ಬೆಂಗಳೂರು:ಸಮಾನ ಕೂಲಿ, ಆರೋಗ್ಯ, ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆಗಾಗಿ ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರಥಮ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶವು ದಿನಾಂಕ 10 ಸೆಪ್ಟೆಂಬರ್ 2023, ಭಾನುವಾರದಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಲಿದೆ.

ಸಿಐಟಿಯು ಸಂಯೋಜಿತ ‘ಕರ್ನಾಟಕ ರಾಜ್ಯ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ.) ಈ ಸಮಾವೇಶವನ್ನು ಸಂಘಟಿಸಿದೆ.

ದೇಶದ ಜಿಡಿಪಿಯಲ್ಲಿ 7 ಪಾಲು ನೀಡುತ್ತಿರುವ ನಿರ್ಮಾಣ ವಲಯದಲ್ಲಿ, ಅತ್ಯಂತ ಶ್ರಮದಾಯಕ ಮತ್ತು ಅಪಾಯಕಾರಿಯಾದ ಕೆಲಸಗಳಲ್ಲಿ ಪ್ರಾಣವನ್ನು ಪಣಕ್ಕಿಟ್ಟು, ಆರೋಗ್ಯವನ್ನು ಲೆಕ್ಕಿಸದೇ ಕಾರ್ಮಿಕರು ದುಡಿಯುತ್ತಿದ್ದಾರೆ. ನಿರ್ಮಾಣ ವಲಯದಲ್ಲಿ ಮಹಿಳೆಯರ ಪಾತ್ರವೂ ಹೆಚ್ಚುತ್ತಿದೆ. ಆದರೆ ಲಿಂಗ ತಾರತಮ್ಯದಿಂದಾಗಿ ಕೇವಲ ಸಹಾಯಕ ಕೆಲಸಗಳಿಗೆ ಮಾತ್ರವೇ ಸೀಮಿತಗೊಳಿಸಲಾಗಿದೆ. ಕೂಲಿ ನೀಡಿಕೆಯಲ್ಲಿ ಅಸಮಾತೋಲನವಿದೆ. ಪುರುಷರಷ್ಟೆ ದುಡಿದರೂ ಕೂಲಿಯಲ್ಲಿ ತಾರತಮ್ಯ ಮುಂದುವರಿದೆ, ಹತ್ತಾರು ವರ್ಷ ದುಡಿದರೂ ಹೆಲ್ಲ‌ ಕೆಲಸಕ್ಕೆ ಮಾತ್ರವೇ ಕಟ್ಟಿಹಾಕಿ, ಕೌಶಲ್ಯಯುತ ಕೆಲಸಗಳಿಂದ ದೂರ ಇಡಲಾಗಿದೆ. ಇದಕ್ಕೆ ಸಬಲರಲ್ಲ’ ಎಂಬ ಸಮರ್ಥನೆ ನೀಡಲಾಗುತ್ತದೆ. ಹೀಗಾಗಿ ಕೂಲಿ ಸಾಲಿನಲ್ಲಿ ಪುರುಷ ಕಾರ್ಮಿಕರಿಗಿಂದ ಮಹಿಳಾ ಕಾರ್ಮಿಕರು 40% ಕಡಿಮೆ ಕೂಲಿ ಪಡೆಯುತ್ತಾರೆ ಎಂದು ಕೆಲ ಅಧ್ಯಯನಗಳು ಹೇಳುತ್ತವೆ.

