ನೆಚ್ಚಿನ ಮತದಾರ ಬಾಂಧವರೆ, ನಿನ್ನೆ ಕುಕ್ಕುವಾಡ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಹದಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಗಿದೆ. ವೇದಿಕೆಯಲ್ಲಿ ಹಾಕಿರುವ ಬ್ಯಾನರ್ ನಲ್ಲಿ ಪ್ರಭಾಮಲ್ಲಿಕಾರ್ಜುನರವರ ಮತ್ತು ಎಸ್ ಎಸ್ ಗಣೇಶರವರ ಪೋಟೋಗಳನ್ನು ದೊಡ್ಡದಾಗಿ ಕಾಣುವಂತೆ ಹಾಕಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹದಡಿ ಜಿ.ಸಿ.ನಿಂಗಪ್ಪನವರ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರ ಪೋಟೋ ಕಾಣಿಸುತ್ತಿಲ್ಲ. ನನ್ನ ಪ್ರಶ್ನೆ ಒಂದು: ಎಸ್ ಎಸ್ ಗಣೇಶರವರು ಕಾಂಗ್ರೆಸ್ ಪಕ್ಷದ ಯಾವ ಪದಾಧಿಕಾರಿ. ನನ್ನ ಪ್ರಶ್ನೆ ಎರಡು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹದಡಿ ಜಿ.ಸಿ.ನಿಂಗಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರು ಅಹಿಂದದವರು ಮತ್ತು ಕುರುಬರು ಎಂಬ ಕಾರಣಕ್ಕೆ ಅವರ ಪೋಟೋ ಕೈಬಿಡಲಾಗಿದೆಯೇ?.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾಮಲ್ಲಿಕಾರ್ಜುನರವರು ಸಭೆಯನ್ನುದ್ದೇಶಿಸಿ ಮಾತನಾಡುವಾಗ ನನ್ನ ಮಾವನವರಾದ ಶಾಸಕ ಶಾಮನೂರು ಶಿವಶಂಕರಪ್ಪ, ಎಸ್ ಎಸ್ ಗಣೇಶ, ಎಸ್ ಎಸ್ ಬಕ್ಕೇಶ್ ಮತ್ತು ಪತಿ ಎಸ್ ಎಸ್ ಮಲ್ಲಿಕಾರ್ಜುನರವರ ಸಹಕಾರ ಇದೆ. ಅವರೇ ನನಗೆ ಸ್ಪೂರ್ತಿ ಎಂದು ಹೇಳಿದ್ದಾರೆ. ಅಂದ್ರೆ ಇವರಿಗೆ ಮತದಾರ ಪ್ರಭುಗಳು ಲೆಕ್ಕಕ್ಕೆ ಇಲ್ಲ ಎಂದು ಹೇಳಿದಂತೆ ಆಗಿದೆ. ಆದ್ದರಿಂದ ಇವರನ್ನು ಬೆಂಬಲಿಸುವ ಮತದಾರರು ಸ್ವಲ್ಪ ಯೋಚಿಸಬೇಕು. ಪ್ರಭಾರವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ ಆದರೆ ಇನ್ನೂ ಗೆದ್ದಿಲ್ಲ. ಈಗಲೇ ಈ ರೀತಿಯ ಕೌಟಂಬಿಕ ಪ್ರೀತಿ ವಾತ್ಸಲ್ಯದ ಧೋರಣೆ ಹೊಂದಿದ್ದಾರೆ. ಇವರನ್ನು ಬೆಂಬಲಿಸುವ ಮತದಾರರ ಮೇಲೆ ಕೃತಜ್ಞತೆ ಭಾವನೆ ಹೊಂದಿಲ್ಲ. ಇಂತಹವರಿಂದ ದೇಶ ಸೇವೆ ಯಾವ ರೀತಿ ಸಾಧ್ಯ.
ಈ ಸಭೆಯ ವೇದಿಕೆ ಮೇಲಿದ್ದ ಹದಡಿ ಹಾಲಪ್ಪ, ಮುದಹದಡಿ ದಿಳ್ಳೇಪ್ಪ, ಕುಕ್ಕುವಾಡದ ಕೆ ಎನ್ ಮಂಜುನಾಥ್, ಹದಡಿ ಜಿ.ಸಿ.ನಿಂಗಪ್ಪ, ತುರ್ಚಗಟ್ಟ ಬಸವರಾಜಪ್ಪ ಮುಂತಾದವರು ಕಾಂಗ್ರೆಸ್ ಪಕ್ಷದ ಕಟ್ಟಾಳುಗಳಾಗಿ ಅನೇಕ ವರ್ಷಗಳಿಂದ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದಾರೆ. ಇವರುಗಳಿಗೆ ಪ್ರತಿಯಾಗಿ ಶಾಮನೂರು ಮನೆತನದರು ಏನು ಮಾಡಿದ್ದಾರೆ ಎಂದು ನಾನು ಕೇಳಬಯಸುತ್ತೇನೆ. ಹದಡಿ ಹಾಲಪ್ಪನವರನ್ನು ಎಪಿಎಂಸಿ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ಇತ್ತೀಚೆಗೆ ನಡೆದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಕ್ಕುವಾಡದ ಕೆ ಎನ್ ಮಂಜುನಾಥ್ ರವರನ್ನು ನಿಲ್ಲಿಸಿ, 50 ಲಕ್ಷ ಖರ್ಚು ಮಾಡಿಸಿ, ಸೋಲಿಸಲಾಯಿತು. ಇವರ ಗೆಲ್ಲುವಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಈಗ ಕಾಂಗ್ರೆಸ್ ಅಭ್ಯರ್ಥಿ ಪ್ರಭಾಮಲ್ಲಿಕಾರ್ಜುನರವರಿಗೆ ಅಹಿಂದ ಮತಗಳೇ ಶ್ರೀರಕ್ಷೆ. ಡಿ.ಸಿ.ಸಿ ಬ್ಯಾಂಕ್ ಗೆ 5 ಜನ ನಿರ್ದೇಶಕರನ್ನಾಗಿ ನಾಮಿನಿ ಮಾಡುವ ಅವಕಾಶ ಇದೆ. ಈ 5 ನಿರ್ದೇಶಕ ಸ್ಥಾನಗಳಿಗೆ ಕುರುಬ, ನಾಯಕ, ಉಪ್ಪಾರ ಸೇರಿದಂತೆ ಎಸ್ಸಿ ಎಸ್ಟಿ ಸಮುದಾಯದವರನ್ನು ನಾಮಿನಿ ಮಾಡಿಸಿ, ಅಹಿಂದದವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಮನಸ್ಸು ಜಿಲ್ಲಾ ಸಚಿವರು ಮಾಡಿಲ್ಲ. ಅಂತಹ ದೊಡ್ಡ ಮನಸ್ಸು ಅವರಿಗಿಲ್ಲ.ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶಾಮನೂರು ವಿರುದ್ದದ ಅಸಮಧಾನದ ಹೊಗೆ ಹೆಚ್ಚಾಗುತ್ತಿದೆ.