ವಿಜಯಪುರ: ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ, ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯವಶ್ಯವಾಗಿದ್ದು ವಿಜಯಪುರ ನಗರದಲ್ಲಿ ಮಹಾನಗರಪಾಲಿಕೆಯ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಲು ಪ್ರತಿ ವಾರ್ಡ್‌ ವಾರು ಸಮಿತಿಗಳನ್ನು ರಚಿಸಿಕೊಳ್ಳಲು ಸಾರ್ವಜನಿಕರು ಸ್ವಯಂ ಇಚ್ಛೆಯಿಂದ ಮುಂದೆ ಬರಬೇಕೆಂದು ಜನಾಗ್ರಹ ಕರ್ನಾಟಕ ನಾಗರಿಕ ಸಹಭಾಗಿತ್ವದ ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ್ ಹಂಪಾಪುರ ಎಲ್. ಕರೆ ನೀಡಿದರು.
ವಾರ್ಡ್ ಸಂಖ್ಯೆ 21ರ ಸಾಯಿ ಪಾರ್ಕ್ ಗೋಕುಲ್ ನಗರ ಏಳು ಮಕ್ಕಳ ತಾಯಿ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ವಾರ್ಡ್ ಸಮಿತಿ ಬಳಗ ಜಿಲ್ಲಾ ಘಟಕ ವಿಜಯಪುರ ವಾರ್ಡ್ ಸಮಿತಿ ಬಳಗದವರು ಏರ್ಪಡಿಸಿದ್ದ ‘ನನ್ನ ನಗರ ನನ್ನ ಜವಾಬ್ದಾರಿ ಸಕ್ರಿಯ ನಾಗರಿಕತ್ವದ ಕೈಪಿಡಿ’ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಅವರು ಸ್ಥಳೀಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜನರ ಸಹಭಾಗಿತ್ವ ಬಹಳ ಪ್ರಮುಖವಾದುದು. ಆದರೆ ನಗರ ಸ್ಥಳೀಯ ಸರ್ಕಾರಗಳ ಮುಖ್ಯ ಜಾಲತಾಣಗಳಲ್ಲಿ ಪಾಲಿಕೆ ಪರಿಷತ್ ಸಾಮಾನ್ಯ ಸಭೆಗಳ ನಡುವಳಿ ಸೇರಿದಂತೆ ಯಾವುದೇ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಸಭೆಗಳ ಕಾರ್ಯಕಲಾಪವನ್ನು ನೇರ ಪ್ರಸಾರ ಮಾಡುವುದರಿಂದ ಜನರಿಗೆ ತಮ್ಮ ಸ್ಥಳೀಯ ಆಡಳಿತ ಕುರಿತು ವಾರ್ಡ್ ಸದಸ್ಯರು ನಡೆಸುವ ಚರ್ಚೆಯ ಎಲ್ಲ ಮಾಹಿತಿಯು ಇದರಿಂದ ಲಭ್ಯವಾಗಲಿದೆ. ನಗರಲಲ್ಲಿ ವಾತಾವರಣದ ಸ್ವಚ್ಛತೆಗಾಗಿ ಮರಗಳ ಗಣತಿ. ಕೆರೆ ಮತ್ತು ಉದ್ಯಾನಗಳ ತಂತ್ರಾಂಶಗಳ ಆಧಾರಿತ ಮೇಲ್ವಿಚಾರಣೆ ಮತ್ತು ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ಪ್ರತ್ಯೇಕ ನೀತಿ ಜಾರಿಗೊಳಿಸಿರುವುದು ಸ್ವಾಗತಾರ್ಹ, ವಾರ್ಡ್ ಸಮಿತಿ ಮತ್ತು ಏರಿಯಾ ಸಭೆಗಳನ್ನು ಕಾರ್ಯರೂಪಕ್ಕೆ ತಂದು ಸಮಪರ್ಕವಾಗಿ ನಿರ್ವಹಿಸಬೇಕೆಂದು ಹೇಳಿದರು.
