ಬೆಂಗಳೂರು ನಗರ ಜಿಲ್ಲೆ, ಅಕ್ಟೋಬರ್ 02: ಅಸಾಮಾನ್ಯ ಎಂದೆನಿಸಿರುವ ಸತ್ಯ ಅಹಿಂಸೆ ಮತ್ತು ಸರಳತೆ ಮಾರ್ಗದಲ್ಲಿ ಬದುಕಲು ಸಾಧ್ಯವೆಂದು ತೋರಿಸಿ, ತನ್ಮೂಲಕ ಜೀವನದ ಅತ್ಯುನ್ನತ ಅದರ್ಶಗಳ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದವರು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ, ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ ದಯಾನಂದ ಅವರು ಹೇಳಿದರು.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 155ನೇ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಸ್ವಚ್ಚತಾ ಪ್ರತಿಜ್ಞೆ ಬೋಧಿಸಿದರು.
ಆಲ್ಬರ್ಟ್ ಐನ್ ಸ್ಟೀನ್, ನೆಲ್ಸನ್ ಮಂಡೇಲಾ ಅಂತಹವರಿಗೆ ಆದರ್ಶಪ್ರಾಯರಾದ ಗಾಂಧೀಜಿ ಅವರ ತತ್ವಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ ಜಿಲ್ಲಾಧಿಕಾರಿಗಳು ಅಸ್ತ್ರ-ಶಸ್ತ್ರಗಳನ್ನು ಬದಿಗೊತ್ತಿ ಸತ್ಯ ಮತ್ತು ಅಹಿಂಸೆ ಮಾರ್ಗದ ಮೂಲಕ ಭಾರತವನ್ನು ಸ್ವಾತಂತ್ರ್ಯದೆಡೆಗೆ ಮುನ್ನಡಿಸಿದವರು ಮಹಾತ್ಮ ಗಾಂಧಿ ಎಂದು ತಿಳಿಸಿದರು.
ತಮ್ಮ ಪತ್ನಿ ಕಸ್ತೂರ ಬಾ ಅವರಿಂದ ಸತ್ಯಾಗ್ರಹವು ಗುರಿ ಸಾಧನೆಯ ಒಂದು ಪ್ರಬಲ ಆಸ್ತ್ರ ಎಂದು ಅರಿತ ಮಹಾತ್ಮ ಗಾಂಧಿ ಅವರು ಅಸಹಕಾರ ಚಳವಳಿ, ಸ್ವದೇಶಿ ಚಳವಳಿ ಮೂಲಕ ವಸಾಹತುಶಾಹಿ ಬ್ರಿಟೀಷ್ ಆಳ್ವಿಕೆಯ ಅಡಿಪಾಯವನ್ನೇ ಬುಡಮೇಲು ಮಾಡಲು ಜನರಲ್ಲಿ ಕಿಚ್ಚನ್ನು ಹಚ್ಚಿದರು.
ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರ ನಡುವೆ ಆದ್ಯತೆಗಳ ಭಿನ್ನಾಭಿಪ್ರಾಯ ಇತ್ತೆ ಹೊರತು ವೈಚಾರಿಕ ವೈರುದ್ಯ ಇರಲಿಲ್ಲ, ಇದನ್ನು ಇತಿಹಾಸ ಓದಿದವರಿಗೆ ಮಾತ್ರ ತಿಳಿದುಕೊಳ್ಳಲು ಸಾಧ್ಯ. ಸಾಮಾಜಿಕ ಮಾಧ್ಯಮಗಳಲ್ಲಿ ಆಳೆದಾಡುವ ಸಂದೇಶಗಳು ಈ ವೈಚಾರಿಕ ಜ್ಞಾನವನ್ನು ನೀಡಲು ವಿಫಲವಾಗಿದ್ದು, ಪುಸ್ತಕ, ಗ್ರಂಥಗಳನ್ನು ಓದಿ ಸತ್ಯವನ್ನು ಅರಿತುಕೊಂಡು ಜ್ಞಾನ ಬೆಳಸಿಕೊಳ್ಳವಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಅವರು ಆಗ್ರಹಿಸಿದರು.
