ಭಾರತ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕರ್ನಾಟಕದ ಕಾಂಗ್ರೆಸ್ ಸರ್ಕಾರ SC/ST/OBC ಮೀಸಲಾತಿಯನ್ನು ಕಿತ್ತು ಮುಸ್ಲೀಮರಿಗೆ ನೀಡಿದಂತೆ ಇಡೀ ದೇಶಕ್ಕೆ ವಿಸ್ತರಿಸುತ್ತದೆ ಎಂದಿದ್ದಾರೆ. ಪ್ರಧಾನಿಗಳಿಗೆ ಇದರಿಂದ ಕನಿಷ್ಠ ಮೀಸಲಾತಿ ಇತಿಹಾಸವೂ ತಿಳಿದಿಲ್ಲ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ ಅವರು SC/ST/OBC ಗಳಿಗೆ ಮಾಡಿದ ಮೋಸವನ್ನು ಮರೆಮಾಚಲು ಮತ್ತೆ SC/ST/OBC ವಿರುದ್ಧ ಮುಸ್ಲೀಮರನ್ನು ಎಳೆದು ನಿಲ್ಲಿಸುತ್ತಿದ್ದಾರೆ. ಸತ್ಯ ಅರಿಯೋಣ ಬನ್ನಿ.

ಕರ್ನಾಟಕದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಮುಸ್ಲೀಮರು OBC ಮೀಸಲಾತಿ ಪಡೆಯುತ್ತಿದ್ದಾರೆ. 1994 ರಲ್ಲಿ ಚಿನ್ನಪ್ಪರೆಡ್ಡಿ ಆಯೋಗವು ಸ್ವತಂತ್ರ ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳನ್ನು ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಮಾನದಂಡಗಳ ಆಧಾರದಲ್ಲಿ ಗುರುತಿಸಿತು. ಅದಲ್ಲದೆ ಮೀಸಲಾತಿ ಪ್ರಮಾಣವನ್ನು 50% ರಿಂದ 57%ಗೆ ಏರಿಸಲು ಸೂಚಿಸಿತ್ತು. ಇದಕ್ಕೆ ಮುಖ್ಯ ಕಾರಣ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣವನ್ನು 50% ಗೆ ಮಿತಿಗೊಳಿಸಿದ್ದಾಗಿತ್ತು.

ಭಾರತದಲ್ಲಿ ಮಂಡಲ್ ಆಯೋಗದ ವರದಿಯ ನಂತರ ಹಿಂದುಳಿದ ಜಾತಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ 27% ನಷ್ಟು ಮೀಸಲಾತಿ ದೊರಕಿತು. ದುರಂತವೆಂದರೆ ಭಾರತದಲ್ಲಿ 52% ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಜಾತಿಗಳಿದ್ದು, ಅವುಗಳಿಗೆ ಕೇವಲ 27% ಮೀಸಲಾತಿ ನೀಡಲಾಯಿತು. ಇದಕ್ಕಿದ್ದ ಕಾರಣ ಮತ್ತದೇ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣವನ್ನು 50% ಗೆ ಮಿತಿಗೊಳಿಸಿದ್ದಾಗಿತ್ತು.

ನೆನಪಿರಲಿ, ಈ ಎರಡೂ ಆಯೋಗಗಳು ಮುಸ್ಲೀಮರೊಳಗಿನ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು OBC ಪಟ್ಟಿಗೆ ಸೇರಿಸಿದ್ದವು. ಈಗ ಬಿಜೆಪಿ-ಮೋದಿ ಪಟಾಲಂ ಪ್ರಚಾರ ಮಾಡುತ್ತಿರುವಂತೆ ಎಲ್ಲಾ ಮುಸ್ಲಿಂ ಸಮುದಾಯಗಳನ್ನು ಇಡಿಯಾಗಿ OBC ಪಟ್ಟಿಗೆ ಸೇರಿಸಿಲ್ಲ. ಮುಸ್ಲೀಮರೊಳಗಿನ ವ್ಯಾಪಾರಿ ಸಂಬಂಧಿತ ಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಡಲಾಗಿದೆ.

