ಕಣ್ಣಿಗೆ ಕಾಣಿಸುವ ಕ್ರೌರ್ಯ ತಕ್ಷಣದ ಪ್ರತಿಕ್ರಿಯೆಗಳನ್ನು ಹೊಮ್ಮಿಸುತ್ತದೆ. ಅದನ್ನೆಸಗಿದ ದುಷ್ಟನನ್ನು ಕಾನೂನು ತನ್ನ ವಶಕ್ಕೆ ತೆಗೆದುಕೊಂಡಿದೆ. ನಾನಿಲ್ಲಿ ಹೇಳಹೊರಟಿರುವುದು ಅಂತಹದೇ ಒಂದು ಪರೋಕ್ಷ ಕ್ರೌರ್ಯದ ಬಗ್ಗೆ. ಹಸಿದ ಹೊಟ್ಟೆಗಳ ಕೈಯಲ್ಲಿರುವ ಆಹಾರವನ್ನು ಕಿತ್ತು ಕಾಸಿದ್ದವರ ವಾಹನಗಳ ಇಂಧನ ಮಾಡಲು ಹೊರಟ ಅಮಾನವೀಯ ಕೃತ್ಯದ ಬಗ್ಗೆ. ಕರ್ನಾಟಕದಲ್ಲಿ “ಗ್ಯಾರಂಟಿ” ಗದ್ದಲದ ಕಾರಣಕ್ಕೆ, ಅಗತ್ಯವಿರುವ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದ್ದರಿಂದಾಗಿ ಇದು ಬೆಳಕಿಗೆ ಬಂದಿದೆ. ಆದರೆ ನಮ್ಮ ಮೀಡಿಯಾ ಈ ಬಗ್ಗೆ ಆಳವಾಗಿ ಇಳಿದು ಮೈ-ಕೈ ನೋವು ಮಾಡಿಕೊಳ್ಳಲು ಸಿದ್ಧವಿಲ್ಲ. ಹಾಗಾಗಿ ಈ ಕ್ರೌರ್ಯ ಹೊರಬಂದಿಲ್ಲ.

ಈ ಎರಡು ಅಂಕಿಅಂಶಗಳ ಕಡೆ ಒಮ್ಮೆ ಕಣ್ಣು ಹಾಯಿಸಿ (ಸಂಬಂಧಿಸಿದ ಚಿತ್ರಗಳನ್ನು ಕೂಡ ನೋಡಿಕೊಳ್ಳಿ)

>> 2015-16 ರ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ (NFHS) ಅನ್ವಯ, ಭಾರತದಲ್ಲಿ ಪೋಷಕಾಂಶಗಳ ಕೊರತೆ ಇರುವ ಜನಸಮುದಾಯದ ಪ್ರಮಾಣ 36.38%. ಕರ್ನಾಟಕದಲ್ಲಿ ಈ ಪ್ರಮಾಣ 43.69%. ಇದು ಸಾರ್ವಜನಿಕವಾಗಿ ಲಭ್ಯವಿರುವ ಲೇಟೆಸ್ಟ್ ಅಂಕಿ ಅಂಶ. ಇದರ ಬಳಿಕ ಪರಿಸ್ಥಿತಿ ಸುಧಾರಿಸಿರುವುದಕ್ಕಂತೂ ಸಾಧ್ಯವಿಲ್ಲ. ನೋಟು ರದ್ಧತಿ, ಕೋವಿಡ್ ಈ ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸಿರುವುದಕ್ಕಷ್ಟೇ ಸಾಧ್ಯ.

>>ದೇಶದಲ್ಲಿ ಆಹಾರ ಭದ್ರತಾ ಕಾಯಿದೆ ಚಾಲ್ತಿಯಲ್ಲಿದ್ದರೂ ಕೂಡ, 2022ನೇ ಸಾಲಿನಲ್ಲಿ 12 ಕೋಟಿ ಭಾರತೀಯರಿಗೆ ಇನ್ನೂ ಆ ಕಾಯಿದೆಯ ಅಡಿಯಲ್ಲಿ ಆಹಾರ ಪೂರೈಕೆ ಮಾಡುವ ಕಾನೂನುಬದ್ಧ ಜವಾಬ್ದಾರಿಯನ್ನು ಭಾರತ ಸರ್ಕಾರ ಪೂರೈಸಿಲ್ಲ.

