ಹಾಲುಮತ ಕುಲಗುರು, ಶಾಂತ ಸಿಂಹಾಸನಾರೂಢ ಶ್ರೀ ರೇವಣಸಿದ್ದೇಶ್ವರ ಮಹಾಸಂಸ್ಥಾನ ಮಠ, ಸರವೂರು ಶಾಖಾ, ಅಣತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಇದಕ್ಕೆ ಸಂಬಂಧಿಸಿದ ತಾಮ್ರಪಟ್ಟಿಕೆ ಇದು. ಚರಿತ್ರೆಯಲ್ಲಿ ಸುಳ್ಳನ್ನು ಕೂಡಾ ರಾಜಠಸ್ಸೆಯೊಂದಿಗೆ ನಿಜವೆಂದೇ ನಂಬಿಸುವ ಯಡವಟ್ಟುಗಳು ಕೂಡಾ ನಡೆದಿವೆ ಎಂಬುದಕ್ಕೆ ಈ ತಾಮ್ರದ ಬಿಲ್ಲೆಯೇ ಸಾಕ್ಷಿಯಾಗಿದೆ. ಕುರುಬರ ಕುಲಗುರು ರೇವಣಸಿದ್ಧನನ್ನು ಹೈಜಾಕ್ ಮಾಡಿಕೊಂಡು ಶ್ರೀ ರೇಣುಕಾಚಾರ್ಯ ಎಂದು ಅಯೋನಿಜ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ ಪುರಾಣವನ್ನೇ ಹೊಸೆಯಲಾಗಿದೆ.

ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಲ್ಲೆಯು ಅಡಗಿಸಿಕೊಂಡಿದೆ. ಹಾಲುಮತದ ಶ್ರೀ ರೇವಣಸಿದ್ಧೇಶ್ವರನ ಮೂಲ ಗುರುಪೀಠದ ಅಸ್ಮಿತೆಗಳನ್ನು ವೀರಶೈವರು ಹೇಗೆಲ್ಲಾ ಹಾಳು ಮಾಡಿದ್ದಾರೆಂಬುದು ಸ್ವತಃ ಹಾಲುಮತ ಕುರುಬರಿಗೆ ಅರಿವಿಗಿಲ್ಲದಂತಾಗಿದೆ. ಕುರುಬರ ಇತಿಹಾಸವನ್ನು ನಾಡಿನಾದ್ಯಂತ ಪ್ರಚುರಪಡಿಸಬೇಕಾದವರು ತಮ್ಮದಲ್ಲದ ವೀರಶೈವ ಪಂಚಚಾರ್ಯರ ಇತಿಹಾಸವನ್ನು ಸಾರುವ ಸಾಂಸ್ಕೃತಿಕ ಹೇರಿಕೆಗೆ ಕುರುಬರು ಒಳಗಾಗಿದ್ದಾರೆ.

ಹಾಲುಮತ ಕುರುಬ ಸಮುದಾಯದ ಲಿಂಗದಬೀರರ ಕುಣಿತವು ವೀರಶೈವರ ಕೈವಶವಾಗಿ ಬಿನ್ನಾಯ ಮಾಡುವ ಜಂಗಮರ ಪುರವಂತಿಕೆಯಾಯಿತು. ಸಾದ ಲಿಂಗಾಯತರ ಕುಲಗುರು ಎನ್ನಿಸಿದ ವಿಶ್ವಬಂಧು ಶ್ರೀ ಮಾದಾರ ಮರುಳಸಿದ್ಧನಿಗೆ ಇದೇ ಕುರುಬ ಮೂಲದ ಶ್ರೀ ರೇವಣಸಿದ್ಧನು ಗುರುವಾಗಿದ್ದಾನೆ. ಇಂತಹ ರೇವಣಸಿದ್ಧನನ್ನು ವೀರಶೈವರು ಕಾಲ್ಪನಿಕ ಅಯೋನಿಜ ಪಂಚಾಚಾರ್ಯರ ರೇಣುಕಾಚಾರ್ಯನನ್ನಾಗಿ ಬಿಂಬಿಸಿ ಸುಳ್ಳು ಪುರಾಣ ಹೊಸೆದಿದ್ದಾರೆ. ಹೀಗೆಯೇ ಕುರುಬರ ಬೀರಲಿಂಗನು ವೀರಭದ್ರನಾಗಿ ಹಾಗೂ ಲಿಂಗದಬೀರರ ಕುಣಿತವು ವೀರಗಾಸೆಯಾಗಿ ವೀರಶೈವರಿಂದ ಉನ್ನಯನಗೊಂಡಿತು. ಹೀಗಾಗಿ ವೀರಗಾಸೆಯ ವಚನ ಪಲುಕುಗಳು ಲಿಂಗಿಬ್ರಾಹ್ಮಣರ ಶ್ಲೋಕಗಳೇ ಆಗಿರುತ್ತವೆ. ಕನ್ನಡ ಜಾಯಮಾನಕ್ಕೆ ಎರವಾಗಿ ಸಂಸ್ಕೃತದ ಸಿದ್ಧಾಂತ ಶಿಖಾಮಣಿಯ ಪ್ರಭಾವಲಯದಲ್ಲಿ ಶರಣರ ವಚನಗಳನ್ನು ಕೂಡಾ ಪ್ರಕ್ಷಿಪ್ತಗೊಳಿಸಿದ ಬ್ರಾಹ್ಮಣ್ಯವನ್ನು ನಾವಿಲ್ಲಿ ನೋಡಬಹುದು.

ಹೆಸರುಗಳೇ ಸೂಚಿಸುವಂತೆ ರೇವಣಸಿದ್ಧ ಮತ್ತು ಮರುಳಸಿದ್ಧರು ಸಿದ್ಧ ಪರಂಪರೆಗೆ ಸೇರಿದವರು. ಸಿದ್ದ ಪರಂಪರೆಯ ಸಿದ್ದರನ್ನು, ವೀರಶೈವರು ಆಚಾರ್ಯ ಪರಂಪರೆಗೆ ಪಲ್ಲಟಿಸಿಕೊಂಡಿದ್ದರಿಂದಾಗಿ ಕುರುಬರ ಕುಲಗುರು ರೇವಣಸಿದ್ಧನು ವೀರಶೈವರ ರೇಣುಕಾಚಾರ್ಯನಾಗಿದ್ದಾನೆ. ಶ್ರೀ ರೇಣುಕಾಚಾರ್ಯ ಎಂಬುವವನು
ಆಂಧ್ರಪ್ರದೇಶದಿಂದ ಬಂದ ತೆಲುಗು ಬಾಳು ಆರಾಧ್ಯ ಜಂಗಮರ ಸುಳ್ಳು ಸೃಷ್ಟಿಯ ಕಾಲ್ಪನಿಕ ನಾಯಕ. ಕುರುಬ ಜಾತಿ ಮೂಲದ ಘನಶರಣ ರೇವಣಸಿದ್ದನನ್ನು ವೀರಶೈವರು ರೇಣುಕಾಚಾರ್ಯನನ್ನಾಗಿ ಹೈಜಾಕ್ ಮಾಡಿದ್ದಾರೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಹಾಲುಮತಸ್ಥ ಕುರುಬರ ಘನಶರಣ, ಐತಿಹಾಸಿಕ ಪುರುಷ ರೇವಣಸಿದ್ಧನು ವೀರಶೈವರ ಪಾಲಿಗೆ ಅಯೋನಿಜ ಹುಟ್ಟಿನಲ್ಲಿ ಪೌರಾಣಿಕ, ಕಾಲ್ಪನಿಕ ರೇಣುಕಾಚಾರ್ಯ ಎಂಬ ಹೆಸರಿನ ಗುರುವಾಗುತ್ತಾನೆ. ಸರಳ ಕೌಪೀನ- ಲಂಗೋಟಿ- ಪುಟಗೋಸಿ ಧರಿಸಿದ ಸಿದ್ಧ ಪರಂಪರೆಯ
ಇಷ್ಟಲಿಂಗಧಾರಿಯಾದ ರೇವಣಸಿದ್ಧನು, ಆಡಂಭರದ ಪಟ್ಟೆ ಪೀತಾಂಬರ ಒಡವೆ ವೈಡೂರ್ಯಗಳನ್ನು ಧರಿಸಿದ ಸ್ಥಾವರ ಲಿಂಗಧಾರಿಯಾದ ರೇಣುಕಾಚಾರ್ಯನಾಗಿ ಬದಲಾಗುತ್ತಾನೆ. ದ್ರಾವಿಡ ಜನಭಾಷೆಯ ಕನ್ನಡ ವಚನಪಾಲಕ ಶರಣ ಪಥಿಕನು ವೀರಶೈವರ ಕೈಗಳಲ್ಲಿ ಪ್ರಭುತ್ವ ಸಂಸ್ಕೃತ ಭಾಷೆಯ ವೇದಾಗಮಶಾಸ್ತ್ರ ಪಾಲಕನಾಗಿ ಆರ್ಯ ಪಥಿಕನಾಗುವುದು ಒಂದು ಮಹಾ ಮೋಸವೇ ಸರಿ.