ಇನ್ನೋರ್ವ ಅತಿಥಿ ಉಪನ್ಯಾಸಕರಾದ ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವದ ಹಿರಿಯ ಕಾರ್ಯಕ್ರಮ ಸಂಯೋಜಕ ಮಂಜುನಾಥ್ ಎಸ್. ಮೊಕಾಶಿ ಮಾತನಾಡಿ, ವಾರ್ಡ್ ಸಮಿತಿ ರಚನೆ ಪರಿಕಲ್ಪನೆ ಇಂದು ನಿನ್ನೆಯದಲ್ಲ ಬಹು ಹಿಂದಿನ ಕಾಲದಿಂದಲೂ ರಾಜ ಮಹಾರಾಜರು ಭಾರತದಲ್ಲಿ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಈ ದೇಶವನ್ನು ಮುನ್ನಡೆಸಿದ ಚೋಳರು ಚಾಲುಕ್ಯರು ಅನೇಕ ರಾಜ ಮಹಾರಾಜರು ಈ ಪದ್ಧತಿಯನ್ನು ಅನುಸರಿಸಿರುವದು ತಿಳಿದುಬರುತ್ತದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ರಚಿಸಲ್ಪಟ್ಟಿರುವ ಸರ್ಕಾರ ಆಡಳಿತವನ್ನು ಜನತೆಯ ಹಿತ ಕಾಯಲು ಜನರ ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸಲು ಅಧಿಕಾರ ವಿಕೇಂದ್ರೀಕರಣಗೊಳಿಸುತ್ತಿದ್ದು ಆಯಾ ವಾರ್ಡಿನ ಸಮಸ್ಯೆಗೆ ಜನರ ಮಧ್ಯದಲ್ಲಿಯೇ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಹಾಯಕಾರಿಯಾಗಿದೆ. ದೇಶದ ಹಿರಿಯರು ಕಂಡ ಪ್ರಜಾಪ್ರಭುತ್ವದ ಕನಸು ನನಸಾಗಲಿದೆ ಕಾರಣ ಈ ಕೂಡಲೇ ವಾರ್ಡ್ ಸಮಿತಿ ರರಚನೆ ಮಾಡಲು ಅಗತ್ಯವಿರುವ ಅರ್ಜಿಗಳನ್ನು ವಿಜಯಪುರ ಮಹಾನಗರ ಪಾಲಿಕೆಯವರು ಸಾರ್ವಜನಿಕರಿಂದ ಆಹ್ವಾನಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮಕ್ಕೆ ಸಸಿಗೆ ನೀರೇರೆದು ಮಾತನಾಡಿದ ವಿಜಯಪುರ ಮಹಾನಗರಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ ಕರ್ನಾಟಕ ಮಹಾನಗರಪಾಲಿಕೆ ಅಧಿನಿಯಮ 1976. ಸಂವಿಧಾನದ 74 ತಿದ್ದುಪಡಿ ಆಶಯದಂತೆ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ರಚನೆ ಕಡ್ಡಾಯವಾಗಿದ್ದು, ಅಧಿಕಾರ ವಿಕೇಂದ್ರೀಕರಣದಿಂದ ಅಭಿವೃದ್ಧಿ ಸಾಧ್ಯ ಎಂಬುದಲ್ಲದೆ ಜನರನ್ನು ಆಡಳಿತದದಲ್ಲಿ ಸಹಭಾಗಿತ್ವ ಗೊಳಿಸುವುದಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಬೆಸುಗೆಯಾಗಿ ಉತ್ತಮ ಕಾರ್ಯ ನಿರ್ವಹಿಸಲು ಅನುಕೂಲವಾಗಲಿದೆ. ಈ ಕುರಿತು ನಗರ ವಾರ್ಡ್ ಸಮಿತಿ ಬಳಗದ ಸಂಚಾಲಕರು. ಸದಸ್ಯರು ಸಾರ್ವಜನಿಕರಿಂದ ಅರ್ಜಿ ಕರೆಯಲು ಅನೇಕ ಬಾರಿ ಮನವಿ ಸಲ್ಲಿಸಿದ್ದು ಗಮನದಲ್ಲಿದೆ ಕಾರಣ ಮಾನ್ಯ ಆಯುಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
