ಹಾವೇರಿ:ನ.01: ಕನ್ನಡ ಸಾಂಸ್ಕøತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆಯು ಮಹೋನ್ನತ ಕೊಡುಗೆ ನೀಡಿದೆ. ಕನ್ನಡ ನಾಡು ಹಾಗೂ ಭಾಷೆಗೆ ತನ್ನದೇ ಆದ ವಿಶಿಷ್ಟ ಇತಿಹಾಸಹೊಂದಿದೆ. ಕರ್ನಾಟಕದ ಸಾರ್ವಭೌಮ ಭಾಷೆಯಾದ ಕನ್ನಡ ಭಾಷೆಗೂ ಎರಡು ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ. ಭಾಷಾವಾರು ಪ್ರಾಂತ್ಯ ರಚನೆ ಆಧಾರದ ಮೇಲೆ 1956ರ ನವೆಂಬರ್ 1 ರಂದು ಕರ್ನಾಟಕ ರಾಜ್ಯ ಉದಯವಾಯಿತು. ಮೈಸೂರು ರಾಜ್ಯ ಎಂಬ ನಾಮಕರಣ ಬದಲಾಯಿಸಿ 1973ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು ಇದೀಗ 50 ವರ್ಷಗಳು ಪೂರ್ಣಗೊಂಡಿವೆ. ನಮ್ಮ ಸರ್ಕಾರ ಕರ್ನಾಟಕ-50ರ ಸಂಭ್ರಮವನ್ನು ವರ್ಷವಿಡಿ ವಿಶೇಷವಾಗಿ ಆಚರಿಸಲು ಕಾರ್ಯಕ್ರಮ ಯೋಜಿಸಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಎಂದು ಹೇಳಿದರು.
ನಗರದ ದಿ.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ಸಾಮಾಜಿಕ ಹರಿಕಾರರಾದ ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್‍ವರೆಗೆ ದೇಶಿ ಅಸ್ಮಿತೆಯೊಂದಿಗೆ ನಾಡಿನ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆ ಜೊತೆಗೆ ಎಳೆಯಲಾಗಿದೆ. ಈ ಪರಂಪರೆಯನ್ನು ಮುಂದುವರಿಸುತ್ತ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ನಾಡು-ನುಡಿಯ ಅಭಿವೃದ್ಧಿ ಜೊತೆಗೆ ಜನರ ಬದುಕಿನಲ್ಲಿ ಬದಲಾವಣೆ ತರಲು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದರು.
ಭಾಷಾವಾರು ಪ್ರಾಂತ ರಚನೆಯ ಆಧಾರದ ಮೇಲೆ 1956 ನವೆಂಬರ್ 1 ರಂದು ಕರ್ನಾಟಕ ರಾಜ್ಯ ಉದಯವಾಯಿತು. ದೇಶದ ಬೇರೆ ಬೇರೆ ರಾಜ್ಯ, ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು, ಏಕೀಕರಣಗೊಂಡು ಭಾಷಾವಾರು ಪ್ರಾಂತ ರಚನೆಯ ಆಧಾರದ ಮೇಲೆ ಕರ್ನಾಟಕ ರಾಜ್ಯ ಉದಯವಾಗಿ ಇಂದಿಗೆ 68 ವರ್ಷಗಳು ಪೂರ್ಣಗೊಂಡಿದೆ. ಮೊದಲು ‘ಮೈಸೂರು ರಾಜ್ಯ’ವೆಂದು ಕರೆಯಲಾದ ಕನ್ನಡನಾಡಿಗೆ 1973ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಡಿ.ದೇವರಾಜ ಅರಸು ಅವರ ವಿಶೇಷ ಕಾಳಜಿಯಿಂದ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲಾಯಿತು. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ ಇದೀಗ 50ರ ಸಂಭ್ರಮ. ಈ ಸಂಭ್ರಮಾಚರಣೆಯನ್ನು ನಮ್ಮ ಸರ್ಕಾರ ವರ್ಷವಿಡಿ ವಿಶೇಷ ಕಾರ್ಯಕ್ರಮಗಳ ಮೂಲಕ ಸ್ಮರಣೀಯವಾಗಿಸಲು ಮುಂದಾಗಿದೆ ಎಂದರು.