ಮಂಡಲ್ ವರದಿಯ ಶಿಫಾರಸು ಪ್ಯಾರ 13.11 ರಲ್ಲಿ OBC ಗಳ ಜನಸಂಖ್ಯೆ ತಿಳಿಸುವಾಗ the population of OBC’s both Hindu and non-Hindu is around 52% ಎನ್ನತ್ತೆ. ಇದರ ಅರ್ಥ OBC ಗಳೆಂದರೆ ಹಿಂದೂ ಮತ್ತು ಹಿಂದೂಯೇತರ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ಸಮುದಾಯಗಳು ಎಂದರ್ಥ. ಹಾಗಂತ ಈ ಎಲ್ಲಾ ಅಲ್ಪಸಂಖ್ಯಾತ ಧರ್ಮಗಳವರಿಗೆ ಧರ್ಮದ ಆಧಾರದಲ್ಲಿ OBC ಮೀಸಲಾತಿ ನೀಡಿಲ್ಲ. ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಆಧಾರದಲ್ಲಿ ಮೀಸಲಾತಿ ನೀಡಿರುವುದಾಗಿದೆ. ಆದರೆ ಮೋದಿ ಪಟಾಲಂ ಕೇವಲ ಮುಸ್ಲೀಮರನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುತ್ತಿದೆ. ಏಕೆಂದರೆ ಈಗಾಗಲೇ ಮುಸ್ಲೀಮರ ವಿರುದ್ಧ ಕಪೋಲಕಲ್ಪಿತ ಭಯವನ್ನು ಸುಳ್ಳು ಸುಳ್ಳೇ ಹಬ್ಬಿಸಲಾಗಿರುವುದರಿಂದ SC/ST/OBC ಗಳನ್ನು ಅವರ ವಿರುದ್ಧ ಎತ್ತಿ ಕಟ್ಟಿ ತಮ್ಮ ಓಟಿನ ಬೇಳೆ ಕಾಳು ಬೇಯಿಸಿಕೊಳ್ಳು ಹಳೆಯ ಕುತಂತ್ರವಾಗಿದೆ. ಗುಜರಾತಿನ ಗೋದ್ರಾ ಹತ್ಯಾಕಾಂಡಗಳ ನಂತರದ ಹಿಂದೂ-ಮುಸ್ಲೀಂ ಗಲಭೆಗಳಲ್ಲಿ ಜೈಲು ಸೇರಿದವರು SC/ST/OBC ಗಳಾದರೆ, ಗಲಬೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಶಾಸಕರಾದವರು ಬ್ರಾಹ್ಮಣರು-ಬನಿಯಾಗಳಾಗಿದ್ದಾರೆ. ಹೀಗೆ ಒಂದೇ ಕಲ್ಲಿಗೆ SC/ST/OBC ಮತ್ತು ಮುಸ್ಲೀಮರನ್ನು ಹೊಡೆದುರುಳಿಸುವ ಕುತಂತ್ರವನ್ನೇ ಇಂದಿಗೂ ಮಾಡಿಕೊಂಡು ಬರುತ್ತಿದ್ದಾರೆ.

