ದಾವಣಗೆರೆ, ಜ.14- ಪರಿಶ್ರಮ ಮತ್ತು ಕಾಯಕದ ಮೇಲೆ ದೃಢವಾದ ನಂಬಿಕೆ ನನ್ನದು. ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘರ್ಷ, ಹೋರಾಟ ನನ್ನ ಧ್ಯೇಯ ಎಂದು ಇನ್ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕರೂ, ನಿರ್ದೇಶಕರಾದ ಜಿ.ಬಿ.ವಿನಯ್ ಕುಮಾರ್ ಕಕ್ಕರಗೊಳ್ಳ ಹೇಳಿದರು. ಚನ್ನಗಿರಿ ತಾಲೂಕಿನ ದೇವರಹಳ್ಳಿ, ಕಾಕನೂರು, ಸಂತೇಬೆನ್ನೂರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ನಂತರ ಸಂತೇಬೆನ್ನೂರು ಬಸ್ ನಿಲ್ದಾಣದಲ್ಲಿ ವಿನಯ್ ಕುಮಾರ್ ಅಭಿಮಾನಿ ಬಳಗದಿಂದ ಆಯೋಜನೆಗೊಂಡಿದ್ದ ಇನ್ಸೈಟ್ಸ್ ಸಂಸ್ಥೆಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸುತ್ತೇನೆಯೇ ಹೊರತು ಪಕ್ಷೇತರರಾಗಿ ಸ್ಪರ್ದಿಸುವುದಿಲ್ಲ, ಇದು ನನ್ನ ದೃಢ ನಿಲುವು ಎಂದರು.
ಶ್ರಮ ಮತ್ತು ಕಾಯಕದ ಮೇಲೆ ನನಗೆ ಬಲವಾದ ನಂಬಿಕೆ ಇದೆ, ಪ್ರತಿಫಲ ದೇವರಿಗೆ ಬಿಟ್ಟಿದ್ದು, ಜಿಲ್ಲೆಯಲ್ಲಿ ಪಾದಯಾತ್ರೆ ಸಮಯದಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣದ ಸ್ಥಿತಿಗತಿ, ನೀರು ನಿರ್ವಹಣೆ, ಬಡತನ, ನಿರುದ್ಯೋಗ, ರೈತರ ದೈನಂದಿನ ಸಮಸ್ಯೆಗಳನ್ನು ಅರಿತಿದ್ದೇನೆ ಮತ್ತು ಈ ಸಮಸ್ಯೆಗಳ ಪರಿಹಾರದ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದರು. ಬರಗಾಲದಿಂದ ತತ್ತರಿಸಿರುವ ರೈತರು ಮತ್ತು ಜನರ ಸ್ಥಿತಿ-ಗತಿಗಳು ನೋಡಿದ್ದೇನೆ, ಇಂದು ಜನರು ದೇವರ ಮೊರೆಹೊಗುತ್ತಿರುವುದು ಕಾಣುತ್ತಿದೆ, ಹಾಲಿ ಸಂಸದರು ಬರಗಾಲ ಪರಿಸ್ಥಿತಿಯಲ್ಲಿಯು ಜನರ ಬಳಿ ಬಂದಿಲ್ಲ, ಜನರ ಸಮಸ್ಯೆ ಆಲಿಸಿಲ್ಲ ಎಂಬ ಮಾತು ಸಾರ್ವಜನಿಕ ವಾಗಿ ಕೇಳಿ ಬರುತ್ತಿದೆ. ಚುನಾವಣೆ ಬಂದಾಗ ಮಾತ್ರ ಪ್ರಜಾಪ್ರಭುತ್ವ, ಚುನಾವಣೆ ಮುಗಿದಾಗ ಜನರ ಸಮಸ್ಯೆಗಳಿಗೆ ಪ್ರಜಾಪ್ರಭುತ್ವ ಇರುವುದಿಲ್ಲ, ದುಡ್ಡಿನ ಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೈಯಲ್ಲಿ ಹಿಡಿಯಲು ಹಂಬಲಿಸುತ್ತಿದ್ದಾರೆ, ಇದಕ್ಕೆ ಜನರು ಪ್ರಜ್ಞಾವಂತರಾಗ ಬೇಕು ಎಂದು ಹಿತ ನುಡಿದರು. ಶಿಕ್ಷಣ ಮೊದಲ ಅದ್ಯತೆ ನನ್ನದಾಗಿದೆ, ಕುಡಿಯಲು ನೀರು, ರೈತರಿಗೆ ನಿರಾವರಿ, ಯುವಕರಿಗೆ ಉದ್ಯೋಗಕ್ಕೆ ಅದ್ಯತೆ ನೀಡುತ್ತೇನೆ, ನಿಮ್ಮ ನಿರೀಕ್ಷೆಗಳನ್ನು ಈಡೇರಿಸಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು. ನಮ್ಮ ಇನ್‌ಸೈಟ್ ತರಬೇತಿ ಸಂಸ್ಥೆಗೆ 10 ವರ್ಷ ತುಂಬಿರುವುದು 450 ಜನರ ಶ್ರಮದಿಂದ ಸಾರ್ಥಕ ಯಶಸ್ಸನ್ನು ತಂದಿದೆ, ದೇಶದಲ್ಲಿಯೇ 3ನೇ ಸ್ಥಾನ ಹೊಂದಿದೆ, ಕಾಶ್ಮಿರದಲ್ಲಿ ಸ್ಥಾಪನೆಗೆ ನನ್ನ ಬಂಧು ಶರತ್ ಅವರ ಕೊಡುಗೆ ತುಂಬಾವಇದೆ ಎಂದು ಶ್ಲಾಘಿಸಿದರು.
ಗ್ರಾಮದ ಕಾಂಗ್ರೆಸ್ ಮುಖಂಡ ಎಂ.ಸಿದ್ದಪ್ಪ ಮಾತನಾಡಿ, ವಿನಯ್ ಕುಮಾರ್ ರವರು ಜಿಲ್ಲೆಯ ಜಗಳೂರು, ಹರಪನಹಳ್ಳಿ, ಹೊನ್ನಾಳಿ ತಾಲ್ಲೂಕುಗಳಲ್ಲಿ 540 ಕಿಮಿ ಪಾದಯಾತ್ರೆ ಮಾಡಿ ಜನರ ಸಮಸ್ಯೆ ಆಲಿಸಿ ಕಟ್ಟ ಕಡೆಯ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ, ಇವರ ಶೈಕ್ಷಣಿಕ ಸೇವೆ, ಅಪಾರ ಸಾಮಾಜಿಕ ಕಾಳಜಿ, ಭವಿಷ್ಯದ ಕನಸು ಮತ್ತು ಹೊರಾಟವನ್ನು ಗಮನಿಸಿ ಲೋಕಸಭೆ ಟೀಕೆಟ್‌ನ್ನು ಸಿಎಂ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಶಿವಕುಮಾರ್ ರವರು ಡಿ.ಕೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಒತ್ತಾಯಿಸಿದರು.
ಗ್ರಾಮದ ಉಮೇಶ್ ಮಾತನಾಡಿದರು. ಇನಸೈಟ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್. ಶರತ್ ಕುಮಾರ್, ಇರ್ಪಾನ್, ಗೌಡ್ರುಸ್ವಾಮಿ, ಶೇರ್‌ಅಲಿ, ವಿಜಯ್ ಗುಜ್ಜರ್, ಬಾಲು, ರಘು ದೊಡ್ಮನಿ, ಸದ್ದಾಂ, ವಿಜಯ್, ಗೌರೀಪುರ ನಾಗರಾಜ್, ನಯಾಜ್, ರುದ್ರೇಶ್ ಇದ್ದರು.
ಬಾಕ್ಸ್….. ನಾನು ರಾಜಕಾರಣದ ಮುನ್ನಲೆಗೆ ಬಂದ ಮೇಲೆ ಆಕಾಂಕ್ಷಿಗಳು ನಮ್ಮ ಪಕ್ಷದಲ್ಲಿ ಹೆಚ್ಚಾಗಿದ್ದಾರೆ, ನನಗೆ ಯಾವುದೇ ಅಡೆ-ತಡೆ ಬಂದಿಲ್ಲ, ನನಗೆ ಪಕ್ಷದ ಮುಖಂಡರು ಮತ್ತು ಜನರು ಸಹಕಾರ ನೀಡುತ್ತಿದ್ದಾರೆ, ಶಿಕ್ಷಣ ಮತ್ತು ಹೊರಾಟ ಎರಡು ನನಗೆ ಯಶಸ್ಸು ತಂದುಕೊಟ್ಟಿವೆ.