ಕೆಲವು ವಿಚಾರಗಳು ಮುಜುಗರ ಎನಿಸಿದರೂ ತಿಳಿದುಕೊಳ್ಳಲೇಬೇಕು. ಏಕೆಂದರೆ ಕೆಲವು ವಿಷಯಗಳಲ್ಲಿನ ಅಜ್ಞಾನ ಹಲವು ನೋವು- ಅನಾಹುತಗಳಿಗೆ ಕಾರಣವಾಗಯತ್ತದೆ.
ಸಾಮಾನ್ಯವಾಗಿ ನಾಯಿಗಳು ಎಲ್ಲಾ ಕಡೆ ಗುಂಪು ಸೇರಿಕೊಂಡು ಗಂಡುಗಳು ಹೆಣ್ಣಿಗಾಗಿ ಕಚ್ಚಾಡುವುದನ್ನು ಈಗ ನೋಡಬಹುದು. ಇದು ಅನೇಕರಿಗೆ ಕಿರಿಕಿರಿ ಉಂಟು ಮಾಡಬಲ್ಲದು. ನಾಯಿಗಳ ಈ ನಿಸರ್ಗ ಸಹಜ ಮಿಲನ ಕ್ರಿಯೆ ಬಗೆಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ಹೆಣ್ಣು ನಾಯಿಗಳು 6-9 ತಿಂಗಳಲ್ಲಿ ವಯಸ್ಸಿಗೆ ಬರುತ್ತವೆ. ಮನುಷ್ಯನಿಗೆ ಋತುಚಕ್ರವಿದ್ದರೆ ಪ್ರಾಣಿಗಳಿಗೆ ಬೆದೆ ಚಕ್ರವಿದೆ. ಹೆಣ್ಣು ನಾಯಿ ಬೆದೆಗೆ ಬಂದಾಗ ಜನನಾಂಗದ ಗಾತ್ರದಲ್ಲಿ ಬದಲಾವಣೆಯಾಗುತ್ತದೆ ಹಾಗು ರಕ್ತ ಸ್ರಾವವಾಗುತ್ತದೆ. ನಂತರ ತಾನು ಸಂತಾನೋತ್ಪತ್ತಿಗೆ ಸಿದ್ದ ಎಂದು ತನ್ನ ಜನನಾಂಗದ ಮೂಲಕ ಫೆರಮೋನು (sex pheromone) ಎಂಬ ರಸಾಯನಿಕವನ್ನು ಹೊರಹಾಕುತ್ತಾಳೆ. ಈ ರಸಾಯನಿಕ ಗ್ರಹಿಸುವ ಅಕ್ಕಪಕ್ಕದ ಗಂಡು ನಾಯಿಗಳು ಹೆಣ್ಣನ್ನು ಕೂಡಲು ಪೈಪೋಟಿ ನಡೆಸುತ್ತವೆ.
ಮಿಲನಕ್ಕೆ ಕಾದಾಡುವ ಗಂಡುಗಳು ಹೆಣ್ಣು ಸಿಗುತ್ತಿದ್ದಂತೆ ಜನನಾಂಗವನ್ನು ಹೆಣ್ಣಿನೊಳಗೆ ಹಾಕುತ್ತವೆ. ಗಂಡು ನಾಯಿಯ ಜನನಾಂಗ ಹೆಣ್ಣಿನ ಜನನಾಂಗದೊಳಕ್ಕೆ ಸೇರುತ್ತಲೇ ಗಂಡು ನಾಯಿಯ ಜನನಾಂಗದ
ಮಧ್ಯದಲ್ಲಿರುವ ಉಬ್ಬಿರುವ ಗಂಟಿನಂತಹ (bulbus glandis) ಭಾಗಕ್ಕೆ ಹೆಚ್ಚಿನ ರಕ್ತ ಸಂಚಾರವಾಗಿ ಅವು ಊದಿಕೊಂಡು ಜನನಾಂಗಗಳು ಲಾಕ್ ಆಗುತ್ತವೆ. ಅದೇ ಸಮಯದಲ್ಲಿ ಹೆಣ್ಣಿನ ಯೋನಿಯ ಸ್ನಾಯುಗಳು ಸಂಕುಚಿತಗೊಂಡು ಗಂಡಿನ ಜನನಾಂಗವನ್ನು