“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಒಬಿಸಿಗಳ ಪಟ್ಟಿಯಲ್ಲೇ ಮುಸ್ಲಿಮರ ಜಾತಿಗಳಿಗೂ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದವರ ಮೀಸಲಾತಿಯನ್ನು ಕಡಿತಗೊಳಿಸಿತ್ತು. ಅದನ್ನು ದೇಶದಾದ್ಯಂತ ವಿಸ್ತರಿಸಲೂ ಯೋಚಿಸಿತ್ತು…” ಎಂದು ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಮದ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಚುನಾವಣಾ ಬಾಷಣ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷರಾದ ಹಂಸರಾಜ್ ಗಂಗಾರಾಮ್ ಅಹಿರ್ ಕೂಡ ಒಂದು ಪತ್ರಿಕಾ ಹೇಳಿಕೆ ನೀಡಿ ಮೋದಿ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ!
ವಿಪರ್ಯಾಸವೆಂದರೆ ಮೋದಿ ಮತ್ತು ಅಹಿರ್ ಇಬ್ಬರೂ ಕರ್ನಾಟಕದ ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಕನಿಷ್ಟ ಅರಿವಿಲ್ಲದೆ ಅತ್ಯಂತ ಅಜ್ಞಾನದಿಂದ ಮತ್ತು ಬೇಜವಾಬ್ದಾರಿಯಿಂದ ಮಾತಾಡಿರುವುದು! ಮತ್ತು ಹಿಂದುಳಿದವರನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟುವ ಆತುರದಲ್ಲಿ ತಮ್ಮ ಸ್ಥಾನಮಾನಳನ್ನೇ ಕಳೆದುಕೊಂಡು ಬೇಕಾಬಿಟ್ಟಿ ಸುಳ್ಳು ಹೇಳಿರುವುದು!!
ಸ್ವಾತಂತ್ರ್ಯ ಪೂರ್ವದ ನಾಲ್ವಡಿ ಕೃಷ್ಣರಾಜ ಒಡೆಯರ್ ನೇಮಿಸಿದ ‘ಮಿಲ್ಲರ್ ಆಯೋಗ’ದಿಂದ ಹಿಡಿದು ಸ್ವಾತಂತ್ರಾನಂತರದ ಚಿನ್ನಪ್ಪರೆಡ್ಡಿ ಆಯೋಗ, ವೆಂಕಟಸ್ವಾಮಿ ಆಯೋಗದ ಆದಿಯಾಗಿ ಇಂದಿನ ಎಲ್ಲಾ ಆಯೋಗಗಳು ಮುಸ್ಲಿಮರನ್ನು “ಹಿಂದುಳಿದ ವರ್ಗಗಳು” ಎಂದೇ ಕರ್ನಾಟಕದಲ್ಲಿ ಗುರುತಿಸಿರುವುದು.
ಮುಸ್ಲಿಮರನ್ನೆಂದೂ ಧಾರ್ಮಿಕ ಅಲ್ಪಸಂಖ್ಯಾತರು ಅಥವಾ ‘ರಿಲಿಜಿಯಸ್ ಮೈನಾರಿಟಿ’ ಎಂದು ಗುರುತಿಸಿಲ್ಲ, ಅಂತೆಯೇ ಕ್ರೈಸ್ತರು, ಜೈನರು, ಬೌದ್ದರು, ಸಿಖ್ಖರೂ ಕೂಡ ಹಿಂದುಳಿದ ವರ್ಗಗಳ ಪಟ್ಟಿಯಲ್ಲೇ ಇದ್ದಾರೆ ಎನ್ನುವುದು ಗಮನಾರ್ಹ.
ದೇವರಾಜ ಅರಸರು ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದರು. ನಂತರ ವೀರಪ್ಪ ಮೊಯ್ಲಿಯವರು ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ನೀಡಿದರು. ಆದರೆ ದೇವೇಗೌಡರು ತಾವು ಮಾಡಿದ್ದೆಂದು ಹೇಳುತ್ತಿರುವುದೂ ಅಪ್ಪಟ ಸುಳ್ಳು.