‘ನನ್ನ ನಗರ ನನ್ನ ಜವಾಬ್ದಾರಿ ಸಕ್ರಿಯ ನಾಗರಿಕತ್ವದ ಕೈಪಿಡಿ’ ಬಿಡುಗಡೆಗೊಳಿಸಿ ಮಹಾನಗರ ಪಾಲಿಕೆಯ ಪೂಜ್ಯ ಮಹಾ ಪೌರರದ ಶ್ರೀಮತಿ ಮೇಹಜಮೀನ್ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ವಾರ್ಡ್ ಸಮಿತಿ ರಚನೆ ಇದೊಂದು ಸಂವಿಧಾನಬದ್ದ ಉತ್ತಮ ಆಡಳಿತ ವ್ಯವಸ್ಥೆಯ ಪ್ರಕ್ರಿಯೆಯಾಗಿದ್ದು, ಪ್ರತಿ ವಾರ್ಡಿನಲ್ಲಿ ವಾರ್ಡ್ ಸಮಿತಿ ರಚನೆ ಮಾಡಲು ಅಗತ್ಯವಿರುವ ಮಾಹಿತಿ ಪೂರೈಸಲು ವಾರ್ಡ್ ಸಮಿತಿ ಬಳಗ ಮುಂದಾಗಿರುವುದು ಸಂತೋಷದ ವಿಚಾರ ಮುಂದಿನ ದಿನಗಳಲ್ಲಿ ವಾರ್ಡ್ ಸಮಿತಿ ರಚನೆ ಮಾಡಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಉಪಮಹಾಪೌರ ದಿನೇಶ್ ಹಳ್ಳಿ, ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ವಾರ್ಡ್ ಸಂಖ್ಯೆ 21ರ ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗಡಗಿ, ಗೌರವ ಅಧ್ಯಕ್ಷತೆ ವಹಿಸಿದ್ದ ಖ್ಯಾತ ನ್ಯಾಯವಾದಿ ಡಿ.ಜಿ.ಬಿರಾದಾರ, .ವಿಜಯಪುರ ವಾರ್ಡ್ ಸಮಿತಿ ಸಹ ಸಂಚಾಲಕ ಯಲ್ಲಪ್ಪ ಇರಕಲ್, ಡಾಕ್ಟರ್ ರಶ್ಮಿ ಚಿತ್ತವಾಡಗಿ, ಶಿಕ್ಷಕಿ ನಿರ್ಮಲಾ ಅವಟಿ ಸಾಂದರ್ಭಿಕವಾಗಿ ಮಾತನಾಡಿದರು.
ಜಿಲ್ಲಾ ವಾರ್ಡ್ ಸಮಿತಿ ಬಳಗ ಸಂಚಾಲಕ ನ್ಯಾಯವಾದಿ ದಾನೇಶ ಅವಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಕಾಳಶೆಟ್ಟಿ, ಮಹಾಂತೇಶ ಮಠಪತಿ, ಶರಣಬಸು ಕೋನಳ್ಳಿ, ಬಾವಾಸಾಹೇಬ ಹತ್ತರಕಿಹಾಳ, ಮಶಾಕ ಕರ್ಜಗಿ, ದಸ್ತಗೀರ ಉಕ್ಕಲಿ, ಮುತ್ತು ಭೋವಿ, ಪಂಡಿತ ಖಂಡಗಾಳೆ, ಅಶೋಕ ಭಜಂತ್ರಿ, ಡಿ.ಎಲ್.ದೇಸಾಯಿ, ಎಂ.ಬಿ.ಬೊನ್ನಾಪುರ, ಮಾಳಪ್ಪ ಹಾಲಕ್ಕನವರ (ಪೂಜಾರಿ), ಶಿವಕುಮಾರ ಪೂಜಾರಿ, ಡಾ. ಬಸವರಾಜ ಜಂಬಗಿ, ಡಾ. ಎಂ.ಬಿ. ಗುರಿಕಾರ, ರಜಿಯಾಬೇಗಂ ಮೋಮಿನ, ಜಗದೇಶ ಸೂರ್ಯವಂಶಿ ಸೇರಿದಂತೆ ನೂರಾರು ಜನ ವಿವಿಧ ವಾರ್ಡ್‌ಗಳ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನ್ಯಾಯವಾದಿ ಆನಂದ ಜೋಷಿ ಪ್ರಾರ್ಥಿಸಿದರು. ಪ್ರೇರಣಾ ಅವಟಿ, ಯಾಸ್ಮಿನ ಪಠಾಣ ಸ್ವಾಗತ ಗೀತೆ ಹಾಡಿದರು. ಶೀತಲ ಹೂಲಿ ನಿರೂಪಿಸಿದರು. ವಿಜಯಕುಮಾರ್ ಕಲ್ಲೂರ್ ವಂದಿಸಿದರು.

LEAVE A REPLY

Please enter your comment!
Please enter your name here