡಿಕೊಂಡಿದ್ದರು. ಇವರ ಸೇವೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ಎ.ಓಬಳೇಶ್ ಅವರು ಮಾಹಿತಿಹಕ್ಕು ಅಧಿನಿಯಮ ಅಡಿಯಲ್ಲಿ ಮಾಹಿತಿ ಪಡೆದು, ಕೂಡ್ಲಿಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎನ್.ಕಲ್ಲಪ್ಪ ಇವರ ವಿರುದ್ಧ ಲೋಕಾಯುಕ್ತಾಗೆ ದೂರು ನೀಡಿದ್ದರು.
ವಿಚಾರಣೆಯನ್ನು ಕೈಗೆತ್ತಿಕೊಂಡ ಲೋಕಾಯುಕ್ತ ನ್ಯಾಯಾಲಯವು ಪ್ರಾಂಶುಪಾಲರಿಗೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ನಕಲಿ ಸೀಲು, ನಕಲಿ ಪ್ರಮಾಣಪತ್ರ ಸಿದ್ಧಪಡಿಸಿಕೊಂಡ ಎಸ್.ಸಿದ್ಧನಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೋಲಿಸರು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.