ರಾಯಚೂರು:ಕುರುಬ ಸಮುದಾಯದ ಪೂಜಾರಿಗಳ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಕೋಟ್ಯಂತರ ರೂ. ಅನುದಾನ ಕೊಡುತ್ತೀರಿ. ಅವರ ಮಾತುಗಳಿಗೆ ಮರಳಾಗಿ ಮನೆ ಬಾಗಿಲು ತೆರೆದಿಟ್ಟುಕೊಳ್ತೀರಿ. ಕಂಬಳಿ ಬಣ್ಣವನ್ನು ನೋಡಿದರೆ ಒಳಗೆ ಬಿಟ್ಟುಕೊಳ್ಳಲು ನಿಮಗೆ ಕಷ್ಟವಾಗುತ್ತದೆ ಎಂದು ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠದ ಸಿದ್ದರಾಮಾನಂದಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ತಿಂಥಿಣಿಯಲ್ಲಿ ಮಾತನಾಡಿದ ಅವರು, ಕುರುಬರ ಸಂಸ್ಕೃತಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಕನಕಗುರು ಪೀಠ ಸ್ಥಾಪನೆ ನಂತರವೂ ಯಾರೂ ಪೂಜಾರಿಗಳ ಕಷ್ಟ ಕೇಳಿಲ್ಲ. ಈ ಸಂಬಂಧ ಮೂರು ಬಾರಿ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೆ. ವಿದ್ಯಾಕೇಂದ್ರ ಸ್ಥಾಪನೆಗೆ 13 ಎಕರೆ ಜಮೀನು ಇದೆ, ಅಭಿವೃದ್ಧಿ ಮಾಡಿ ಎಂದು ಹೇಳಿದ್ದೆ. ತಿಂಗಳಿಗೆ ಇಲ್ಲದಿದ್ದರೂ ವರ್ಷಕ್ಕೊಮ್ಮೆಯಾದರೂ ಸಹಾಯಧನ ನೀಡಿ ಎಂದು ಮುಖ್ಯಮಂತ್ರಿಗಳಿಗೆ ನಮ್ಮ ಪೂಜಾರಿಗಳು ಮೂರು ಬಾರಿ ಕೇಳಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಎರಡು ಬಾರಿ ಸಭೆ ಕರೆದು ಮುಂದೂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ನೂರಾರು ವರ್ಷಗಳ ದೇವಸ್ಥಾನಗಳು ಸರ್ಕಾರಿ ಜಾಗದಲ್ಲಿದ್ದಾವೆ. ಆ ಜಾಗಗಳನ್ನು ಆಯಾ ದೇವಸ್ಥಾನಗಳ ಹೆಸರಿನಲ್ಲೇ ಮಾಡಬೇಕು. ಕಲಬುರ್ಗಿಯ ಉಳಿಬಾವಿಯಲ್ಲಿರುವ ಕಲಬುರ್ಗಿ‌ ವಿಶ್ವವಿದ್ಯಾಲಯದಲ್ಲಿನ ಬೀರ ದೇವರ ಆಸ್ತಿ, ಮಾಳಿಂಗ ರಾಯನ ಆಸ್ತಿ ಸೇರಿದಂತೆ ರಾಜ್ಯಾದ್ಯಂತ ಇರುವ ದೇವಸ್ಥಾನಗಳ ಆಸ್ತಿಗಳನ್ನು ಸರ್ಕಾರ ಮತ್ತು ಖಾಸಗಿಯವರು ಕಬ್ಜಾ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆಯವರು ನಮ್ಮ ಆಸ್ತಿಯನ್ನು ಕಬ್ಜಾ ಮಾಡಿ ದರ್ಗಾ ಕಟ್ಟಿದ್ದಾರೆ. ತಮ್ಮ ದೇವಸ್ಥಾನದ ಜಾಗಕ್ಕಾಗಿ ಬಡಪಾಯಿ ಕುರುಬ ಪೂಜಾರಿಗಳು ಪೊಲೀಸ್​ ಠಾಣೆ, ಕೋರ್ಟ್​ ಮೆಟ್ಟಿಲು ಹತ್ತುವಂತಾಗಿದೆ. ಇದನ್ನು ತಪ್ಪಿಸಲು, ಅತಿಕ್ರಮಣ ಮಾಡಿಕೊಂಡಿರುವ ಭೂಮಿಯನ್ನು ಆಯಾ ದೇವಸ್ಥಾನಗಳ ಹೆಸರಿನಲ್ಲಿ ಮಾಡಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here