ಬೆಳಗಾವಿ, ಜೂನ್ 15: ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಜಿಲ್ಲಾಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ನದಿಯ ಒಳಹರಿವು ಹಾಗೂ ಮಳೆಯ ಪ್ರಮಾಣದ ಮೇಲೆ ನಿರಂತರ‌ ನಿಗಾ ವಹಿಸುವ ಮೂಲಕ ಜನ ಹಾಗೂ ಜಾನುವಾರಿಗಳ ಜೀವಹಾನಿ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಂಭವನೀಯ ಪ್ರವಾಹ ನಿರ್ವಹಣೆ, ನೈರುತ್ಯ ಮುಂಗಾರು ಸಿದ್ಧತೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶನಿವಾರ(ಜೂ.15) ನಡೆದ ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನಾಹುತ ಸಂಭವಿಸಿದಾಗ ರಕ್ಷಣಾ ತಂಡಗಳು ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂಬುದರ ಕುರಿತು ಕಂದಾಯ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಮುಂಚಿತವಾಗಿಯೇ ಸಮನ್ವಯತೆ ಸಾಧಿಸಬೇಕು.
ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೇ ಪ್ರವಾಹಬಾಧಿತಗೊಳ್ಳಲಿರುವ ತಾಲ್ಲೂಕುಗಳ ಮಟ್ಟದಲ್ಲೂ ಇಂತಹ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ರವಾಹ ಮಾತ್ರವಲ್ಲದೇ ಮನೆಕುಸಿತ ಮತ್ತಿತರ ತುರ್ತು ಸಂದರ್ಭಗಳಲ್ಲಿ ತುರ್ತು ಕ್ರಮಕ್ಕೆ ರಕ್ಷಣಾ ವ್ಯವಸ್ಥೆ ಮತ್ತು ತಂಡಗಳು ಸಜ್ಜಾಗಿರಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಪ್ರವಾಹ ನಿರ್ವಹಣೆ ಕುರಿತು ಜಿಲ್ಲಾ, ತಾಲ್ಲೂಕು ಹಾಗೂ ಪ್ರವಾಹದಿಂದ ಬಾಧಿತಗೊಳ್ಳಲಿರುವ ಗ್ರಾಮಗಳ ಮಟ್ಟದಲ್ಲಿ ಅಣುಕು ಕಾರ್ಯಾಚರಣೆ ನಡೆಸಬೇಕು. ಆಗಾಗ ಸಭೆ ನಡೆಸುವ ಮೂಲಕ ತಂಡಗಳನ್ನು ಸದಾ ಜಾಗೃತವಾಗಿಡಬೇಕು.
ಜಿಲ್ಲಾ ಹಂತದಲ್ಲಿರುವ ಸಮಿತಿಗಳನ್ನು ಪ್ರಬಾಹಬಾಧಿತಗೊಳ್ಳಲಿರುವ ತಾಲ್ಲೂಕು ಮತ್ತು ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಬೇಕು ಎಂದು ಸಚಿವರು ತಿಳಿಸಿದರು.

ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಪ್ರವಾಹ ಹಾನಿ ಸರಿಪಡಿಸಲು ನೀಡಲಾಗಿರುವ ಅನುದಾನವನ್ನು ತಕ್ಷಣವೇ ಬಳಕೆ‌ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಪ್ರವಾಹ ನಿರ್ವಹಣೆ ಪೂರ್ವಸಿದ್ಧತೆ ಕುರಿತು ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, “ಕೊಯ್ನಾದಿಂದ‌ ಬಿಡುಗಡೆ ಮಾಡಲಾದ 3.44 ಲಕ್ಷ ಕ್ಯೂಸೆಕ್ ನೀರು ಹಾಗೂ ಮಳೆಯಿಂದ ಹಿಂದೆ ಪ್ರವಾಹ‌ ಉಂಟಾಗಿತ್ತು. ಆದ್ದರಿಂದ ನೀರು ಬಿಡುಗಡೆ ಕುರಿತು ಮಹಾರಾಷ್ಟ್ತದ ಜತೆ ಸಮನ್ವಯ ಸಾಧಿಸಿಕೊಂಡು ಉಭಯ ರಾಜ್ಯಗಳ ಉನ್ನತಮಟ್ಟದ ಸಮಿತಿ ರಚಿಸಿಕೊಂಡು ಜಲಾಶಯಗಳ ನೀರಿನ ಮಟ್ಟ ನಿರ್ವಹಣೆ ಮಾಡುವುದರಿಂದ ಪ್ರವಾಹ ಪರಿಸ್ಥಿತಿ ತಡೆಗಟ್ಟಬಹುದು” ಎಂದು ತಿಳಿಸಿದರು.
ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಬೆಣ್ಣಿಹಳ್ಳ ಹಾಗೂ ತುಪ್ಪರಿ ಹಳ್ಳದ ವ್ಯಾಪ್ತಿಯಲ್ಲಿ ಮಾತ್ರ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ.
ಪ್ರವಾಹದಿಂದ ಬಾಧಿತಗೊಳ್ಳಲಿರುವ ಪ್ರದೇಶ ಹಾಗೂ ಜನಸಂಖ್ಯೆಯನ್ನು ಈಗಾಗಲೇ‌ ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಗರಿಷ್ಠ ಪ್ರವಾಹ ಉಂಟಾದರೆ 85 ಸಾವಿ ಹೆಕ್ಟೇರ್ ಕೃಷಿ ಜಮೀನಿನಲ್ಲಿ ನೀರು ನಿಲ್ಲಬಹುದು. ಈ ಎಲ್ಲ ಸಾಧ್ಯತೆಗಳನ್ನು ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಅದೇ ರೀತಿಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹಾಗೂ ಹಾವೇರಿ ಜಿಲ್ಲಾಧಿಕಾರಿಗಳು ಸಂಭವನೀಯ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಚಿವರಿಗೆ ವಿವರಿಸಿದರು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಖಟಾರಿಯಾ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ(ನೋಂದಣಿ ಮತ್ತು ಸಾಮಾಜಿಕ‌ಭದ್ರತೆ)ಗಳಾದ ವಿ.ರಶ್ಮಿ ಮಹೇಶ್ , ಕಂದಾಯ ಇಲಾಖೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಇಲಾಖೆಯ ಆಯುಕ್ತರಾದ ಮಮತಾ ಬಿ‌.ಆರ್., ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟೆಣ್ಣವರ ಸಭೆಯಲ್ಲಿ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here