ಸಿದ್ಧ ಪರಂಪರೆಯ ಲಿಂಗವಂತ ಸಾಧಕನಾದ ರೇವಣಸಿದ್ಧನು ವೀರಶೈವರ ‘ಸಿದ್ಧಾಂತ ಶಿಖಾಮಣಿ’ ಎಂಬ ಸಂಸ್ಕೃತ ಗ್ರಂಥದಲ್ಲಿ ರೇಣುಕಾಚಾರ್ಯನಾಗಿ ಚಿತ್ರಣಗೊಂಡಿದ್ದಾನೆ. ವಾಸ್ತವವಾಗಿ ರೇವಣಸಿದ್ಧನು ಯಾವುದೇ ಮಠವಿಲ್ಲದೆ ಕೊಲ್ಲಿಪಾಕಿಯ ಬೆಟ್ಟದ ಕಲ್ಲುಗವಿಯಲ್ಲಿ ತಪಸ್ಸಾಧನೆ ಮಾಡುತ್ತಾ ಮಹಾಚಾರಣಿಗನಾಗಿ ತನ್ನ ಶಿಷ್ಯನಾದ ಮಾದಿಗರ ಮರುಳಸಿದ್ಧನ ಜೊತೆಗೂಡಿ ಕರ್ನಾಟಕದ ದಕ್ಷಿಣಕ್ಕೆ ಬರುತ್ತಾನೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟ ಬೂದಗವಿ ಮತ್ತು ರಾಮನಗರ ಜಿಲ್ಲೆಯ ರಾಮನಗರ ಹತ್ತಿರದ ಅವ್ವೇರಹಳ್ಳಿಯ ರೇವಣಸಿದ್ಧೇಶ್ವರ ಬೆಟ್ಟದ ಗವಿಗಳು ರೇವಣಸಿದ್ಧನು ತಪಸ್ಸಾಧನೆ ಮಾಡಿದ ಗವಿಗಳಾಗಿ ಪ್ರಸಿದ್ಧಿ ಪಡೆದಿವೆ. ಇಂತಹ ಸಾಧಕ ಸಿದ್ಧನಾದ ರೇವಣಸಿದ್ಧನು ವೀರಶೈವರ ಸುಳ್ಳು ಸೃಷ್ಟಿಯ ಕಥನಗಳ ಪ್ರಕಾರ ಕೊಲ್ಲಿಪಾಕಿಯ ಸೋಮೇಶ್ವರ ಗುಡಿಯ ಸ್ಥಾವರಲಿಂಗದಲ್ಲಿ ಅಯೋನಿಜನಾಗಿ ಉದ್ಭವಿಸಿ ಬಂದು ವೀರಶೈವ ಪಂಚಾಚಾರ್ಯರ ಪ್ರಮಥ ಜಗದ್ಗುರುವಾಗುತ್ತಾನೆ. ಇಂತಹ ಅಯೋನಿಜ ಜನನದ ಕಲ್ಪನೆಯನ್ನು ಬಸವಣ್ಣನವರು, “ಕರ್ಣದೊಳಗೆ ಜನಿಸಿದವರುಂಟೇ ಜಗದೊಳಗೆ ?” ಎಂದು ಪ್ರಶ್ನಿಸುತ್ತಾರೆ. ಸಿದ್ಧ ಸಿದ್ಧರಿಗೆಲ್ಲಾ ಘನಸಿದ್ಧನಾದ ಐತಿಹಾಸಿಕ ಪುರುಷ ರೇವಣ ಸಿದ್ಧನನ್ನು ಹಾಲುಮತ ಕುರುಬ ಸಮುದಾಯದವರು ತಮ್ಮ ಕುಲಗುರುವೆಂದು ಹೇಳಿಕೊಳ್ಳುತ್ತಿರುವಾಗಲೇ ವೀರಶೈವರ ಕಾಲ್ಪನಿಕ ಜಗದ್ಗುರು ರೇಣುಕಾಚಾರ್ಯನ ಹೆಸರನ್ನು ಅತ್ಯಂತ ಮುಗ್ಧತೆಯಿಂದ ಜಪಿಸುತ್ತಿದ್ದಾರೆ.

