ಮೂಡಲಗಿ- ಜನರ ಪ್ರೀತಿ, ವಿಶ್ವಾಸದಿಂದಾಗಿಯೇ ನಮ್ಮ ಒಂದೇ ಕುಟುಂಬದಲ್ಲಿ ಐವರು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಜನಸೇವೆಯನ್ನು ಮಾಡುತ್ತಿದ್ದೇವೆ. ಇದರಲ್ಲಿ ಕುಟುಂಬ ರಾಜಕೀಯದ ಪ್ರಶ್ನೆಯೇ ಉದ್ಭವಿಸುವದಿಲ್ಲ ಎಂದು ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಿರೋಧಿಗಳಿಗೆ ಟಾಂಗ್ ನೀಡಿದರು.
ತಾಲ್ಲೂಕಿನ ಯಾದವಾಡ ಗ್ರಾಮದ ಘಟ್ಟಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರದಂದು ಜರುಗಿದ ಸಂತ ಶ್ರೇಷ್ಠ ಕನಕದಾಸರ ೫೩೭ ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬ ರಾಜಕೀಯ ಕುರಿತಂತೆ ವಿರೋಧಿಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಟೀಕಿಸುವ ವ್ಯಕ್ತಿಗಳಿಗೆ ಛಾಟಿ ಬೀಸಿದರು.
ಜನಗಳ ಆಶೀರ್ವಾದದಿಂದಲೇ ನಾನು ಅರಭಾವಿಯಿಂದ, ರಮೇಶ್ ಜಾರಕಿಹೊಳಿಯವರು ಗೋಕಾಕದಿಂದ, ಸತೀಶ್ ಜಾರಕಿಹೊಳಿಯವರು ಯಮಕನಮರಡಿಯಿಂದ ಶಾಸಕರಾಗಿದ್ದೇವೆ. ಬೆಳಗಾವಿ ಸ್ಥಳೀಯ ಸಂಸ್ಥೆಗಳಿಂದ ಲಖನ್ ಜಾರಕಿಹೊಳಿ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಹೋದರ ಸತೀಶ್ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಅಧಿಕಾರದ ಹಿಂದೆ ನಾವು ಹೋದವರಲ್ಲ. ಜನರಿಂದಲೇ ನಾವೆಲ್ಲರೂ ಶಾಸನ ಸಭೆಗಳಲ್ಲಿ ಅಧಿಕಾರದಲ್ಲಿದ್ದೇವೆ.ನಾವು ಜನರಿಗೆ ಬೇಡ ಅಂದ ಪಕ್ಷದಲ್ಲಿ ಒಂದು ಕ್ಷಣವೂ ರಾಜಕೀಯದಲ್ಲಿ ಇರುವುದಿಲ್ಲ. ಎಲ್ಲಿಯವರೆಗೆ ದೇವರು ಮತ್ತು ಮತದಾರರ ಆಶೀರ್ವಾದ ಇರುತ್ತೋ ಅಲ್ಲಿಯವರೆಗೆ ರಾಜಕೀಯದಲ್ಲಿದ್ದುಕೊಂಡು ಜನಸೇವೆಯನ್ನು ಮಾಡುತ್ತೇವೆ ಎಂದು ವಿರೋಧಿಗಳನ್ನು ಕುಟುಕಿದರು.