ಮೋದಿಯವರಿಗೆ SC/ST/OBC ಗಳ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಮಂಡಲ್ ಆಯೋಗ ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳು 50% ಗಿಂತಲೂ ಹೆಚ್ಚು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದ್ದರೂ, ಇಂದಿರಾ ಸಹಾನಿ ಪ್ರಕರಣದಲ್ಲಿ ಅವೈಜ್ಞಾನಿಕ ಮೀಸಲಾತಿ ಮಿತಿ 50% ಇಟ್ಟಿದ್ದರಿಂದಾಗಿ ಸಾಕಾರಗೊಳಿಸಲಾಗಿರಲಿಲ್ಲ. ಆದರೆ 2019 ರಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ಬನಿಯಾಗಳಿಗೆ 10% EWS ಮೀಸಲಾತಿ ನೀಡಿದ ಮೋದಿ ಸರ್ಕಾರ ಅದನ್ನು SC/ST/OBC ಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಏಕೆ ಕೊಡಲಿಲ್ಲ? 50% ಮೀಸಲಾತಿ ಮಿತಿಯನ್ನು ಮೀರಲು ಸಂವಿಧಾನಕ್ಕೆ ಏಕೆ ತಿದ್ದುಪಡಿ ತರಲಿಲ್ಲ? ಬ್ರಾಹ್ಮಣರಿಗೆ ಒಂದು ನ್ಯಾಯ SC/ST/OBC ಗಳಿಗೆ ಒಂದು ನ್ಯಾಯ ಮಾಡಿದ್ದು ಏಕೆ? ಏಕೆಂದರೆ RSS-BJP ಗೆ ಮೀಸಲಾತಿ ಕೊಡುವುದೇ ಇಷ್ಟವಿಲ್ಲ. ಈ ಹಿಂದೆ ಮಂಡಲ್ ಆಯೋಗ OBC ಗಳಿಗೆ ಮೀಸಲಾತಿ ನೀಡಿದಾಗಲೂ ಸಹ ಹೀಗೆಯೇ ವಿರೋಧಿಸಿ ಇಡೀ ಹೋರಾಟವನ್ನು ದಿಕ್ಕು ತಪ್ಪಿಸಲು ಬಾಬರಿ ಮಸೀದಿ ಕೆಡವಲು SC/ST/OBC ಗಳಿಗೆ ʼಕಮಂಡಲʼ ಯಾತ್ರೆಯ ಭ್ರಮೆ ಹುಟ್ಟಿಸಿತ್ತು. ನೋಡಿ ʼಮಂಡಲ್ʼ ಗೆ ವಿರುದ್ಧವಾಗಿ ʼಕಮಂಡಲ್ ʼ ಯಾತ್ರೆ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ OBC ಸಮುದಾಯ ಸೋತಿತ್ತು.

ಆದರೆ ಈಗ ಅರ್ಥ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ಮೀಸಲಾತಿಯನ್ನು ಬಲಗೊಳಿಸಲು ʼಜಾತಿ ಗಣತಿʼ ಮಾಡುವ ಆಶ್ವಾಸನೆ ನೀಡಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಝ ಕೋರ್ಟ್ ಮೀಸಲಾತಿಗೆ ಹಾಕಿರುವ ಮಿತಿ 50% ತೆಗೆದು ಹಾಕುವುದಾಗಿ ತಿಳಿಸಿದೆ. 10% EWS ಮೀಸಲಾತಿಯನ್ನು SC/ST/OBC ಗಳಿಗೂ ವಿಸ್ತರಿಸುವುದಾಗಿ ತಿಳಿಸಿದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿಜಿ ಇಂತಹ ಯಾವ ಆಶ್ವಾಸನೆಯನ್ನೂ ನೀಡಿಲ್ಲ. ಕರ್ನಾಟಕ ಕಾಂಗ್ರೆಸ್ಸಿನ ʼಗ್ಯಾರಂಟಿʼ ಪದವನ್ನು ಕಳ್ಳತನ ಮಾಡಿದ್ದು ಬಿಟ್ಟರೆ ಇನ್ನಾವ ಜನಪರ ಆಶ್ವಾಸನೆಯೂ ಬಿಜೆಪಿ ಪ್ರಣಾಳಿಕೆಯಲ್ಲಿಲ್ಲ. ಹಾಗಾಗಿ SC/ST/OBC ವಿರುದ್ಧ ಮುಸ್ಲೀಮರನ್ನು ನಿಲ್ಲಿಸುತ್ತಿದ್ದಾರೆ.

ಒಟ್ಟಾರೆ SC/ST/OBC ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ನಂಬಬಹುದೇ ಹೊರತು ಬಿಜೆಪಿ-ಮೋದಿಯವರ ಭಾಷಣವನ್ನೂ ಹಾಗೂ ಪ್ರಣಾಳಿಕೆಯನ್ನು ನಂಬಲು ಸಾಧ್ಯವೇ ಇಲ್ಲ.

LEAVE A REPLY

Please enter your comment!
Please enter your name here