ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ತುರ್ತು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಮುಖಂಡರು ಮತ್ತು ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸಿಎಂ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ನಿಯೋಗದಲ್ಲಿನ ಮುಖಂಡರು ಮತ್ತು ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ್, ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಒಳಮೀಸಲು ಜಾರಿಗೆ ಇದ್ದ ಅಡೆತಡೆಗೆ ಸುಪ್ರೀಂ ಕೋರ್ಟ್ ತೀರ್ಪು ನಿವಾರಣೆ ಮಾಡಿದೆ. ಅದೆಲ್ಲದಿಕ್ಕಿಂತಲೂ ತಾವೂ ಸದಾ ಶೋಷಿತರ ಪರ ಹೋರಾಟ, ಯೋಜನೆ ರೂಪಿಸುತ್ತಿರುವ ಹರಿಕಾರರು. ತಮ್ಮ ಸಾಮಾಜಿಕ ನ್ಯಾಯ ಬದ್ಧತೆ ಪ್ರಶ್ನಾತೀತ. ಒಳಮೀಸಲು ಜಾರಿಗೊಳಿಸಲು ತಮ್ಮಲ್ಲಿನ ಇಚ್ಛಾಶಕ್ತಿಗೆ ಬಲ ತುಂಬಲು ನಿಯೋಗದ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರವನ್ನು ಓದಿದ ಮಾಜಿ ಸಚಿವ ಎಚ್.ಆಂಜನೇಯ, ಮಾದಿಗ ಸಮುದಾಯಕ್ಕೆ ನ್ಯಾಯವಾಗಿ ದೊರಕಬೇಕಾಗಿದ್ದ ಮೀಸಲಾತಿ ಪ್ರಮಾಣ ನಿರೀಕ್ಷೆಮಟ್ಟದಲ್ಲಿ ದೊರೆತಿಲ್ಲ. ಈ ಸತ್ಯವನ್ನು ಅರಿತು ಜೊತೆಗೆ ಬಹಳಷ್ಟು ವರದಿಗಳನ್ನು ಮುಂದಿಟ್ಟುಕೊಂಡು ಒಳಮೀಸಲು ಜಾರಿಗೆ ಮಾದಿಗ ಸಮುದಾಯ ಸತತ ಮೂವತ್ತು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದೆ ಎಂದರು.
ನಿರಂತರ ಹೋರಾಟದ ಫಲ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಜೊತೆಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆಯೆಂದು ಐತಿಹಾಸಿಕ ತೀರ್ಪನ್ನು ನೀಡಿದೆ.
ಈಗಾಗಲೇ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಒಳ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿವೆ. ಅದೇ ರೀತಿ ತಾವು ಕೂಡ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಶೀಘ್ರ ಜಾರಿಗೊಳಿಸುವ ಮೂಲಕ ಸಮುದಾಯದ ಸಮಗ್ರ ಪ್ರಗತಿಗೆ ಮುಂದಾಗಬೇಕೆಂದು ಕೋರಿದರು.
ಮುಖ್ಯವಾಗಿ ಈಗಾಗಲೇ ಕೆ.ಪಿ.ಎಸ್.ಸಿ ಸೇರಿ ವಿವಿಧ ಇಲಾಖೆಗಳ ಮೂಲಕ ಘೋಷಿತವಾಗಿರುವ ಪರೀಕ್ಷೆಗಳನ್ನು ಒಳಮೀಸಲು ಜಾರಿಗೊಳ್ಳುವವರೆಗೂ ತಡೆ ಹಿಡಿಯಬೇಕು ಹಾಗೂ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಆಗಸ್ಟ್ 27 ರಂದು ನಡೆದಿರುವ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತಹ ಮುಂದೆ ನಡೆಯುವ ಮುಖ್ಯ ಪರೀಕ್ಷೆಯಲ್ಲಿ ಒಳ ಮೀಸಲಾತಿ ಹಂಚಿಕೆ ಪ್ರಕಾರ ನಡೆಸುವ ಹುದ್ದೆಗಳು ಹಂಚಿಕೆಯಾಗುವಂತೆ ಷರತ್ತು ವಿಧಿಸಿ ನೋಟಿಫಿಕೇಷನ್ ಮಾಡಬೇಕು ಎಂದು ಮನವಿ ಮಾಡಿದರು.