ಕನ್ನಡ ನಾಡು ಹಾಗೂ ಭಾಷೆಗೆ ತನ್ನದೇ ಆದ ವಿಶಿಷ್ಟ ಇತಿಹಾಸಹೊಂದಿದೆ. ಕರ್ನಾಟಕದ ಸಾರ್ವಭೌಮ ಭಾಷೆಯಾದ ಕನ್ನಡ ಭಾಷೆಗೂ ಎರಡು ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ. ಹಲವು ರಾಜ ವಂಶಗಳು ಕನ್ನಡ ನಾಡನ್ನು ಆಳಿವೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನಾಡಿಗಾಗಿ ಸ್ವಾಭಿಮಾನದ ಹೋರಾಟಗಳು ಕ್ರಿ.ಶ.1800 ರಿಂದಲೇ ಆರಂಭಗೊಂಡಿತ್ತು. ಬ್ರಿಟಿಷರ ಸಾಮ್ರಾಜ್ಯಶಾಹಿಯ ವಿರುದ್ಧ ಹಲಗಲಿ ಬೇಡರ ದಂಗೆಗಳು, ದೋಂಡಿಯ ವಾಘಾ, ಸಂಗೊಳ್ಳಿ ರಾಯಣ್ಣ, ನರಗುಂದದ ಭಾಸ್ಕರ್ ಭಾವೆ, ಸುರಪುರದ ವೆಂಕಟಪ್ಪನಾಯಕ, ಮುಂಡರಗಿ ಭೀಮರಾಯ, ಕಿತ್ತೂರ ರಾಣಿ ಚೆನ್ನಮ್ಮ ರಂತಹ ದೇಶಾಭಿಮಾನಿಗಳು ಹೋರಾಟ ನಡೆಸಿ ಕನ್ನಡ ನೆಲದ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಕರ್ನಾಟಕ ಏಕೀಕರಣದ ಹೋರಾಟಗಳು ಆರಂಭಗೊಂಡಿರುವುದು ಸ್ಮರಣೀಯ ಎಂದ ಅವರು, ಹಲವು ಐತಿಹಾಸಕ ಸಂದರ್ಭಗಳನ್ನು ಸ್ಮರಿಸಿಕೊಂಡರು.
ಕನ್ನಡನಾಡು ಅತ್ಯಂತ ಸುಂದರಮಯವಾದ ನಾಡು. ಕರ್ನಾಟಕವೆಂದರೆ ಕಪ್ಪು ಮಣ್ಣಿನ ನಾಡು. ಕನ್ನಡ ನುಡಿಯ ಸೊಬಗೂ ಮಧುರವಾದದು. ಆದಿಕವಿ ಪಂಪನಿಂದ ಕುವೆಂಪುವರೆಗೂ ಸಹಸ್ರಾರು ಕವಿ, ಸಾಹಿತಿ, ಚಿಂತಕರು ಕನ್ನಡ ನುಡಿ ತೋರಣ ಕಟ್ಟಿದ ಫಲವಾಗಿ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳ ಗೌರವ ಸಂದಿದೆ ಎಂದು ಎಲ್ಲ ಸಾಹಿತಿಗಳನ್ನು ಸ್ಮರಿಸಿಕೊಂಡರು.
ಕನ್ನಡ ಸಾಂಸ್ಕøತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆಯು ಮಹೋನ್ನತ ಕೊಡುಗೆ ನೀಡಿದೆ. ತ್ರಿಪದಿ ಕವಿ ಸರ್ವಜ್ಞ, ದಾಸಶ್ರೇಷ್ಠರಾದ ಕನಕದಾಸರು, ವಚನಕಾರರಾದ ಅಂಬಿಗರ ಚೌಡಯ್ಯ, ತತ್ವಪದಕಾರರಾದ ಶಿಶುನಾಳ ಷರೀಫರು, ಗಾನಯೋಗಿ ಪುಟ್ಟರಾಜ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ವಿ.ಕೃ.ಗೋಕಾಕ, ಕಾದಂಬರಿ ಪಿತಾಮಹ ಗಳಗನಾಥರು, ಆಧುನಿಕ ವಚನಕಾರರಾದ ಮಹಾದೇವ ಬಣಕಾರ, ನಾಟಕಕಾರರಾದ ಶಾಂತಕವಿ, ಅಂತರಾಷ್ಟ್ರೀಯ ಖ್ಯಾತ ಲೇಖಕರಾದ ಹಿರೇಮಲ್ಲೂರ ಈಶ್ವರ, ಪ್ರಗತಿಶೀಲ ಸಾಹಿತಿಗಳಾದ ಸುರಂ, ಯಕ್ಕುಂಡಿ, ಲಲಿತ ಪ್ರಬಂಧಕರಾದ ರಾಕು, ಕನ್ನಡ ಕಟ್ಟಾಳು ಪಾಟೀಲ ಪುಟ್ಟಪ್ಪ, ಖ್ಯಾತ ಕವಿ ಚಂದ್ರಶೇಖರ ಪಾಟೀಲ ರಂತಹ ಮಹಾ ಪುರುಷರು ಕನ್ನಡ ಭಾಷೆ, ಸಂಸ್ಕøತಿಯ ಶ್ರೀಮಂತಿಕೆಗೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಆಯ್ಕೆಯಾದ ಹಾವೇರಿಯ ಸತೀಶ ಕುಲಕರ್ಣಿ ಹಾಗೂ ಜಿಲ್ಲಾಡಳಿತ ಸನ್ಮಾನಿಸುತ್ತಿರುವ ಜಿಲ್ಲೆಯ ವಿವಿಧ ಕ್ಷೇತ್ರದ 11 ಸಾಧಕರನ್ನು ಅಭಿನಂದಿಸಿದರು.