ನಮ್ಮ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿಲ್ಲ. ಅದು ಜನರು ನೀಡಿರುವ ಅಧಿಕಾರ. ಪ್ರೀತಿಯಿಂದ ಗೆಲ್ಲಿಸಿ ಕಳುಹಿಸಿದ ಮತದಾರರಿಗೆ ನಾವು ಸದಾಕಾಲವೂ ಚಿರ ಋಣಿಯಾಗಿರ್ತೀವಿ. ಈ ಕುಟುಂಬ ರಾಜಕೀಯ ಕೇವಲ ನಮಗಷ್ಟೇ ಅಲ್ಲ. ಇದು ಇಡೀ ದೇಶವನ್ನೇ ಆವರಿಸಿದೆ ಎಂದು ಉದಾಹರಿಸಿದ ಅವರು, ಜನರು ಪ್ರೀತಿ, ವಿಶ್ವಾಸದಿಂದ ನೀಡಿರುವ ಅಧಿಕಾರಕ್ಕೆ ಯಾವುದೇ ಚ್ಯುತಿ ತರದೇ ಜನರ ಸೇವೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಸರ್ವ ಜನಾಂಗಗಳ ಶಾಂತಿಯ ತೋಟದಂತಾಗಿರುವ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರು ತಮ್ಮ ಕುಟುಂಬದ ಬೆನ್ನಿಗಿದ್ದಾರೆ. ನಮ್ಮ ಕೆಲಸ ಕಾರ್ಯಗಳಿಗೆ ಟೊಂಕು ಕಟ್ಟಿ ಬೆಂಬಲಕ್ಕೆ ನಿಂತಿದ್ದಾರೆ. ಬಹು ಸಂಖ್ಯಾತರು, ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಹೀಗೇ ಎಲ್ಲ ಜಾತಿಯ ಜನಾಂಗದವರು ಪ್ರತಿ ಚುನಾವಣೆಗಳಲ್ಲಿ ಆಶೀರ್ವಾದ ಮಾಡುತ್ತ ಆರಿಸಿ ತರುತ್ತಿದ್ದಾರೆ. ಜನ ಕಲ್ಯಾಣಕ್ಕಾಗಿ ಮತ್ತು ಅಭಿವೃದ್ಧಿಗಾಗಿ ನಾವು ಸಿದ್ಧರಿದ್ದೇವೆ. ದ್ವೇಷ, ಅಸೂಯೆ ಭಾವನೆಗಳು ನಮ್ಮಲಿಲ್ಲ. ಜನರಿಗೆ ಒಳ್ಳೆದು ಮಾಡಬೇಕು. ನಂಬಿದ ಜನರಿಗೆ ಅನ್ಯಾಯವಾಗಬಾರದು ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಜನಪರ ಸೇವೆಯನ್ನು ಮಾಡುತ್ತಿದ್ದೇವೆ. ಜನರ ಶಕ್ತಿಯೇ ನಮಗೆ ಶ್ರೀರಕ್ಷೆಯಾಗಿದೆ ಎಂದು ಅವರು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ರಾಜಾಪೂರ ಗ್ರಾಮದಲ್ಲಿ ನಡೆದ ಕನಕ ಜಯಂತಿಯಂದೇ ಭಂಡಾರ ಹಾರಿಸುವ ಮೂಲಕ ನನ್ನ ಪ್ರಚಂಡ ಗೆಲುವಿಗೆ ಆಗಲೇ ಜನರು ಮುನ್ನುಡಿಯನ್ನು ಬರೆದಿದ್ದರು. ನಂತರ ಸುಣಧೋಳಿಯಲ್ಲಿ ಈಗ ತಾಲ್ಲೂಕಿನ ಗಡಿಯಲ್ಲಿರುವ ಯಾದವಾಡ ಗ್ರಾಮದಲ್ಲಿ ಅದ್ದೂರಿಯಾಗಿ ಕನಕದಾಸರನ್ನು ಸ್ಮರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇಲ್ಲಿ ಎಲ್ಲ ಸಮುದಾಯದವರನ್ನು ಕರೆದು ದೊಡ್ಡ ಪ್ರಮಾಣದಲ್ಲಿ ಕನಕದಾಸರ ಜಯಂತಿಯನ್ನು ಮಾಡಿದ್ದಾರೆ. ಅದಕ್ಕಾಗಿ ಸಮಸ್ತ ಹಾಲುಮತ ಸಮಾಜ ಬಾಂಧವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.
ಕನಕದಾಸರು ಮತ್ತು ಸಾಮಾಜಿಕ ನ್ಯಾಯದ‌ ರೂವಾರಿ ಬಸವಣ್ಣನವರು ಸ್ಥಾಪಿಸಿದ ಅನುಭವ
ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಕೋಮು ಸಾಮರಸ್ಯವನ್ನು ಮೂಡಿಸುತ್ತಿದ್ದೇನೆ. ಎಲ್ಲರನ್ನೂ ಸಹೋದರತ್ವ ಮನೋಭಾವನೆಯಿಂದ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಿದ್ದೇನೆ. ನಮ್ಮನ್ನು ವಿರೋಧಿಸುವವರು ವಿರೋಧಿಸಲಿ. ಆದರೆ ಅನಾವಶ್ಯಕ ಟೀಕೆಗಳನ್ನು ಮಾಡುವದನ್ನು ಬಿಡುವಂತೆ ವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಕಾರ್ಯಕ್ರಮದ ಸಾರಥಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮದ ಬಸವೇಶ್ವರ ವೃತ್ತದಿಂದ ವೇದಿಕೆಯತನಕ ಕುಂಭಮೇಳದೊಂದಿಗೆ ಡೊಳ್ಳು, ವಿವಿಧ ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಹಾಲುಮತ ಸಮಾಜ ಬಾಂಧವರು ಬಾಲಚಂದ್ರ ಜಾರಕಿಹೊಳಿ ಅವರಿಗೆ ಕಂಬಳಿ ಹೊದಿಸಿ ಬೃಹತ್ ಹೂ-ಮಾಲೆಯನ್ನು ಹಾಕಿ ಸತ್ಕರಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಅಮರೇಶ್ವರ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಮಾಳಿಂಗರಾಯ ಮಾರಾಯ, ಸಹದೇವರು ಸಾನಿಧ್ಯವನ್ನು ಹಂಚಿಕೊಂಡರು.