ನಿರ್ಮಾಣ ವಲಯದ ಮಹಿಳಾ ಕಾರ್ಮಿಕರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬೆನ್ನು ನೋವು, ತಲೆ ನೋವು, ಸಿಮೆಂಟ್ ಧೂಳಿನ ಕಾರಣಕ್ಕಾಗಿ ಚರ್ಮ ಸಂಬಂಧಿತ ಮತ್ತು ಶ್ವಾಸಕೋಶದ ಸಮಸ್ಯೆಗಳು, ಮಂಡಿ ನೋವು, ಗರ್ಭಕೋಶದ ತೊಂದರೆಗಳು ಹಾಗೂ ಮುಟ್ಟಿನ ಸಂದರ್ಭದಲ್ಲಿ ಸ್ವಚ್ಛತೆಯಿಂದ ಇರಲು ಸಾಧ್ಯವಾಗದೇ ಬರುವ ಇತ್ಯಾದಿ ಸಮಸ್ಯೆಗಳು ಮಹಿಳಾ ಕಟ್ಟಡ ಕಾರ್ಮಿಕರನ್ನು ಕಾಡುತ್ತಿವೆ. ಜತೆಗೆ 67% ಮಹಿಳಾ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಆಗುವ ಅಪಘಾತಗಳಿಂದಾಗಿ ಶಾಶ್ವತವಾಗಿ ದುಡಿಮೆಯನ್ನು ತೊರೆಯುತ್ತಿದ್ದಾರೆ.

ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಶೌಚಾಲಯಗಳಿಲ್ಲದೇ, ಶೌಚಕ್ಕಾಗಿ ಮಹಿಳೆಯರು ಮೈಲಿಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಈಗಲೂ ಇರುವುದು ವಾಸ್ತವ, ಶೌಚಾಲಯ, ಸ್ವಚ್ಛ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕಾರ್ಮಿಕರಿಗೆ ಸುರಕ್ಷಾ ಪರಿಕರ ಒದಗಿಸುವುದು, ಒಳ್ಳೆಯ ಗಾಳಿ ಬೆಳಕು ಇರಬೇಕು ಎಂದು ಕಾನೂನಿನಲ್ಲಿ ಬರೆಯಲಾಗಿದೆ. ಆದರೆ ಜಾರಿಯಾಗುತ್ತಿಲ್ಲ. ಜಾರಿ ಮಾಡಬೇಕಾದ ಕಾರ್ಮಿಕ ಇಲಾಖೆ, ಬಡ ಕಾರ್ಮಿಕರತ್ತ ತಿರುಗಿಯೂ ನೋಡುತ್ತಿಲ್ಲ. ಸಂಸಾರದ ನೊಗ ಹೊತ್ತ ಮಹಿಳೆ, ಮಕ್ಕಳ ಪೋಷಣೆಯೂ ಇವಳ ಹೆಗಲಿದೆ. ಅಸು ಮಕ್ಕಳನ್ನು ಕೆಲಸದ ಸ್ಥಳದಲ್ಲೇ ಸೀರೆಯಲ್ಲಿ ತೊಟ್ಟಿಲು ಮಾಡಿ ಮಲಗಿಸಿ, ದುಡಿಮೆ ಮಾಡಬೇಕು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಲ್ಲೂ ಮಕ್ಕಳ ಆರೈಕೆ ಕೇಂದ್ರಗಳಿಲ್ಲ!

