ದಿನೇಶ್ ಅಮಿನ್‌ಮಟ್ಟು ಅವರಿಗೆ ಬಿ.ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಬಂದಿರುವುದು ಸಂತಸದ ಸುದ್ದಿ. ಸಾಮಾನ್ಯವಾಗಿ ಪ್ರಶಸ್ತಿಗಳು ಬಂದಾಗ ವ್ಯಕ್ತಿಗಳ ಘನತೆ ಹೆಚ್ಚಾಗುತ್ತದೆ. ಆದರೆ ಒಮ್ಮೊಮ್ಮೆ, ಅರ್ಹ ಮತ್ತು ತೂಕದ ವ್ಯಕ್ತಿಗಳನ್ನು ಆಯ್ಕೆ ಮಾಡಿದಾಗ ಆ ಪ್ರಶಸ್ತಿಯ ತೂಕವೇ ಹೆಚ್ಚಾಗುತ್ತದೆ. ಅಂತಹ ಆಯ್ಕೆ ದಿನೇಶ್ ಅಮೀನ್‌ಮಟ್ಟು ಅವರದ್ದು. ಆದರೆ ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದಾಗ ಆರಂಭದಲ್ಲಿ ನಾನು ಕೆಲವು ಕ್ಷಣ ಅಚ್ಚರಿಗೊಳಗಾದೆ. ಪ್ರಶಸ್ತಿ ಘೋಷಿಸಿದ್ದಕ್ಕಲ್ಲ, ಅಮೀನ್ ಮಟ್ಟು ಪ್ರಶಸ್ತಿ ಸ್ವೀಕರಿಸುತ್ತಾರಾ? ಅನ್ನೊ ಕಾರಣಕ್ಕೆ. ಯಾಕೆಂದರೆ ಅಮಿನ್ ಮಟ್ಟು ಅವರು ಅಷ್ಟೊಂದು ಸೂಕ್ಷ್ಮ ಮತ್ತು ಖಡಕ್ ಸ್ವಾಭಿಮಾನದ ಪತ್ರಕರ್ತ. ಅವರು ಯಾವತ್ತೂ ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ. ಪ್ರಶಸ್ತಿಗಳನ್ನು ನಿರೀಕ್ಷಿಸುವಷ್ಟು ಹಪಾಹಪಿಯೂ ಅವರಿಗಿಲ್ಲ. ಪ್ರಶಸ್ತಿಗಳು ಎಂದರೇನೆ ಮುಜುಗರ ಪಡುವ ವ್ಯಕ್ತಿತ್ವ ಅವರದು. ನನಗ್ಯಾಕೆ ಮಾರ್ರೆ ಅನ್ನುವಷ್ಟು ಸಂಕೋಚಜೀವಿ. ಹಾಗಾಗಿಯೇ ನನಗೆ ಅಚ್ಚರಿಯಾದದ್ದು.
ಅಮೀನ್ ಮಟ್ಟು ಅವರನ್ನು ಬಲ್ಲವರಿಗಷ್ಟೇ ಅವರ ನೇರ ಮತ್ತು ನಿಷ್ಟುರವಾದಿ ನಿಲುವು ಅರ್ಥವಾಗಲು ಸಾಧ್ಯ. ಹೊಗಳಿಕೆಯ ಹಂಗಿನ ಅಕ್ಷರಗಳ ಕೈಗೆ ಸಿಗದಷ್ಟು ಸಂವೇದನಾಶೀಲ ಬರಹಗಾರ. ಅವರೊಳಗಿನ ಪ್ರಬುದ್ದ ಚಿಂತಕ, ಪಕ್ವಗೊಂಡ ಪತ್ರಕರ್ತ, ಸಂವೇದನಶೀಲ ಬರಹಗಾರ ಸದಾ ಎಚ್ಚರದಿಂದಿರುತ್ತಾನೆ, ನಮ್ಮನ್ನೂ ಎಚ್ಚರಿಸುತ್ತಿರುತ್ತಾನೆ. ದೇಶ, ರಾಜ್ಯ ಮತ್ತು ಅಂತರಾಷ್ಟ್ರೀಯ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸರವನ್ನು