ಕೊಲ್ಹಾರ 13: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಾರಂಭವಾಗಿ ನದಿಗೆ ನೀರು ಹರಿದು ಬರುತ್ತಿದ್ದು, ಕೂಡಲೇ ಮುಳವಾಡ ಏತ ನೀರಾವರಿಯ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ ನೀರು ಹರಿಸಬೇಕೆಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಟಿ ಟಿ ಹಗೇದಾಳ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ತೀರದ ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯ ಜಮಖಂಡಿ ಭಾಗದ ಕಾಲುವೆಗಳಿಗೆ ನೀರು ಹರಿಸಲಾಗಿದೆ. ಅದೇ ರೀತಿ ನಮ್ಮ ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಿ ರೈತರ ಬಿತ್ತನೆಗೆ ಅನುವು ಮಾಡಿಕೊಡಬೇಕೆಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಎಮ್ ಬಿ ಪಾಟೀಲ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲರಿಗೆ ಆಗ್ರಹಿಸಿದ್ದಾರೆ.
ಈ ಬಾರಿ ಮುಂಗಾರು ಮಳೆಗಳು ಸಂಪೂರ್ಣ ಕೈ ಕೊಟ್ಟಿವೆ. ಪ್ರತಿ ವರ್ಷ ಮುಂಗಾರು ಮಳೆಯಾದ ನಂತರ ಸಜ್ಜಿ, ತೊಗರಿ, ಗೋವಿನಜೋಳ ಹಾಗೂ ಈರುಳ್ಳಿ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿತ್ತು . ಆದರೆ ಈ ಬಾರಿ ಮಳೆ ಇವತ್ತಿನವರೆಗೂ ಆಗದೆ ಕೈ ಕೊಟ್ಟಿದ್ದರಿಂದ ಬರಗಾಲ ಛಾಯೆ ಆವರಿಸಿದೆ. ಆದರೆ ಈ ಭಾಗದ ರೈತರು ಹೊಳೆ (ನದಿ )ಬರುವುದಕ್ಕಾಗಿ ಕಾಯುತಿದ್ದರು. ಈ ಸದ್ಯ ಸ್ವಲ್ಪ ಮಟ್ಟಿಗೆ ಕೃಷ್ಣಾ ನದಿಗೆ ನೀರು ಹರಿದು ಬಂದಿದೆ ಹೀಗಾಗಿ ರೈತರಲ್ಲಿ ಒಂದು ಮಂದಹಾಸ ಮೂಡಿದೆ ಎಂದರು.
ಅದೇ ರೀತಿಯಾಗಿ ಕಳೆದ 2022-23ನೇ ಸಾಲಿನಲ್ಲಿ ರೈತರು ಕಳಿಸಿದ ಕಬ್ಬಿನ ಬಿಲ್ಲು ಬಾಕಿ ಉಳಿದಿದೆ ಇದರಿಂದ ರೈತರು ಬಿತ್ತನೆಗೆ ಬೇಕಾಗುವ ಬೀಜ, ಗೊಬ್ಬರ ಖರೀದಿಗೆ ಬಹಳಷ್ಟು ತೊಂದರೆಯಾಗಿದೆ ಆದ್ದರಿಂದ ನಮ್ಮ ಭಾಗದ ಶಾಸಕರು ಹಾಗೂ ಸಕ್ಕರೆ ಹಾಗೂ ಸಕ್ಕರೆ ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲರು ಮುತುವರ್ಜಿ ವಹಿಸಿ ಸರ್ಕಾರದಿಂದ ಕೂಡಲೇ ರೈತರ ಕಬ್ಬಿನ ಬಾಕಿ ಬಿಲ್ಲನ್ನು ಮಂಜೂರು ಮಾಡಸಬೇಕು ಎಂದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರೊಂದಿಗೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಹಣಮಂತ ಬಾಟಿ, ನಂದಪ್ಪ ಗಿಡ್ಡಪ್ಪಗೋಳ, ಶಿವಪ್ಪ ಗಿಡ್ಡಪ್ಪಗೋಳ, ಪುಂಡಲೀಕ ತುಂಬರಮಟ್ಟಿ, ಕಲ್ಲಪ್ಪ ಬಾಟಿ ಸೇರಿದಂತೆ ಅನೇಕರು ಇದ್ದರು.