ಬೆಂಗಳೂರು ನಗರ ಜಿಲ್ಲೆ, ಅಕ್ಟೋಬರ್ 08 : ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ಪೂರ್ವ ವತಿಯಿಂದ “ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ರೂ.24,000/- ಗಳ ಸ್ಕಾಲರ್ ಶೀಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೆ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂದು ಅಧಿಕೃತ ಸಹಿ ಇಲ್ಲದ ಅರ್ಜಿಯು ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿದಾಡುತ್ತಿರುವ ‘ಸುಳ್ಳು ಸುದ್ದಿ’ ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದ್ದು ಸಾರ್ವಜನಿಕರು ವಿವಿಧ ಕಚೇರಿಗಳಿಗೆ ಅರ್ಜಿಗಾಗಿ ಅಲೆದಾಡುತ್ತಿರುವುದು ಕಂಡುಬಂದಿರುತ್ತದೆ. ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಯೋಜನೆಯು ಎಲ್ಲಾ ತಂದೆ ಇಲ್ಲದ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಈ ಯೋಜನೆಯ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕು, ಯೋಜನೆಯಲ್ಲಿ ಫಲಾನುಭವಿಯಾಗಲು ನಿರ್ದಿಷ್ಟ ಮಾನದಂಡಗಳು ಅನ್ವಯವಾಗಲಿವೆ. ಪ್ರಾಯೋಜಕತ್ವ ಯೋಜನೆಯ ಮಾನದಂಡಗಳಾದ ತಾಯಿ ವಿಧವೆ ಅಥವಾ ವಿಚ್ಛೇದಿತೆ ಅಥವಾ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ. ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತೃತ ಕುಟುಂಬದೊಡನೆ ಜೀವಿಸುತ್ತಿದ್ದರೆ. ಪೋಷಕರು ಜೀವಕ್ಕೆ ಬೆದರಿಕೆಯೊಡ್ಡುವ / ಗಂಭೀರ ಸ್ವರೂಪದ ಖಾಯಿಲೆಯ ಸಂತ್ರಸ್ತರಾಗಿದ್ದರೆ. ಪೋಷಕರು ಆಶಕ್ತರಾಗಿದ್ದರೆ ಅಥವಾ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ಹಾಗೂ ದೈಹಿಕವಾಗಿ ಅಸಮರ್ಥವಾಗಿದ್ದರೆ. ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಪ್ರಕಾರ ಮಕ್ಕಳು ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿದ್ದರೆ, ಅಂದರೆ ವಸತಿರಹಿತರು, ಯಾವುದಾದರೂ ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಬಾಲಕಾರ್ಮಿಕರು, ಬಾಲ್ಯವಿವಾಹದ ಸಂತ್ರಸ್ತರು, ಮಾನವ ಕಳ್ಳಸಾಗಾಣೆ ಸಂತ್ರಸ್ತರು, ಹೆಚ್ ಐವಿ/ಏಡ್ಸ್ ಪರಿಣಾಮ ಪೀಡಿತ ಮಗು, ವಿಶೇಷ ಚೇತನ ಮಗು. ತಪ್ಪಿಸಿಕೊಂಡಿರುವ ಅಥವಾ ಓಡಿಬಂದಿರುವ ಮಗು, ಬಿಕ್ಷಾಟನೆ ಅಥವಾ ಬೀದಿಯಲ್ಲಿ ವಾಸಿಸುತ್ತಿರುವ ಮಗು. ಬೆಂಬಲ ಹಾಗೂ ಪುನರ್ವಸತಿಯ ಅಗತ್ಯವಿರುವಂತಹ ಹಿಂಸೆಗೊಳಪಟ್ಟ ಅಥವಾ ನಿಂದನೆ ಅಥವಾ ಶೋಷಿತ ಮಕ್ಕಳು ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಭಿಕ್ಷಾಟನೆ ಮಾಡುತ್ತಿರುವ ಮಕ್ಕಳು, ಬಾಲಕಾರ್ಮಿಕ ಮಕ್ಕಳು, ಕಾಣೆಯಾದ ಮಕ್ಕಳು, ಒಂಟಿಯಾಗಿ ಆಳುತ್ತಿರುವ ಮಕ್ಕಳು, ಮಾದಕವ್ಯಸನಿ ಮಕ್ಕಳು, ಪರಿತ್ಯಕ್ತ ಮಕ್ಕಳು, ಬಾಲ್ಯವಿವಾಹದ ಮಕ್ಕಳು, ಹಿಂಸೆ & ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು. ಶಿಕ್ಷಣ ವಂಚಿತ ಮಕ್ಕಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098/112 ಗೆ ಕರೆಮಾಡಬಹುದು.