ಬರ ನಿರ್ವಹಣೆಗೆ ಆದ್ಯತೆ: ಪ್ರಾಕೃತಿಕ ವಿಕೋಪ ನಮ್ಮನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಬರಗಾಲ ಎದುರಾಗಿದೆ. ಜಿಲ್ಲೆಯ 8 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿಸಲಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಕೊಳ್ಳಲಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಸಂದರ್ಭ ಎದುರಾದರೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಿದ್ಧತೆಗಳನ್ನು ಕೈಗೊಂಡಿದೆ. ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಈಗಾಗಲೇ ತಾಲೂಕಾವಾರು ಸಿದ್ಧತೆಗಳನ್ನು ಕೈಗೊಂಡಿದೆ. ಬೆಳೆಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪರಿಹಾರದ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು.
ಅಕ್ಟೋಬರ್ 2023ನೇ ಮಾಹೆಯಲ್ಲಿ 2022-23ನೇ ಸಾಳಿನ ಹಿಂಗಾರು ಹಂಗಾಮಿನ ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ 22,493 ರೈತರಿಗೆ ರೂ.71.06 ಕೋಟಿ ಬಿಡುಗಡೆಯಾಗಿ ಅರ್ಹ ರೈತರ ಖಾತೆಗೆ ಜಮೆ ಮಾಡಲಾಗಿದೆ. ಬೇಸಿಗೆ ಹಂಗಾಮಿನಲ್ಲಿ 2,793 ರೈತರಿಗೆ ರೂ.9.98 ಕೋಟಿ ಪರಿಹಾರ ಬಿಡುಗಡೆಯಾಗಿ ಜಮೆಯಾಗಿದೆ. ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿ ಅಡಿಕೆ ಬೆಳೆಗೆ 4,414 ರೈತರಿಗೆ 9.08 ಕೋಟಿ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದೆ. ಒಟ್ಟು ಜಿಲ್ಲೆಗೆ ರೂ.90.12 ಕೋಟಿ ಪರಿಹಾರ ಮೊತ್ತ ಅಕ್ಟೋಬರ್ ತಿಂಗಳಲ್ಲಿ ಜಮೆಯಾಗಿದೆ ಎಂದು ಹೇಳಿದರು.
2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ 4,44,108 ರೈತರಿಗೆ ರೂ.126.89 ಕೋಟಿ ಮಧ್ಯಂತರ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಸದ್ಯದಲ್ಲೇ ಪರಿಹಾರ ವಿತರಣೆ ಮಾಡಲಾಗುವುದು ಎಂದರು.
ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ 2,64,477 ಹೆಕ್ಟೇರ್ ಬೆಳೆಹಾನಿಯಾಗಿದೆ. ರೂ.247.58 ಕೋಟಿ ಬೆಳೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನ ಇಲ್ಲಿವರೆಗೆ ರೂ.126 ಕೋಟಿ ವೆಚ್ಚ ಮಾಡಿ. 31 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಬರದ ಸಂದರ್ಭದಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಿ ಗುಳೆ ಹೋಗದಂತೆ ಸ್ಥಳೀಯವಾಗಿ ಜನರಿಗೆ ಕೆಲಸ ನೀಡಲು ಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 6.53 ಲಕ್ಷ ಟನ್ ಮೇವು ದಾಸ್ತಾನಿದ್ದು, ಮುಂದಿನ 40 ವಾರಗಳವರೆಗೆ ಜಿಲ್ಲೆಯಲ್ಲಿ ಯಾವುದೇ ಮೇವಿನ ಕೊರತೆ ಇರುವುದಿಲ್ಲ. ನೀರಾವರಿ ಸೌಕರ್ಯವಿರುವ ರೈತರಿಗೆ ಮೇವಿನ ಬೀಜದ ಕಿಟ್‍ಗಳನ್ನು ವಿತರಿಸಿ ಹಸಿರು ಮೇವು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.
ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗಳ ತ್ವರಿತ ಸ್ಪಂದನೆಗೆ ನೂರು ದಿನಗಳ ಅಭಿಯಾನ ಹಮ್ಮಿಕೊಂಡು ಅಂಗನವಾಡಿ, ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾರ್ಯಕೈಗೊಳ್ಳಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಎಸ್.ಡಿ.ಪಿ. ಹಾಗೂ ಎನ್.ಆರ್.ಬಿ.ಡಬ್ಲ್ಯೂ.ಪಿ. ಯೋಜನೆಯಡಿ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬರಗಾಲದ ಸಂದರ್ಭದಲ್ಲಿ ಸರ್ಕಾರ ನಾಲ್ಕು ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣದ ಶಕ್ತಿಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 2.10 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. “ಅನ್ನಭಾಗ್ಯ” ಯೋಜನೆಯಡಿ ಜಿಲ್ಲೆಯಲ್ಲಿ 46,913 ಅಂತ್ಯೋದಯ ಹಾಗೂ 3,45,670 ಬಿಪಿಎಲ್ ಪಡಿತರ ಕುಟುಂಬದ ಪ್ರತಿ ಸದಸ್ಯರಿಗೆ ತಲಾ ಐದು ಕೆಜಿಯಂತೆ 49.41 ಲಕ್ಷ ಕ್ವಿಂಟಲ್ ಅಕ್ಕಿ ವಿತರಿಸಲಾಗಿದೆ. ಉಳಿದ ಐದು ಕೆ.ಜಿ. ಅಕ್ಕಿ ಬದಲು ಪ್ರತಿ ಕೆ.ಜಿ.ಗೆ 34 ರೂ.ನಂತೆ ಈವರೆಗೆ ರೂ.56.01 ಕೋಟಿ ನೆರನಗದು ಮೂಲಕ ಸಂದಾಯ ಮಾಡಲಾಗಿದೆ ಹಾಗೂ “ಗೃಹಜ್ಯೋತಿ” ಯೋಜನೆಯಡಿ ಜಿಲ್ಲೆಯ 3.54 ಲಕ್ಷ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಈ ಕುಟುಂಬಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 1.24 ಲಕ್ಷ ಮಕ್ಕಳು, 14 ಸಾವಿರ ಗರ್ಭಿಣಿಯರು ಹಾಗೂ 13 ಸಾವಿರ ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆಗೆ ಈವರೆಗೆ ರೂ.16 ಲಕ್ಷ ವೆಚ್ಚ ಮಾಡಲಾಗಿದೆ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ 59 ಸಾವಿರ ಫಲಾನುಭವಿಗಳ ಖಾತೆಗೆ ರೂ.2.5 ಕೋಟಿ ಸಹಾಯಧನ ಜಮೆ ಮಾಡಲಾಗಿದೆ ಎಂದರು.
ಶೀಘ್ರ ಲೋಕಾರ್ಪಣೆ: ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹಾವೇರಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಶೇ.85ರಷ್ಟು ಭೌತಿಕ ಹಾಗೂ ಶೇ.73ರಷ್ಟು(ರೂ.281.42 ಕೋಟಿ) ಆರ್ಥಿಕ ಪ್ರಗತಿ ಸಾಧಿಸಿದೆ. ನೂತನ ವೈದ್ಯಕೀಯ ಕಾಲೇಜ್ ಕಟ್ಟಡದಲ್ಲಿ ಮೊದಲನೇ ಮತ್ತು ಎರಡನೇ ವರ್ಷದ ತರಗತಿಗಳನ್ನು ಆರಂಭಿಸಲು ಅಗತ್ಯವಿರುವ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯಾರ್ಥಿನಿಲಯ ಇದೇ ನವೆಂಬರ್ 10ಕ್ಕೆ ಪೂರ್ಣಗೊಳ್ಳಲಿದೆ. ಹೊಸ ಕಟ್ಟಡದಲ್ಲಿ ತರಗತಿಗಳನ್ನು ಆರಂಭಿಸಲಾಗುವುದು. ಪರಿಶೀಲಿಸಿ ಶೀಘ್ರವೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ನಮ್ಮ ಸರ್ಕಾರವು ರಾಜ್ಯದಲ್ಲಿ ಶೇ.80ರಷ್ಟು ಸಣ್ಣ ಪ್ರಮಾಣದ ನೇಕಾರರ ಅನುಕೂಲಕ್ಕಾಗಿ 10 ಎಚ್.ಪಿ.ವರೆಗಿನ ವಿದ್ಯುತ್ ಸಂಪರ್ಕ ಹೊಂದಿದ ಕೈಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ಸಂಪೂರ್ಣ ವಿದ್ಯುತ್ ಬಿಲ್ ಉಚಿತಗೊಳಿಸಿದೆ. ಈ ಬಿಲ್ಲಿನ ಮೊತ್ತವನ್ನು ಸರ್ಕಾರವೇ ಭರಿಸುವುದು ಹಾಗೂ ನೇಕಾರರಿಗೆ ಶೂನ್ಯ ಬಿಲ್ ನೀಡುವ ಬಗ್ಗೆ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ ಎಂದರು.