ಮುಖಾಮುಖಿಯಗಿ ಅಷ್ಟೇ ನಿಖರವಾಗಿ ತರ್ಕಿಸುವ ಸಂವಾದಿಯೂ ಹೌದು. ಅವರ ಮಾತು, ಮೌನದಷ್ಟೇ ತಣ್ಣಗಿದ್ದರೂ ವಾಸ್ತವದ ವಿದ್ಯಮಾನಗಳನ್ನು ಅಷ್ಟೇ ನಿಖರವಾಗಿ, ವಸ್ತು ನಿಷ್ಟವಾಗಿ ಮಂಡಿಸಬಲ್ಲ ಜಾಣ್ಮೆ ಅವರಿಗಿದೆ. ಲಂಕೇಶ್ ಮೇಷ್ಟ್ರ ಹೊರತಾಗಿ ನಾನು ತುಂಬಾ ಗೌರವಿಸುವ ಮತ್ತು ಪ್ರೀತಿಸುವ ಪತ್ರಕರ್ತ ಯಾರಾದರೂ ಇದ್ದರೆ ಅದು ಅಮೀನ್‌ಮಟ್ಟು ಅವರು. ಲಂಕೇಶ್ ಮೇಷ್ಟ್ರ ನಿಕಟ ಒಡನಾಟದಲ್ಲಿ ನಾನು ಏನೇನು ಕಲಿತೆನೋ, ಆ ಗುಣಗಳನ್ನು ದಿನೇಶ್ ಅಮಿನ್‌ಮಟ್ಟು ಅವರಿಂದ ದೂರ ಇದ್ದಾಗ್ಯೂ ಅವರಲ್ಲಿ ಗಮನಿಸುತ್ತಿದ್ದೇನೆ. ಆತ್ಮೀಯತೆಯ ದೃಷ್ಟಿಯಲ್ಲಿ ನಮ್ಮೀರ್ವರ ನಡುವೆ ಅಂತರವಿರಬಹುದು. ಆದರೆ ಅವರ ಬರಹ ಮತ್ತು ಚಿಂತನೆಗಳ ಮೂಲಕ ನಾನು ಅವರೊಟ್ಟಿಗೆ ನಿತ್ಯ ಸಂವಾದಿ.
ಇಷ್ಟು ಬರೆದಿದ್ದಕ್ಕೇ ಅವರು ಅದೆಷ್ಟು ಮುಜುಗರದಲ್ಲಿ ತೊಯ್ದು ತೊಪ್ಪೆಯಾಗುತ್ತಾರೆ ಅನ್ನೋದನ್ನು ನಾನು ಅಂದಾಜಿಸಬಲ್ಲೆ. ಅವರಿಗೆ ಮತ್ತಷ್ಟು ಮುಜುಗರ ಉಂಟು ಮಾಡುವುದು ನನಗಿಷ್ಟವಿಲ್ಲ. ಆದರೆ ಅಂತಹ ಅರ್ಹ ವ್ಯಕ್ತಿಗೆ, ನಾಡು ಕಂಡ ಧೀಮಂತ ರಾಜಕಾರಣಿ, ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದ ಮಾಜಿ ರಾಜ್ಯಪಾಲರಾದ ದಿವಂಗತ ಬಿ ರಾಚಯ್ಯನವರ ಹೆಸರಿನಲ್ಲಿ ನೀಡಲಾಗುತ್ತಿರುವ ದತ್ತಿನಿಧಿ ಪ್ರಶಸ್ತಿ ಬಂದಿರುವುದು ಖುಷಿಯ ಸಂಗತಿ. ಈ ಸಂದರ್ಭದಲ್ಲಿ ಅಮೀನ್‌ಮಟ್ಟು ಅವರ ಬಗ್ಗೆ ಇಷ್ಟಾದರು ಹೇಳಲೇಬೇಕು ಅನ್ನಿಸಿದ್ದರಿಂದ, ಅವರಿಗೆ ಮುಜುಗರ ಉಂಟಾದರೂ ಪರವಾಗಿಲ್ಲ ಎಂಬ ಭಂಡತನದಲ್ಲಿ ನನ್ನ ಅನಿಸಿಕೆ ಹಂಚಿಕೊಂಡಿದ್ದೇನೆ. ನಿಮಗೂ ದಿನೇಶ್ ಅಮೀನ್‌ಮಟ್ಟು ಅವರ ಕಾಳಜಿ, ಬದ್ಧತೆ, ಬರಹಗಳ ಬಗ್ಗೆ ಪ್ರೀತಿ ಇದ್ದರೆ, ಅವರಿಗೆ ಒಂದು ವಿಶ್ ಮಾಡಿಬಿಡಿ….(ಟಿ. ಎನ್ ಷಣ್ಮುಖ)