ಈ ತಾಮ್ರಬಿಲ್ಲೆಯು,
“ಶ್ರೀಮತ್ಕುರುಬ ಮತ ಸ್ಥಾಪಕ ಶ್ರೀ ರೇಣುಕಾಚಾರ‌್ಯ ವಂಶೀಯ ಶ್ರೀ ಸರವೂರ ಮಹಾಸಂಸ್ಥಾನ ಶಾಖಾ, ಶ್ರೀ ಅಣತಿ ಮಠ ಸಿಂಹಾಸನ, ಮೈಸೂರು ದೇಶ- ೧೦೯” ಎಂದು ಹೇಳುತ್ತದೆ. ಇಲ್ಲಿ ಕುರುಬ ಕುಲದ ಸ್ಥಾಪಕ ಶ್ರೀ ರೇಣುಕಾಚಾರ‌್ಯ ಎಂದು ಹೇಳಲಾಗಿದೆಯೇ ಹೊರತು ಅಸಲಿ ಕುರುಬರ ಕುಲಗುರು ರೇವಣಸಿದ್ಧನ ಹೆಸರು ಇರುವುದಿಲ್ಲ. ಮೈಸೂರು ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಕರ್ನಾಟಕವನ್ನು ಮೈಸೂರು ದೇಶ ಎಂದು ಕರೆಯಲಾಗಿದೆ. ಆ ಕಾಲದ ಮೈಸೂರು ಒಡೆಯರು ಅಣತಿ ಮಠಕ್ಕೆ ನೀಡಿದ್ದ ೧೦೯ ನೇ ಸಂಖ್ಯೆಯ ತಾಮ್ರದ ಸರ್ಕೀಟು ಬಿಲ್ಲೆ ಇದು. ಇಂತಹ ಬಿಲ್ಲೆಗಳನ್ನು ಯಾವ ಯಾವ ಮಠಗಳಿಗೆ ಒದಗಿಸಲಾಗಿತ್ತೋ ಅಂತಹ ಮಠಗಳಿಗೆ ರಾಜಮರ್ಯಾದೆಯೂ ಇರುತ್ತಿತ್ತು. ಹಾಲುಮತ ಕುಲಗುರು ಶ್ರೀ ರೇವಣಸಿದ್ಧೇಶ್ವರನ ಅಣತಿ ಮಠ ಮೈಸೂರು ಒಡೆಯರ ಕಾಲದಲ್ಲಿ ರಾಜಮರ್ಯಾದೆಗೆ ಪಾತ್ರವಾಗಿತ್ತು. ಈಗ ಕುರುಬರ ಕುಲಗುರು ಶ್ರೀ ರೇವಣಸಿದ್ಧನೇ ಹೊರತು ವೀರಶೈವ ಪಂಚಾಚಾರ್ಯರ ಶ್ರೀ ರೇಣುಕಾಚಾರ್ಯನಲ್ಲ ಎಂಬುದನ್ನು ಮನಗಾಣುವಂತಾಗಲಿ…

(ಡಾ.ವಡ್ಡಗೆರೆ ನಾಗರಾಜಯ್ಯ
8722724174)

LEAVE A REPLY

Please enter your comment!
Please enter your name here