ಈಗ ವಿಷಯ ಏನೆಂದರೆ, ದೇಶದ ಆಹಾರ ದಾಸ್ತಾನು ಸಂಸ್ಥೆಯಾದ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (FCI) ತನ್ನ ಬಳಿ ಅಗಾಧ ಪ್ರಮಾಣದಲ್ಲಿ ಆಹಾರ ದಾಸ್ತಾನು ಇದ್ದರೂ, ಅದನ್ನು ಹಸಿದವರಿಗೆ ಕೊಡುವ ಬದಲು ಎಥನಾಲ್ ಉತ್ಪಾದನೆಗೆ ಮಾರಲು ತೀರ್ಮಾನಿಸಿದೆ. 2025ರ ಹೊತ್ತಿಗೆ ದೇಶದಲ್ಲಿ ವಾಹನಗಳ ಇಂಧನಕ್ಕೆ 20% ಎಥನಾಲ್ ಬ್ಲೆಂಡ್ ಮಾಡುವ ಉದ್ದೇಶ ಹೊಂದಿರುವ ಸರ್ಕಾರ ಆ ಗುರಿ ಸಾಧಿಸುವುದಕ್ಕಾಗಿ, ಎಥನಾಲ್ ಉತ್ಪಾದನೆಗೆ ಕಬ್ಬಿನ ಜೊತೆಗೆ ಅಕ್ಕಿಯನ್ನೂ ಬಳಸಲು ನಿರ್ಧರಿಸಿದೆ. ಈಗ 8.5% ಎಥನಾಲ್ ಬ್ಲೆಂಡ್ ಮಾಡುವುದಕ್ಕೇ ವಾರ್ಷಿಕ ಅಂದಾಜು 400 ಕೋಟಿ ಲೀಟರ್ ಎಥನಾಲ್ ಅಗತ್ಯ ಇರುವಾಗ ಇನ್ನು 20% ಬ್ಲೆಂಡ್ ಮಾಡಲು ವಾರ್ಷಿಕ 1500 ಕೋಟಿ ಲೀಟರ್ ಎಥನಾಲ್ ಬೇಕಾಗುತ್ತದೆ. ಈ ಒತ್ತಡಕ್ಕೆ ಸಿಲುಕಿರುವ ಸರ್ಕಾರ, ಬಡವರ ಅನ್ನವನ್ನು ಕಿತ್ತು ಕಾಸಿದ್ದವರ ವಾಹನದ ಇಂಧನಕ್ಕೆ ಪೂರೈಸುವುದನ್ನು ಕ್ರೌರ್ಯ ಎನ್ನದೇ ಬೇರಾವ ಹೆಸರಿನಿಂದ ಕರೆಯವುದು ಸಾಧ್ಯ?

ಆಹಾರ ಭದ್ರತಾ ಕಾಯಿದೆಯ ಅನ್ವಯ  5 ಕೇಜಿ ಅಕ್ಕಿ ಪ್ರತಿಯೊಬ್ಬ ವ್ಯಕ್ತಿಗೆ ಕೊಡಬೇಕಾದುದು ಕಡ್ಡಾಯ. ಅದು ಯಾರದ್ದೇ ವರ/ಕರುಣೆ ಅಲ್ಲ. ಬದಲಾಗಿ ಕಾನೂನು ಬದ್ಧ ಹಕ್ಕು. ಅದರಲ್ಲೇ  12 ಕೋಟಿ ಜನರನ್ನು ಹೊರಗುಳಿಸಿರುವ ಭಾರತ ಸರ್ಕಾರ, ದುಡ್ಡು ಕೊಟ್ಟು  ಖರೀದಿಸುತ್ತೇವೆಂದು ಕರ್ನಾಟಕ ಸರ್ಕಾರ ಕೇಳಿದಾಗಲೂ ಕರುಣೆ ತೋರದೆ, ಚಿಲ್ಲರೆ “ರಾಜಕೀಯ”ಕ್ಕಿಳಿದು, ಆ ಅಕ್ಕಿಯನ್ನು ಇಂಧನ ಉತ್ಪಾದನೆಗೆ ಮಾರಲು ಹೊರಟಿರುವುದು ಯಾವುದೇ ಹಗರಣಕ್ಕಿಂತ ಸಣ್ಣದಲ್ಲ; ಮಾತ್ರವಲ್ಲದೇ ಅಮಾನವೀಯ ಕ್ರೌರ್ಯ ಕೂಡ.

ಇದು ಹಸಿದ ಕೈಗಳಿಂದ ಕಸಿದು, ಬಡವರನ್ನು ಉಪವಾಸ/ಅರೆಹಟ್ಟೆ ಕೆಡವಿ, ಆನಿ ಹೊಟ್ಟೆ ತುಂಬಿಸುವುದಕ್ಕೇ ಹುಟ್ಟಿಕೊಂಡಿರುವ ಸರ್ಕಾರ ಎಂಬುದಕ್ಕೆ ಬೇರೆ ಸಾಕ್ಷಿ ಬೇಕೆ?!!

LEAVE A REPLY

Please enter your comment!
Please enter your name here