ಕಾಣದ ದೈವವನ್ನು ಆರಾಧಿಸುವ ಬದಲು ಒಳ್ಳೆಯ ಕೆಲಸವನ್ನು ಮಾಡುತ್ತಾ ಸತ್ಯ, ಅಹಿಂಸೆಯ ಸನ್ಮಾರ್ಗಗಳಲ್ಲಿ ನಡೆದು ತನ್ನಂತೆಯೇ ಇತರರನ್ನು ಪ್ರೀತಿ ಗೌರವದಿಂದ ಕಾಣುವ ಮೂಲಕ ಪ್ರತಿಯೊಬ್ಬರೂ ತನ್ನಲ್ಲಿಯೇ ದೈವತ್ವವನ್ನು ಕಾಣುವ ಪ್ರಯತ್ನವನ್ನು ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲೆ ವಿಭಾಗದ ಹರ್ಷಿಣಿ.ಎಂ- ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಆನೇಕಲ್ (ಪ್ರಥಮ), ಮಿಲನ್ ಗೌಡ.ವಿ– ಶ್ರೀ ವಿದ್ಯಾಮಂದಿರ ಶಿಕ್ಷಣ ಸಂಸ್ಥೆ, (ದ್ವಿತೀಯ), ಶಿವಮ್ಮ.ಎಸ್- ಶ್ರೀ ವೀರಭದ್ರಪ್ಪ ಪ್ರೌಢಶಾಲೆ, ವಿಭೂತಿಪುರ, (ತೃತೀಯ) ಸ್ಥಾನ., ಪದವಿ ಪೂರ್ವ ವಿಭಾಗದ ರಕ್ಷಿತಾ.ಜಿ- ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲ್ಲೇಶ್ವರಂ (ಪ್ರಥಮ), ನಿಶಾ.ಡಿ– ಕೃಪಾನಿಧಿ ಪದವಿ ಪೂರ್ವ ಕಾಲೇಜು, ಕೋರಮಂಗಲ (ದ್ವಿತೀಯ), ದಿವ್ಯ.ಎಸ್- ಸರ್ಕಾರಿ ಪದವಿ ಪೂರ್ವ ಕಾಲೇಜು, ಆನೇಕಲ್, (ತೃತೀಯ) ಸ್ಥಾನ., ಪದವಿ/ಸ್ನಾತಕೋತ್ತರ ವಿಭಾಗದ ಚಂದನ.ಎಲ್- ಎಂ.ಎ. ಆಂಗ್ಲ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ (ಪ್ರಥಮ), ಅಭಿಷೇಕ್.ಎಸ್– ಪ್ರಥಮ ಬಿ.ಎ. ಸರ್ಕಾರಿ ಕಲಾ ಕಾಲೇಜು (ದ್ವಿತೀಯ), ಚಿತ್ರ.ಪಿ- ಸರ್ಕಾರಿ ಪಥಮ ದರ್ಜೆ ಕಾಲೇಜು, ಯಲಹಂಕ (ತೃತೀಯ) ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಗಾಂಧೀಜಿ ಅವರ ಅದರ್ಶಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ತಮ್ಮ ಇಲಾಖೆಯಿಂದ ಗಾಂಧೀಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ತಮ್ಮ ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಗಾಂಧಿ ತತ್ವಗಳನ್ನು ಬೋಧಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಗಾಂಧಿ ತತ್ವಗಳನ್ನು ಆಳವಡಿಸಿಕೊಂಡು ನಾಳಿನ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಇದು ಅನುಕೂಲ ಮಾಡಿಕೊಡಲಿದೆ ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. (ಆಂಗ್ಲ) ವಿಭಾಗದ ವಿದ್ಯಾರ್ಥಿಯಾದ ಚಂದನ ಎಲ್ ರವರು “ಗಾಂಧೀಜಿಯವರ ಜೀವನವೇ ಒಂದು ಸಂದೇಶವಾಗಿದೆ. ನಾವೆಲ್ಲರೂ ನಾವು ಮಾಡಿದ ತಪ್ಪುಗಳನ್ನು ಮುಚ್ಚು ಮರೆ ಮಾಡುತ್ತೇವೆ. ಆದರೆ, ಗಾಂಧೀಜಿಯವರ ತಾವು ಮಾಡಿದ ತಪ್ಪುಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿರುತ್ತಾರೆ. ಹಿಂಸೆಯಿಂದ ಎಲ್ಲಾ ವಿಷಯಗಳನ್ನು ಗೆಲ್ಲಲು ಸಾಧ್ಯವಿಲ್ಲ, ಗಾಂಧಿಜೀಯವರಂತೆ ಅಹಿಂಸೆ ಮಾರ್ಗವನ್ನು ಅನುಸರಿಸಿ ಸರಳ ಜೀವನ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಅಪರ ಜಿಲ್ಲಾಧಿಕಾರಿಗಳಾದ ಡಾ.ಜಗದೀಶ್ ನಾಯಕ್, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕರಾದ ಮಾಧವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.