ಒಳ ಮೀಸಲಾತಿ ಜಾರಿಗೊಳ್ಳುವವರೆಗೆ ರಾಜ್ಯ ಸರ್ಕಾರದ ಯಾವುದೇ ಇಲಾಖೆಗಳ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಗಳು ನಡೆಯಬಾರದು ಹಾಗೂ ಸರ್ಕಾರದ ಯೋಜನೆಗಳಲ್ಲಿ ಆರ್ಥಿಕ ಮೀಸಲಾತಿ (SCSP/TSP), ಕೆ.ಐ.ಎ.ಡಿ.ಬಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯೂ ಸ್ಥಗಿತಗೊಳಿಸಬೇಕು.
ಸುಪ್ರೀಂ ಕೋರ್ಟ್ ತೀರ್ಪು ಬಂದ ತಕ್ಷಣ ತೆಲಂಗಾಣ, ಆಂಧ್ರ ಪ್ರದೇಶ, ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳ ಸರ್ಕಾರವೂ ಒಳ ಮೀಸಲಾತಿ ಜಾರಿಗೆ ಆಗುವವರೆಗೂ ಖಾಲಿಯಿರುವ ಹುದ್ದೆಗಳಿಗೆ ಕರೆದಿರುವ ಪ್ರಕ್ರಿಯೆಗಳಿಗೆ ತಕ್ಷಣ ತಡೆ ಹಿಡಿದಿದ್ದಾರೆ. ಅದೇ ಮಾರ್ಗವನ್ನು ರಾಜ್ಯದಲ್ಲೂ ಅನುಸರಿಸಬೇಕು ಎಂದು ಕೋರಿದರು.
ಸರ್ವರಿಗೂ ಸಮ ಪಾಲು-ಸಮ ಬಾಳು, ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಟ ಮಾಡಿಕೊಂಡು ಬಂದಿರುವ ಅಹಿಂದ ವರ್ಗದ ನೇತಾರ ಆಗಿರುವ ತಾವು ನೊಂದ ಜನರ ಕುರಿತು ಅಂತಃಕರಣ ಹೃದಯ ಹೊಂದಿದ್ದಿರಾ.
ಆದ್ದರಿಂದ ಶೋಷಿತರಲ್ಲೇ ಶೋಷಿತರು, ಅಸ್ಪೃಶ್ಯರಲ್ಲೇ ಅಸ್ಪೃಶ್ಯರು ಆದ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲು ಜಾರಿಗೆಗಾಗಿ ತಕ್ಷಣ ಆದೇಶ ಹೊರಡಿಸಬೇಕೆಂದು ವಿನಯಪೂರ್ವಕವಾಗಿ ವಿನಂತಿಸುತ್ತೇವೆ ಎಂದು ವಿನಂತಿಸಿದರು.
ಎಲ್ಲ ಮುಖಂಡರ ಮಾತು ಆಲಿಸಿ, ಮನವಿ ಪತ್ರ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನೊಂದ, ಅಸ್ಪೃಷ್ಯ ಸಮಾಜದ ನೋವಿನ ಅರಿವು ನನಗಿದೆ. ಒಳಮೀಸಲು ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದಂತೆ ಅದನ್ನು ಸ್ವಾಗತಿಸಿದ್ದೇನೆ. ಅದರರ್ಥ ನಾನು ನೊಂದ ಜನರ ಪರ ಎಂದರ್ಥ ಎನ್ನುವ ಮೂಲಕ ಒಳಮೀಸಲು ಜಾರಿಗೊಳಿಸುವ ಅಭಯ ನೀಡಿದರು.
ನಮ್ಮದು ರಾಷ್ಟ್ರೀಯ ಪಕ್ಷ. ಜೊತೆಗೆ ಸಚಿವ ಸಂಪುಟದಲ್ಲಿ ಈ ವಿಷಯ ತೀರ್ಮಾನಗೊಳ್ಳಬೇಕು. ನಾನು ಹಾಗೂ ಪಕ್ಷ ಸದಾ ನೊಂದ ಜನರ ಪರವಾಗಿ ಇರುವುದು ಎಂದು ಹೇಳಿದರು.
ಶಾಸಕರಾದ ಮಾಯಕೊಂಡದ ಕೆ.ಎಸ್.ಬಸವಂತಪ್ಪ, ನೆಲಮಂಗಲದ ಶ್ರೀನಿವಾಸ್, ಮಾಜಿ ಸಚಿವ ಎಂ.ಶಿವಣ್ಣ ,, ವಿಧಾನ ಪರಿಷತ್ತು ಸದಸ್ಯರಾದ ಡಾ.ಡಿ. ತಿಮ್ಮಯ್ಯ ನಿಯೋಗದಲ್ಲಿದ್ದರು.