ಇನ್ನಷ್ಟು ಬಿಗಿಯಾಗಿ ಹಿಡಿಯುತ್ತವೆ. ಈ ಕ್ರಿಯೆ 5-30 ನಿಮಿಷಗಳವರೆಗೂ ನಡೆಯಬಹುದು. ವೀರ್ಯಸ್ಖಲನದ ನಂತರ ನಿಧಾನವಾಗಿ ಗಂಡಿನ ಜನನಾಂಗದ ನಿಮಿರುವಿಕೆ ಕಡಿಮೆಯಾಗಿ ಜನನಾಂಗದ ಗಾತ್ರ ಕುಗ್ಗುತ್ತದೆ. ಆಗ ಹೆಣ್ಣಿನ ಸ್ನಾಯುಗಳು ಯಥಾಸ್ಥಿತಿಗೆ ಬಂದು ಜನನಾಂಗಗಳು unlock ಆಗುತ್ತವೆ. ಹಾಗಾಗಿ ನಾಯಿಗಳ ಮಿಲನ ಕ್ರಿಯೆ ಜನನಾಂಗಗಳು ಸಿಕ್ಕಿ ಹಾಕಿಕೊಂಡಂತೆ ಹೆಚ್ಚು ಹೊತ್ತು ಇರುತ್ತದೆ. ನಾಯಿಗಳು ಪರಸ್ಪರ ಎಳೆದಾಡುತ್ತಿದ್ದರೂ ಜನನಾಂಗಗಳು ಕಳಚುವುದೇ ಇಲ್ಲ.
ನಾಯಿಗಳು ತಮ್ಮ ಗಡಿಯನ್ನು ಮೂತ್ರ ಮಾಡುವುದರ ಮೂಲಕ ಗುರುತಿಸುತ್ತವೆ. ಹೆಚ್ಚಿನ ಸಮಯದಲ್ಲಿ ತನ್ನ ಗಡಿಯನ್ನು ದಾಟುವುದಿಲ್ಲ. ಆದರೆ ಯಾವುದೇ ಹೆಣ್ಣು ಆ ಪ್ರದೇಶದಲ್ಲಿ ಬೆದೆಗೆ ಬಂದಾಗ ತನ್ನ ಗಡಿಯನ್ನು ದಾಟಿ ಹೊರ ಹೋಗುತ್ತವೆ.
ಸಾಮಾನ್ಯವಾಗಿ ಹೆಣ್ಣು ನಾಯಿಯ ಬೆದೆ ಚಕ್ರದ ಅವಧಿ 10-12 ದಿನಗಳ ವರೆಗೆ ಇರುತ್ತದೆ. ಅಷ್ಟು ದಿನಗಳವರೆಗೆ ಹೆಣ್ಣಿನ ಜೊತೆಗಿರುವ ಗಂಡು ನಾಯಿಗಳು ಉಳಿದ ನಾಯಿಗಳ ಜೊತೆ ಕಾದಾಡುತ್ತವೆ. ಅನ್ನ ಆಹಾರ ತ್ಯಜಿಸುತ್ತವೆ. ನಾಯಿಗಳು ಬಡಕಲಾಗುತ್ತವೆ. ಈ ಪ್ರಕ್ರಿಯೆ ದೇಹದ ಅನಗತ್ಯ ಕೊಬ್ಬನ್ನು ಕರಗಿಸಿ ಹೃದಯಾಘಾತವನ್ನು ತಡೆಯಲು ಸಹಕಾರಿ ಆಗುತ್ತದೆ.
ಹೆಣ್ಣು ನಾಯಿಗಳು ಬೆದೆಗೆ ಬಂದಾಗ ಸಾಕಿದವರಿಗೆ, ಅಕ್ಕ ಪಕ್ಕ ವಾಸಿಸುವವರಿಗೆ ಕಿರಿಕಿರಿಯಾಗಬಹುದು. ಆದರೆ ಇದೊಂದು ನೈಸರ್ಗಿಕ ಪ್ರಕ್ರಿಯೆ. ಮನುಷ್ಯನನ್ನೂ ಸೇರಿ ಎಲ್ಲಾ ಜೀವಿಗಳ ಸಂತಾನೋತ್ಪತ್ತಿಕ್ರಿಯೆ ಪ್ರಕೃತಿ ಸಹಜ ಅನ್ನುವುದನ್ನು ಮರೆಯಬಾರದು.
✍️ ನಾಗರಾಜ್ ಬೆಳ್ಳೂರು
Nisarga Conservation Trust