ಪ್ರದೇಶ ಕುರುಬರ ಸಂಘದ ನಿರ್ದೇಶಕ ರಾಜೇಂದ್ರ ಸಣ್ಣಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಮ್ಮ ಕುರುಬ ಸಮಾಜದವರು ಕೊಟ್ಟ ಮಾತಿನಂತೆ ನಡೆಯುತ್ತಾರೆ. ಮೋಸ ಮಾಡುವ ಜಾಯಮಾನ ನಮ್ಮದಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಜಾರಕಿಹೊಳಿ ಮನೆತನಕ್ಕೆ ನಾವು ಸದಾ ನಿಷ್ಟರು ಎಂದು ಘೋಷಿಸಿದರು.
ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಜಿ.ಪಂ.ಮಾಜಿ ಸದಸ್ಯ ರಂಗಪ್ಪ ಇಟ್ಟನ್ನವರ, ಮಡ್ಡೆಪ್ಪ ತೋಳಿನವರ, ಗೋವಿಂದ ಕೊಪ್ಪದ, ಭೀಮಶಿ ಮಗದುಮ್ಮ, ವಿಠ್ಠಲ ಸವದತ್ತಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪ್ರಭಾ ಶುಗರ್ಸ್ ನಿರ್ದೇಶಕ ಕೆಂಚನಗೌಡ ಪಾಟೀಲ, ಲಕ್ಷ್ಮಣ ಮುಸಗುಪ್ಪಿ, ಲಕ್ಷ್ಮಣ ಗಣಪ್ಪಗೋಳ, ಗಿರೀಶ ಹಳ್ಳೂರ, ಬೀರಪ್ಪ ಮುಗಳಖೋಡ, ಪರ್ವತಗೌಡ ಪಾಟೀಲ, ಹಣಮಂತ ಗುಡ್ಲಮನಿ, ತಿಪ್ಪಣ್ಣ ಹೆಗ್ಗಾರ, ಸದಾಶಿವ ದುರಗನ್ನವರ, ಹಣಮಂತ ಮಳ್ಳಿ, ಧರೆಪ್ಪ ಮುಧೋಳ, ಹಣಮಂತ ಹುಚರಡ್ಡಿ, ಅಮೀನಸಾಬ ಯಳ್ಳೂರ, ಬಸಪ್ಪ ಹಿಡಕಲ್,ವೀರಣ್ಣ ಮೋಡಿ, ಮಲ್ಲಪ್ಪ ಚೆಕ್ಕೆನ್ನವರ, ಹಣಮಂತ ಹುಚರಡ್ಡಿ, ಸಿದ್ದಪ್ಪ ಮುಗಳಖೋಡ, ಮಂಜು ಹುಣಶಿಕಟ್ಟಿ, ಶ್ರೀಶೈಲ ಭಜಂತ್ರಿ ವಿವಿಧ ಸಮಾಜಗಳ ಮುಖಂಡರು, ಹಾಲು ಮತ ಸಮಾಜದ ಹಲವಾರು ಗಣ್ಯರು ವೇದಿಕೆಯನ್ನು ಉಪಸ್ಥಿತರಿದ್ದರು.
ಗ್ರಾ.ಪಂ. ಅಧ್ಯಕ್ಷ ಮತ್ತು ಚಿತ್ರ ನಿರ್ಮಾಪಕ ಬಸವರಾಜ ಭೂತಾಳಿ ಅವರು ಆಶಯ ಮಾತುಗಳನ್ನಾಡಿದರು.

ಯಾದವಾಡ ಗ್ರಾಮದಲ್ಲಿ ರವಿವಾರದಂದು ಜರುಗಿದ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು. ಅಮರೇಶ್ವರ ಮಹಾರಾಜರು, ಮಾಳಿಂಗರಾಯ ಮಾರಾಯ, ಸರ್ವೋತ್ತಮ ಜಾರಕಿಹೊಳಿ, ಡಾ. ರಾಜೇಂದ್ರ ಸಣ್ಣಕ್ಕಿ, ಬಸವರಾಜ ಭೂತಾಳಿ, ಮಡ್ಡೆಪ್ಪ ತೋಳಿನವರ, ಡಾ. ಎಸ್.ಎಸ್.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here