ಭಾರತದಲ್ಲಿ ನಿರ್ಮಾಣ ವಲಯದಲ್ಲಿ ಕೆಲಸ ಮಹಿಳೆಯರ ಸಂಖ್ಯೆ 12 ಮಾತ್ರ ಇದೆ, ಕಳೆದ ಎರಡು ದಶಕಗಳಿಂದ ಕೃಷಿಕ್ಷೇತ್ರದಲ್ಲಿ ಉಂಟಾಗಿರುವ ತೀವ್ರ ಬಿಕ್ಕಟ್ಟಿನ ಪರಿಣಾಮ ಗ್ರಾಮೀಣ ಪ್ರದೇಶದ ಮಹಿಳೆಯರು ನಿರ್ಮಾಣ ವಲಯಕ್ಕೆ ‘ಅಕುಶಲ’ ಕಾರ್ಮಿಕರಾಗಿ ಅಧಿಕ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಎನ್.ಎಸ್.ಎಸ್.ಓ 2018-19 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 106,048 ಜನ ಮಹಿಳಾ ಕಾರ್ಮಿಕರು ಈ ಕ್ಷೇತ್ರದಲ್ಲಿ ತೊಡಗಿದ್ದಾರೆಂದು ಹೇಳಲಾಗಿದೆ. ಇದರಲ್ಲಿ ಪುರುಷ ಕಾರ್ಮಿಕರ ಸಂಖ್ಯೆ 16,80,939 ಇದೆ. ಈ ಅಂತರಕ್ಕೆ ಲಿಂಗ ತಾರತಮ್ಯವೇ ಕಾರಣ. ಕಠಿಣ & ಭಾರ ಎತ್ತುವ ಕೆಲಸಗಳನ್ನು ಮಹಿಳೆಯರು ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿ ಒಂದೆಡೆಯಾದರೆ, ಮಹಿಳಾ ಕೆಲಸಗಾರರಿಗೆ ಹೆರಿಗೆ, ಮುಟ್ಟಿನ ಸಂದರ್ಭಗಳಲ್ಲಿ ರಜೆ ನೀಡಬೇಕಾಗುತ್ತದೆ ಮತ್ತು ವಿಶೇಷ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮಹಿಳೆಯರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಮಹಿಳೆಯರ ತೊಡಗುವಿಕೆ ಕಡಿಮೆ ಇದೆ. ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಮಹಿಳೆಯರು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಹಾಗೂ ದಲಿತ ಮತ್ತು ಅಲ್ಪಸಂಖ್ಯಾತ ವಿಭಾಗಕ್ಕೆ ಸೇರಿದ ಭೂಮಿ ಹಾಗೂ ವಸತಿಹೀನರೇ ಆಗಿದ್ದಾರೆ.

ಮಹಿಳಾ ಕಟ್ಟಡ ಕಾರ್ಮಿಕರನ್ನು ಬಾಧಿಸುವ ಮೇಲ್ಕಂಡ ಎಲ್ಲ ವಿಚಾರಗಳು ಮತ್ತು ಇದಕ್ಕೆ ಪರಿಹಾರ ಹೇಗೆ? ಎಂಬುದನ್ನು ಚರ್ಚಿಸುವುದು ಹಾಗೂ ಮಹಿಳಾ ಕಾರ್ಮಿಕರನ್ನು ಸಂಘಟಿಸಿ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸುವುದು, ಜತೆಗೆ ಈಗಾಗಲೇ ಕಲ್ಯಾಣ ಮಂಡಳಿಯಲ್ಲಿ ರೂಪಿಸಿರುವ ಮಹಿಳಾ ಸಂಬಂಧಿ ಸೌಲಭ್ಯಗಳನ್ನು ಅವರಿಗೆ ತಲುಪುವಂತೆ ಮಾಡುವುದು ಹಾಗೂ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಪಟ್ಟ ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆ ಪಟ್ಟಿ ಸಿದ್ಧಪಡಿಸಿ ಹೋರಾಟಗಳನ್ನು ರೂಪಿಸಬೇಕಿದೆ, ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರಥಮ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಕಟ್ಟಡ ಮತ್ತು ಇತರರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ ಡಿ. ಐಎಎಸ್‌ ಸಮಾವೇಶವನ್ನು ಉದ್ಘಾಟಿಸುವರು. ನಾಡಿನ ಹೆಸರಾಂತ ವಿಮರ್ಶಕರಾದ ಡಾ.ಎಂ.ಎಸ್.ಆಶಾದೇವಿ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 300 ಜನ ಆಯ್ದ ಮಹಿಳಾ ಪ್ರತಿನಿಧಿಗಳು ಭಾಗವಹಿಸುವರು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿಗಳಾದ ಡಾ.ಜಿ.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ರಾಜ್ಯ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌(ರಿ.) ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಇವರು ಅಧ್ಯಕ್ಷತೆ ವಹಿಸುವರು ಎಂದು ರಾಜ್ಯ ಪ್ರದಾನ ಕಾರ್ಯದರ್ಶಿ ಕೆ.ಮಹಾಂತೇಶ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here