ತುಂಗಾ ಮೇಲ್ದಂಡೆ ಯೋಜನೆಯಡಿ ಎರಡು ಏತ ನೀರಾವರಿ, ಒಂಭತ್ತು ಕೆರೆ ತುಂಬಿಸುವ ಯೋಜನೆಗಳಿಂದ ಜಿಲ್ಲೆಯ 205 ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿದೆ. ಪ್ರಸ್ತುತ ಬರಗಾಲದ ಸಂದರ್ಭದಲ್ಲಿ ಜುಲೈ ತಿಂಗಳಿನಿಂದ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿಸಿದ್ದರಿಂದ ಈ ಪ್ರದೇಶ ವ್ಯಾಪ್ತಿಯ ಎಲ್ಲ ಚೆಕ್‍ಡ್ಯಾಂಗಳಿಗೆ ನೀರು ಪೂರೈಕೆಯಾಗುತ್ತಿದೆ. ಅಂತರ್ಜಲ ಏರಿಕೆಯಾಗಿದೆ. ಕೊಳವೆಬಾವಿಗಳು ಮರುಪೂರಣಗೊಂಡಿವೆ. ಇದರಿಂದ ಬರಗಾಲದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರು, ಜಮೀನುಗಳಿಗೆ ನೀರಿನ ಕೊರತೆ ನೀಗಿದೆ ಎಂದರು.
ಸಮೂಹ ಗಾಯನ: ಕರ್ನಾಟಕ 50ರ ಸಂಭ್ರಮದ ಅಂಗವಾಗಿ ನಾಡಿನ ಪ್ರಖ್ಯಾತ ಕವಿಗಳು ರಚಿತ ಐದು ಕನ್ನಡ ಸಂಸ್ಕøತಿ, ನುಡಿ-ನಾಡಿನ ಬಣ್ಣನೆಯ ಐದು ಗೀತೆಗಳನ್ನು ಸಂಗೀತ ತಂಡಗಳೊಂದಿಗೆ 50 ವಿದ್ಯಾರ್ಥಿಗಳು ಹಾಡಿದರು. ಇದೇ ಸಂದರ್ಭದಲ್ಲಿ ಕನ್ನಡ ಗೀತೆಗಳಿಗೆ ಆಕರ್ಷಕ ನೃತ್ಯವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಶಿಸ್ತುಬದ್ಧ ಪಥಸಂಚಲನ: ಸಶಸ್ತ್ರ ಮೀಸಲು ಪಡೆ, ಅರಣ್ಯ ರಕ್ಷಕ ಪಡೆ, ಗೃಹ ರಕ್ಷಕದಳ, ಅಬಕಾರಿ ಇಲಾಖೆ ಪಡೆ, ನಾಗರೀಕರ ರಕ್ಷಣಾ ಪಡೆ, ಎನ್.ಸಿ.ಸಿ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಒಳಗೊಂಡಂತೆ 14 ತಂಡಗಳಿಂದ ಶಿಸ್ತುಬದ್ಧ ಪಥಸಂಚಲನ ಜರಗಿತು.
ಸಮವಸ್ತ್ರ: ಪಾರಂಪರಿಕ ಸೊಬಗಿನ ಬಿಳಿ ಕಚ್ಚೆಪಂಚೆ, ಬಿಳಿ ಜುಬ್ಬಾ ಧರಿಸಿದ ಅಧಿಕಾರಿಗಳು ಕನ್ನಡ ನಾಡ ಹಬ್ಬದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ವಿಧಾನಸಭಾ ಉಪಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಇತರ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.