ವಿಜಯಪುರ:ಅಹಿಂದ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಡಾ. ಅಂಬೇಡ್ಕರ್ ವಿಚಾರವಾದಿಗಳ ಬಳಗ, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:28-12-2024,ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಡಾ. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಶನಿವಾರ, ದಿನಾಂಕ 28-12-2024 ರಂದು ವಿಜಯಪುರ ಬಂದ್
ಮತ್ತು ಬೃಹತ್ ಪ್ರತಿಭಟನಾ ಮೆರವಣಿಗೆಗೆ ಕರೆ ಕೊಟ್ಟಿವೆ.
ಅಂದು ಪ್ರತಿಭಟನಾ ಮೆರವಣಿಗೆಯು ಮುಂಜಾನೆ 10 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಣಪತಿ ಚೌಕ, ವಾಜಪೇಯಿ ಸರ್ಕಲ್, ಕಿರಾಣಾ ಬಜಾರ್, ಸಿದ್ದೇಶ್ವರ ರಸ್ತೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ನಡೆಯಲಿದೆ.
ಡಾ. ಬಾಬಾಸಾಹೇಬ ಅಂಬೇಡ್ಕರ್; ಒಬ್ಬ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಶಾಲೆಯ ಹೊರಗೆ ಕುಳಿತು ಕಲಿತ ಒಬ್ಬ ವಿಶ್ವಜ್ಞಾನಿಯಾಗಿ ಬೆಳೆದುಬಂದ ಪರಿಯೇ ಅಚ್ಚರಿ ಮೂಡಿಸುವಂಥದ್ದು. ಸಾಮಾಜಿಕ ಸಮಾನತೆಯ ಹರಿಕಾರರಾಗಿ, ಆರ್ಥಿಕ ತಜ್ಞರಾಗಿ, ಕಾರ್ಮಿಕ ನಾಯಕರಾಗಿ, ಮಹಿಳಾ ವಿಮೋಚಕರಾಗಿ, ದೇಶದ ಸಮಸ್ತ ಶೋಷಿತ ವರ್ಗಗಳ ವಿಮೋಚಕರಾಗಿ ಬಂದ ಡಾ. ಅಂಬೇಡ್ಕರ್ ಮಾರ್ಟಿನ್ ಲೂಥರ್ ಕಿಂಗ್ ನಂತರದಲ್ಲಿ ವಿಶ್ವದ ಬಹುದೊಡ್ಡ ಮಾನವ ಹಕ್ಕುಗಳ ಹೋರಾಟಗಾರರಾಗಿ ಗುರುತಿಸಲ್ಪಡುತ್ತಾರೆ.
ಪ್ರಜಾಪ್ರಭುತ್ವದ ಪ್ರತಿಪಾದಕರಾಗಿ, ಹಲವು ಧರ್ಮಗಳ, ಹಲವು ಭಾಷೆಗಳ, ಹಲವು ಸಂಸ್ಕೃತಿಗಳ, ಸಾವಿರಾರು ಜಾತಿಗಳ, ಸಂಪ್ರದಾಯಗಳನ್ನು ಒಳಗೊಂಡ ಭಾರತದಂತಹ ದೇಶವನ್ನು ಸಂವಿಧಾನದ ಮೂಲಕ ‘ವಿವಿಧತೆಯಲ್ಲಿ ಏಕತೆ’ ಮೂಡಿಸಿ ಸರ್ವ ಭಾರತೀಯರನ್ನು ಒಂದುಗೂಡಿಸಿದವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ನಾಯಕರಲ್ಲ. ಬದಲಾಗಿ ಧ್ವನಿ ಕಳೆದುಕೊಂಡಿದ್ದ ಭಾರತದ ಎಲ್ಲಾ ಶೋಷಿತರ, ಮಹಿಳೆಯರ ಕೊರಳ ದನಿಯಾದವರು. ಯಾವುದೇ ಧರ್ಮ, ಜಾತಿಗಳನ್ನು ಪರಿಗಣಿಸದೆ ಸಮಸ್ತ ಭಾರತೀಯರ ಬದುಕಿನ ಘನತೆಯನ್ನು ಹೆಚ್ಚಿಸಲು ತಮ್ಮ ಬದುಕನ್ನೇ ಪಣಕ್ಕಿಟ್ಟವರು.