ಸಂವಿಧಾನದ ಅನುಚ್ಛೇದ 15(4) ಮತ್ತು 16(4) ರ ಪ್ರಕಾರ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುತ್ತಾರೆ. ಇಲ್ಲಿ ಜಾತಿ,ಮತ,ಧರ್ಮ ಎಂಬುದಕ್ಕಿಂತಲೂ ಇದೊಂದು ‘ವರ್ಗ’ ಎಂದು ಗುರುತಿಸಲ್ಪಡುತ್ತಾರೆ. ಆದ್ದರಿಂದಲೇ “ಹಿಂದುಳಿದ ವರ್ಗಗಳ ಆಯೋಗ” ಎನ್ನುತಾರೆಯೇ ಹೊರತು “ಹಿಂದುಳಿದ ಜಾತಿಗಳ” ಅಥವಾ “ಹಿಂದುಳಿದ ಮತಗಳ” ಆಯೋಗ ಅನ್ನುವುದಿಲ್ಲ.
ಪ್ರಧಾನಮಂತ್ರಿಗಳೇನೋ ಲೋಕಾಭಿರಾಮವಾಗಿ ಇಂತಹ ಅಪದ್ದಗಳನ್ನು ಆಗಾಗ ಮಾತಾಡುವುದನ್ನು ರೂಡಿಸಿಕೊಂಡಿದ್ದಾರೆ. ಇಂತಹ ವಿಷಯಗಳಲ್ಲಿ ಇವರನ್ನು ಯಾರೂ ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಅಡ್ಡಿಯಿಲ್ಲ. ಆದರೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷರು ಈ ಬಗ್ಗೆ ಕನಿಷ್ಟ ಸಣ್ಣ ಸಿದ್ದತೆಯನ್ನೂ ಮಾಡಿಕೊಳ್ಳದೆ. ಬೇಜವಾಬ್ದಾರಿಯಿಂದ ಪ್ರೆಸ್ ನೋಟ್ ನೀಡಿರುವುದು ಅಕ್ಷಮ್ಯ. ಅಂದಹಾಗೆ ರಾಷ್ಟ್ರೀಯ ಆಯೋಗಕ್ಕೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೂ ಸಂಭಂದವೇ ಇಲ್ಲ. ಅವರು ಚಕ್ರವರ್ತಿಗಳೂ ಅಲ್ಲ, ನಾವು ಅವರ ಸಾಮಂತರೂ ಅಲ್ಲ. ನಮಗೆ ನಮ್ಮದೇ ಆದ ಸ್ವಾತಂತ್ರ ಮತ್ತು ಸ್ವಾಯತ್ತತೆ ಇದೆ. ನಾವು ಯಾರ ಅಧೀನದಲ್ಲೂ ಇಲ್ಲ ಎನ್ನುವುದನ್ನು ಇಲ್ಲಿ ಸ್ಪಷ್ಟಪಡಿಸುತ್ತೇವೆ.
ಮೋದಿ ಮತ್ತು ಅಹಿರ್ ಇವರಿಬ್ಬರೂ ಕನಿಷ್ಟ ಯಾರಾದರೂ ವಿದ್ಯಾವಂತರನ್ನು ಕೇಳಿ ವಿಷಯ ತಿಳಿದುಕೊಂಡು ಸಾರ್ವಜನಿಕ ವಾಗಿ ಮಾತಾಡಿ ತಮ್ಮ ಸ್ಥಾನಮಾನಗಳ ಘನತೆ ಉಳಿಸಿಕೊಳ್ಳಬಹುದಿತ್ತು.
– ಡಾ. ಸಿ.ಎಸ್.ದ್ವಾರಕಾನಾಥ್
ಮಾಜಿ ಅದ್ಯಕ್ಷರು
ಕರ್ನಾಟಕ ರಾಜ್ಯ ಹಿಂದುಳಿದ
ವರ್ಗಗಳ ಆಯೋಗ

LEAVE A REPLY

Please enter your comment!
Please enter your name here