ಆದರೆ, ಈಗ ಪ್ರಜಾಪ್ರಭುತ್ವದ ದೇಗುಲದಲ್ಲಿಯೇ ನಿಂತುಕೊಂಡು, ಕೇಂದ್ರ ಸರಕಾರದ ಗೌರವಾನ್ವಿತ ಮತ್ತು ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಗೃಹಮಂತ್ರಿ ಅಮಿತ್ ಷಾ ಅವರು ಡಾ. ಅಂಬೇಡ್ಕರ್ ಅವರನ್ನು ವ್ಯಂಗ್ಯ ಮತ್ತು ಹಾಸ್ಯದ ರೂಪದಲ್ಲಿ ಅಪಮಾನಿಸಿದ್ದಾರೆ. ಯಾವ ಸಂವಿಧಾನದ ಮೂಲಕ ಉನ್ನತ ಹುದ್ದೆಯಲ್ಲಿರುವ ಅಮಿತ್ ಷಾ, ಅದೇ ಸಂವಿಧಾನ ನಿರ್ಮಾತೃ ಬಾಬಾಸಾಹೇಬರ ಅವಹೇಳನ ಮಾಡಿದ್ದಾರೆ. ತಮ್ಮ ಹುದ್ದೆಯ ಘನತೆಯನ್ನೂ ಮೀರಿದ ಅಮಿತ್ ಷಾ ಪ್ರಜ್ಞಾಪೂರ್ವಕವಾಗಿ ಆಡಿದ ಮಾತು. ಅವರನ್ನು ಮುನ್ನಡೆಸುತ್ತಿರುವ ಆರೆಸ್ಸೆಸ್ ಮತ್ತು ಬಿಜೆಪಿಯ ಮನಸ್ಥಿತಿ, ಎದೆಯಲ್ಲಿ ಅದುಮಿಟ್ಟುಕೊಂಡ ಅಂತರಾಳದ ಮಾತಿದು. ಬಾಬಾಸಾಹೇಬರು ಮತ್ತು ಸಂವಿಧಾನದ ಮೇಲಿನ ಆಕ್ರಮಣವಿದು. ಇದರಿಂದಾಗಿ ಬಾಬಾಸಾಹೇಬರನ್ನು ತಮ್ಮ ಹೃದಯದಲ್ಲಿ ಇಟ್ಟಕೊಂಡು ಆರಾಧಿಸುತ್ತಿರುವ, ಅನುಸರಿಸುತ್ತಿರುವ ಕೋಟ್ಯಾಂತರ ಭಾರತೀಯರಿಗೆ ನೋವುಂಟಾಗಿದೆ.
ಆದ್ದರಿಂದ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಹೇಳಿಕೆಯನ್ನು ಖಂಡಿಸಿ ಈಗ ದೇಶದಾದ್ಯಂತ ಪ್ರತಿರೋಧದ ಆಕ್ರೋಶ ವ್ಯಕ್ತವಾಗುತ್ತಿದೆ. ಸಮಾನತೆಯನ್ನು ಬಯಸುವ, ಸಂವಿಧಾನವನ್ನು ಗೌರವಿಸುವ ಕೋಟ್ಯಾಂತರ ಜನರು ಒಂದು ವಾರದಿಂದ ಬೀದಿಗಿಳಿದು ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ವಿವಿಧ ರೀತಿಯ ಹೋರಾಟ ಮಾಡುತ್ತಿದ್ದಾರೆ.ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿಯೂ ಡಾ. ಅಂಬೇಡ್ಕರ ವಿಚಾರವಾದಿಗಳ ಬಳಗ, ಅಹಿಂದ ಮತ್ತು ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಕೂಡ ಹಲವು ರೀತಿಯ ಹೋರಾಟದಲ್ಲಿ ತೊಡಗಿಕೊಂಡಿವೆ. ವಿಜಯಪುರ ನಗರದಲ್ಲಿಯೂ ಪಂಜಿನ ಮೆರವಣಿಗೆ, ಪ್ರತಿಭಟನಾ ಮೆರವಣಿಗೆಗಳು ನಡೆದಿವೆ. ಈ ಹೋರಾಟದ ಮುಂದುವರೆದ ಭಾಗವಾಗಿ, ಜಿಲ್ಲೆಯ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಂಘಟನೆಗಳು, ಕಾರ್ಮಿಕ, ರೈತ, ಮಹಿಳಾಪರ, ಬಸವಪರ ಸಂಘಟನೆಗಳು, ಸಮಾನತೆ ಮತ್ತು ಸಂವಿಧಾನದ ಸಂರಕ್ಷಣೆ ಬಯಸುವ ಚಿಂತಕರ ಸಹಭಾಗಿತ್ವದೊಂದಿಗೆ ಇದೇ ಶನಿವಾರ, ದಿನಾಂಕ 28-12-2024ರಂದು ‘ವಿಜಯಪುರ ಬಂದ್’ಗೆ ಕರೆ ನೀಡಲಾಗಿದೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಕಾರಣ, ವಿಜಯಪುರ ನಗರ ಮತ್ತು ಜಿಲ್ಲೆಯ ಸಮಸ್ತ ನಾಗರಿಕರು, ವ್ಯಾಪಾರಸ್ಥರು, ಬೀದಿ ವ್ಯಾಪಾರಸ್ಥರು, ಶಾಲೆ-ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಕೂಲಿಕಾರರು, ನ್ಯಾಯವಾದಿಗಳು, ದಿನಾಂಕ 28 ರಂದು ನಡೆಯುವ ಶಾಂತಿ ಮತ್ತು ಸೌಹಾರ್ದಯುತ ‘ವಿಜಯಪುರ ಬಂದ್’ ಯಶಸ್ವಿಗೆ ಸಹಕರಿಸಬೇಕೆಂದು ಮತ್ತು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
ಸಂಪರ್ಕಕ್ಕಾಗಿ:ಕೋಟ್ಯಾಳಕರ್ ಬಿಲ್ಡಿಂಗ್, ಮಿರ್ದೆ ಗಲ್ಲಿ, ಶಾಹು ನಗರ, ವಿಜಯಪುರ
№: 9880884471, 8050123277, 9448117226, 9342695705,
9740420826, 9900984648, 9448815524, 9845301617, 9741824266, 9972062074
ಭಾಗವಹಿಸಿ.. ಹೋರಾಟಕ್ಕೆ ಕೈ ಜೋಡಿಸಿ.ಎಂದು ಸಂಘಟಕರು ಮನವಿ ಮಾಡಿದ್ದಾರೆ.